

ಚಿಂತಾಮಣಿ: ತಾಲೂಕಿನ ಚಿಲಕಲನೇರ್ಪು ಹೋಬಳಿ ಮಿಟ್ಟಿಹಳ್ಳಿಯಲ್ಲಿ ಮಂಗಳವಾರ ಭೂಮಿ ಕಂಪಸಿದ ಬಳಿಕ ಶನಿವಾರ ಸಂಜೆ ಹಾಗೂ ಭಾನುವಾರ ಬೆಳಗ್ಗೆ ಹಲವು ಬಾರಿ ಭಾರಿ ಶಬ್ದದೊಂದಿಗೆ ಭೂಮಿ ಮತ್ತೆ ಕಂಪನಿಸಿರುವುದು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ. ಶನಿವಾರ ಸಂಜೆ 7 ಗಂಟೆಯಲ್ಲಿ ಮೊದಲ ಬಾರಿ ಭೂಮಿ ಕಂಪಿಸಿತು. ರಾತ್ರಿ 9.25ಕ್ಕೆ ಮತ್ತೊಮ್ಮೆ ಜೋರು ಶಬ್ದ ಕೇಳಿಬಂದಿತು. ಭಾನುವಾರ ಬೆಳಗಿನಜಾವ ಮತ್ತೊಮ್ಮೆ ಕಂಪನದ ಜತೆಗೆ ಭಾರಿ ಶಬ್ದ ಕೇಳಿಬಂದಿತು ಎಂದು ಗ್ರಾಮಸ್ಥರು ಹೇಳಿದರು.
ಮಂಗಳವಾರಕ್ಕಿಂತ ಜೋರಾಗಿದ್ದ ಶಬ್ದ: ಮಿಟ್ಟಹಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಳೆದ ಮಂಗಳವಾರ ಕೇಳಿ ಬಂದಿದ್ದಕ್ಕಿಂತ ಶನಿವಾರ ರಾತ್ರಿ ಭೂಮಿ ಕಂಪನಿಸುವಾಗಿನ ಶಬ್ಧ ಜೋರಾಗಿತ್ತು. ಮನೆಯಿಂದ ಹೊರ ಬಂದು ರಸ್ತೆ, ದೇಗುಲಗಳ ಮುಂಭಾಗ ಮತ್ತಿತರ ತೆರೆದ ಪ್ರದೇಶಗಳಲ್ಲಿ ಜನರು ಬೀಡುಬಿಟ್ಟಿದ್ದರು. ರಾತ್ರಿ ವೇಳೆ ಮಳೆ ಹೆಚ್ಚಾದ ಬಳಿಕ ಭಯದಿಂದಲೇ ಮನೆಗಳಿಗೆ ಮರಳಿದ್ದಾಗಿ ತಿಳಿಸಿದರು.
ಏರ್‌ಬ್ಲಾಸ್ಟ್‌ನಿಂದ ಶಬ್ಧ: ಕಳೆದ ಬಾರಿ ಭೂ ಕಂಪನವಾದಾಗ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ, ಸಂಸದರು, ಚಿಂತಾಮಣಿ ಶಾಸಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ರಾಜ್ಯ ನೈಸರ್ಗಿಕ ವಿಪತ್ತು ವಾನಿಟರಿಂಗ್ ಸೆಲ್ ಹಿರಿಯ ವಿಜ್ಞಾನಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಭೂಕಂಪನ ವಾಪನ ಕೇಂದ್ರದ ಅಂಕಿ-ಅಂಶಗಳ ಪ್ರಕಾರ ಭೂಕಂಪದ ಸುಳಿವು ಸಿಕ್ಕಿಲ್ಲ. ಗ್ರಾಮದ ಸುತ್ತಮುತ್ತ 350ಕ್ಕೂ ಹೆಚ್ಚು ವಿಫಲ ಕೊಳವೆಬಾವಿಗಳಿವೆ. ಅವುಗಳಿಗೆ ಜಲ ಮರುಪೂರ್ಣವಾದಾಗ ಏರ್‌ಬ್ಲಾಸ್ಟ್‌ನಿಂದ ಶಬ್ದ ಬಂದಿರಬಹುದು ಎಂದು ಸಮಜಾಯಿಷಿ ನೀಡಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದರು. ಕಳೆದ ಗುರುವಾರ ಮತ್ತು ಶುಕ್ರವಾರ ಕಂಪನದ ತೀವ್ರತೆ ಕಡಿಮೆಯಾಗಿತ್ತು.
ಹಲವು ಗ್ರಾಮಗಳಲ್ಲಿ ಭೂಮಿ ಕಂಪನ: ಕೆಂಚಾರ‌್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಿಟ್ಟಹಳ್ಳಿ, ಅಪ್ಪಸಾನಹಳ್ಳಿ, ನಂದನವನ, ಕೊಮ್ಮೆಪಲ್ಲಿ, ಗೋನೇಪಲ್ಲಿ, ಅನಪಲ್ಲಿ, ರಾಸಪಲ್ಲಿ, ಗೌಡನಹಳ್ಳಿ, ದೊಡ್ಡಿಪಲ್ಲಿ, ವೆಂಕಟರೆಡ್ಡಿಪಾಳ್ಯ ಮತ್ತಿತರ ಗ್ರಾಮಗಳಲ್ಲಿ ಶನಿವಾರ ರಾತ್ರಿ 9.25ಕ್ಕೆ ಭೂಮಿ ಕಂಪನಿಸಿದ್ದಲ್ಲದೆ, ಭಾರಿ ಶಬ್ದ ಕೇಳಿಬಂದಿದೆ.
ಸ್ಥಳಾಂತರಕ್ಕೆ ಗ್ರಾಮಸ್ಥರ ಪಟ್ಟು: ಒಂದು ವಾರದಿಂದ ಆತಂಕದಲ್ಲೇ ದಿನ ದೂಡುತ್ತಿರುವ ಗ್ರಾಮಸ್ಥರು, ಅಧಿಕಾರಿಗಳು ಗ್ರಾಮದಲ್ಲಿ ಹಗಲು-ರಾತ್ರಿ ವಾಸ್ತವ್ಯ ಹೂಡುವಂತೆ ಆಗ್ರಹಿಸಿದರು. ಅಲ್ಲದೆ ತಮ್ಮನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ರಾತ್ರಿಯೇ ತಹಸೀಲ್ದಾರ್ ಡಿ. ಹನುಮಂತರಾಯಪ್ಪ, ಕೆಂಚಾರ‌್ಲಹಳ್ಳಿ ಪಿಎಸ್‌ಐ ನಾರಾಯಣಪ್ಪ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಲ್ಲದೆ ಭಾನುವಾರ ಬೆಳಗ್ಗೆ ಗ್ರಾಮದಲ್ಲಿ ಮೊಕ್ಕಾಂ ಹೂಡಿದ್ದರು.