

ಹಾಸನ: ಯಮ ಮಳೆ, ಸುಂಟರಗಾಳಿ, ಕಾಳ್ಗಿಚ್ಚು, ಹಿಮ ಕುಸಿತ, ಬರಗಾಲ ರೂಪದಲ್ಲಿ ಭೂಮಿಯೇ ನಾಳಿನ ಆತಂಕಗಳ ಬಗ್ಗೆ ಮಾತನಾಡುತ್ತಿದ್ದರೂ, ಕೇಳಿಸಿಕೊಳ್ಳುವ ವ್ಯವದಾನ ಯಾರಿಗೂ ಇಲ್ಲ ಎಂದು ಹಿರಿಯ ಪರಿಸರವಾದಿ ನಾಗೇಶ್ ಹೆಗಡೆ ಕಳವಳ ವ್ಯಕ್ತಪಡಿಸಿದರು.
ನಗರದ ಕಲಾಭವನದಲ್ಲಿ ನಡೆಯುತ್ತಿರುವ ಹಾಸನ ಸಾಹಿತ್ಯೋತ್ಸವದ 2ನೇ ದಿನದ 6ನೇ ಗೋಷ್ಠಿ ‘ನಾಳೆಗಳು ನಮಗಿರಲಿ’ ವಿಚಾರ ಕುರಿತು ಮಾತನಾಡಿದ ಅವರು, 2024 ಭೀಕರ ವರ್ಷ ಎಂದು ದಾಖಲಾಗಿದೆ. ದೇಶದಲ್ಲೂ ಯಮುನಾ ದಿನ ಉಕ್ಕಿ ಹರಿಯಿತು. ಸೇತುವೆ ಕುಸಿದರೂ ನಮಗೆ ಗೊತ್ತಾಗಲಿಲ್ಲ. ನಾಳೆಯ ಭೀಕರತೆ ಬಗ್ಗೆ ಎಲ್ಲರೂ ಚಿಂತೆ ಮಾಡಲೇಬೇಕಿದೆ. ಸಾಹಿತ್ಯವಲಯವೂ ಈ ಬಗ್ಗೆ ಚಿತ್ತ ಹರಿಸಿಲ್ಲ. ವಾತಾವರಣ ಬದಲು, ಹವಾಗುಣದ ಬಗ್ಗೆ ಕತೆ, ಕಾದಂಬರಿ ಬರೆದಿಲ್ಲ. ಗ್ರಾಮೀಣ, ನಗರ ಹೀಗೆ ಎರಡು ಕತ್ತಲೆ ಮಧ್ಯೆ ಬದುಕುತ್ತಿರುವ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಮತ್ತೊಂದು ವಿಪರ‌್ಯಾಸ ಎಂದರೆ ಭೂಮಿ ಇಷ್ಟೊಂದು ಸಂಕಟ ಪಡುತ್ತಿದ್ದರೂ, ಅಧಿಕಾರಿಗಳಾಗಲೀ, ರಾಜಕಾರಣಿಗಳಾಗಲೀ ಮಾತನಾಡುತ್ತಿಲ್ಲ. ನಮ್ಮವರೇ ಆದ ನ್ಯಾ.ಸಂತೋಷ್ ಹೆಗಡೆ ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿದ್ದಾಗ, ಇಡೀ ಭಾರತದಲ್ಲಿ ಪರಿಸರ ಶಿಕ್ಷಣ ಕೊಡಬೇಕು ಎಂದು ಆದೇಶ ಮಾಡಿದರು. ಆದರೂ ಜಾರಿಯಾಗಲಿಲ್ಲ. ಭೂಮಿಯ ತಾಪಮಾನ ಏರುತ್ತಲೇ ಇದೆ. ಆದರೂ, ಭೂಮಿ, ಅರಣ್ಯ, ನದಿ ಧ್ವಂಸ ಮಾಡಿದ್ದೇವೆ. ಮಾಡುತ್ತಲೇ ಇದ್ದೇವೆ. ದೊಡ್ಡ ಸಂಕಟ ಬರುವ ಮುಂಚೆ ದೇಶವನ್ನು ಖಂಡಾಬಟ್ಟೆ ಮಾಡಿದ್ದೇವೆ. ಹಲವು ರೋಗಗಳನ್ನು ಸೃಷ್ಟಿ ಮಾಡಿದ್ದೇವೆ ಎಂದು ಆತಂಕ ಹೊರ ಹಾಕಿದರು.
