ಗುಮ್ಮಟ ನಗರಿ ಗಡಗಡ!

VIj
Published on

ವಿಜಯಪುರ: ಕಳೆದ ನಾಲ್ಕು ತಿಂಗಳಿನಿಂದ ಭಯ ಬೀಳಿಸಿದ್ದ ಭೂಮಿ‌ ಕಂಪನದ ಅನುಭವ ಇದೀಗ ಗುಮ್ಮಟ ನಗರಿ ವಿಜಯಪುರವನ್ನು ಗಡಗಡ ಎನ್ನುವಂತೆ ಮಾಡಿದೆ. ವಿಜಯಪುರ ನಗರದಲ್ಲಿ ಇಂದು ಬೆಳಗಿನ ಜಾವ ಕೇಳಿಸಿದ ಭಾರೀ ಸದ್ದು, ಇದ್ದಕ್ಕಿದ್ದಂತೆ ನಡುಗಿದ ಭೂಮಿಯಿಂದ ಭೂಕಂಪ ಆಗಿದೆ ಎನ್ನುತ್ತಿದ್ದಾರೆ ಜನ್ರು.

ವಿಜಯಪುರದ ಅರ್ಧ ಭಾಗದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದ್ದು, ವಿಜಯಪುರ ನಗರ ಫುಲ್ ಶೇಕ್ ಶೇಕ್ ಆಗಿದೆ. ವಿಜಯಪುರದ ಆನಂದನಗರ, ಕಾಳಿಕಾನಗರ, ಮುಕುಂದನಗರ, ಗಚ್ಚಿನಕಟ್ಟಿ ಕಾಲೋನಿ ಸೇರಿದಂತೆ ಹಲವೆಡೆ ಭೂಕಂಪ ಆದ ಅನುಭವ ಆಗಿದೆ. ಕಳೆದ ತಡರಾತ್ರಿ ಹಾಗೂ ಇಂದು ಬೆಳಗಿನ ಜಾವ ಐದು ಗಂಟೆಗೆ ಸೇರಿ ಎರಡು ಬಾರಿ ಭೂಮಿ ಕಂಪಿಸಿದ ಅನುಭವ ಇಲ್ಲಿನ ಜನರಿಗೆ ಆಗಿದೆ. ಭೂಮಿ ಕಂಪಿಸಿದ ಅನುಭವಕ್ಕೆ ಪಾತ್ರೆಗಳು ಅಲ್ಲಾಡಿದ್ರೆ, ಮನೆಯ ಮೇಲ್ಛಾವಣಿಯ ಶೀಟ್(ತಗಡು) ಹಾಗೂ ಕಿಟಕಿಗಳು ಒಂದಕ್ಕೊಂದು ತಾಗಿ ಬಡಿದಾಡಿವೆ. ಅಲ್ಲದೆ ಒಂದೆರಡು ಮನೆಗಳಲ್ಲಿ ಹಾಗೂ ನೀರಿನ ಟ್ಯಾಂಕ್ ನಲ್ಲಿ ಕೂಡ ಬಿರುಕು ಕಾಣಿಸಿಕೊಂಡಿದೆ. ವಿವಿಧ ಬಡಾವಣೆಯ ಜನ್ರಲ್ಲಿ ಆತಂಕ ಮೂಡಿದೆ.

ಇನ್ನು ಘಟನೆ ಸಂಭವಿಸಿದ ಬಳಿಕ ಇದುವರೆಗೂ ಸ್ಥಳಕ್ಕೆ ಬಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಕರೆ ಮಾಡಿದ್ರೂ ಸ್ಪಂದಿಸುತ್ತಿಲ್ಲವಂತೆ. ಸಂಭಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ವಿಜಯಪುರ ಜಿಲ್ಲೆಯ ಜನ್ರಲ್ಲಿ ಭೂಕಂಪನದ ಭಯ ಶುರುವಾಗಿದೆ. ಸೆಪ್ಟೆಂಬರ್, ಅಕ್ಟೋಬರ್ ಹಾಗೂ ನವ್ಹೆಂಬರ್ ತಿಂಗಳಿನಲ್ಲಿಯೂ ಸಹ ಭೂಮಿ ಕಂಪಿಸಿದ ಅನುಭವ ಆಗಿತ್ತು. ಬಸವನ ಬಾಗೇವಾಡಿ, ಕೊಲ್ಹಾರ, ಬಬಲೇಶ್ವರ ತಾಲೂಕಿನ ವಿವಿಧೆಡೆ ಭೂಮಿ‌ ಕಂಪಿಸಿತ್ತು. ಕಳೆದ‌ ನಾಲ್ಕು ತಿಂಗಳಿನಿಂದ ವಿವಿಧ ತಾಲೂಕುಗಳಲ್ಲಿ ಆತಂಕ‌ ಮನೆಮಾಡಿತ್ತು. ಇಂದು ವಿಜಯಪುರ ನಗರದಲ್ಲೇ ಭೂಮಿ ಕಂಪಿಸಿದ್ದು, ಸಂಭಂದಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ‌ ನಡೆಸುವ ಅಗತ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net