ಭರವಸೆ, ಅವಕಾಶ ದುರುಪಯೋಗ ಮಾಡಿಕೊಳ್ಳುವ ಅವಕಾಶದ ದುರುಪಯೋಗ ಎಲ್ಲ ಕಡೆ ಆಗುತ್ತಿದೆ. ಮಕ್ಕಳ ಮೂಲಕವೂ ಭೂಮಿ, ಪರಿಸರ ದುರಪಯೋಗ, ಪ್ಲಾಸ್ಟಿಕ್ ದುರ್ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಮನುಷ್ಯರಿಗೆ ಊಟ, ಬಟ್ಟೆ ಅನಿವಾರ್ಯ. ಇದಕ್ಕಾಗಿ ರೈತರು ಆಹಾರ ಬೆಳೆಯಬೇಕು. ಹತ್ತಿ ಬೆಳೆಯಬೇಕು. ಆದರೀಗ ಕೈಗಾರಿಗೆ ಬಂದು ಕೃತಕ ಆಹಾರ ತಯಾರಿಸಲಾಗುತ್ತದೆ. ಇಂಥ ನಿಷ್ಪ್ರಯೋಜಕರ ಸಮಾಜ ನಮಗೆ ಬೇಡ, ರೈತರು ಉಳಿಯಬೇಕು ಎಂದರು.
ಕೃಷಿರಂಗದಲ್ಲಿ ವಿಶೇಷ ಸಾಧನೆ ಮಾಡಿರುವ ವಿ.ಗಾಯತ್ರಿ ಮಾತನಾಡಿ, ಹಲವು ದಶಕಗಳಿಂದ ಕೃಷಿ ರಂಗವನ್ನು ಹವಾಮಾನ ಬದಲಾವಣೆ ಮಾಡುತ್ತಿದೆ. ಮಳೆಯ ಏರುಪೇರು ಬಾಧಿಸುತ್ತಿದೆ. ಮಳೆ ಆಶ್ರಿತ ರೈತರು ನಾನಾ ರೀತಿಯ ತೊಂದರೆ, ನಷ್ಟ ಅನುಭವಿಸುತ್ತಿದ್ದಾರೆ. ಅವರ ಬದುಕು ಅಲ್ಲೋಲ ಕಲ್ಲೋಲ ಆಗಿದೆ. ರೈತರ ಲೆಕ್ಕಾಚಾರ ತಲೆ ಕೆಳಕಾಗಿದೆ. ಮಳೆಯ ರೀತಿ ಇಬ್ಬನಿಯೂ ಮುಖ್ಯ. ಬೆಳಗ್ಗೆ ಇಬ್ಬನಿ ಸುರಿದು, ಮಧ್ಯಾಹ್ನ ಬಿಸಿಲು ಸುಡಬೇಕು. ಹಿಂಗಾರು ಬೆಳೆ ಇಬ್ಬನಿಯನ್ನು ಅವಲಂಬಿಸಿದೆ. ಈಗ ಅದೂ ಏರುಪೇರಾಗಿದೆ. ಹೆಚ್ಚು ಕಡೆ ಮೋಡ ಕವಿದ ವಾತಾವರಣ ಇದೆ. ಇದರಿಂದ ಕಾಳು ಕಟ್ಟುವುದು, ಇಳುವರಿ ಕಡಿಮೆ ಆಗಿದೆ. ಕೀಟ ಬಾಧೆ ಅತಿಯಾಗಿದೆ. ಅತಿಯಾದ ಶಾಖ, ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಸಣ್ಣ, ಅತಿ ಸಣ್ಣ ರೈತರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪಂಚಾಯಿತಿ ಮಟ್ಟದಲ್ಲಿ ಕೃಷಿ ಬಗ್ಗೆ ಸಣ್ಣ ಮಾಹಿತಿ ನೀಡುವ ಕೆಲಸ, ಕಾಳಜಿ ಆಗುತ್ತಿಲ್ಲ. ಸರ್ಕಾರದ ಹಂತದಲ್ಲಂತೂ ಯಾವ ಬೆಳೆ ಬೆಳೆಯಬೇಕು. ಹೇಗೆ ಬೆಳೆಯಬೇಕು ಎಂಬ ಮಾಹಿತಿ ಹಂಚುವ ಜವಾಬ್ದಾರಿ ಇಲ್ಲ. ಆದರೆ ಆಸೆ, ಆಮಿಷ, ಆಕರ್ಷಣೆಯ ಜಾಹೀರಾತಿನ ಮೂಲಕ ಕಂಪನಿಗಳು ಮನುಷ್ಯರನ್ನು ವಂಚಿಸುತ್ತಿವೆ. ಆದರೂ ನಮ್ಮ ಸರ್ಕಾರಗಳು ನಿಷ್ಕ್ರಿಯವಾಗಿವೆ. ಹೀಗಾಗಿ ರೈತರಿಗೆ ವಿಷ ಮಾರುವ ಅಂಗಡಿಯವರೇ ಮಾರ್ಗದರ್ಶಕರಾಗಿದ್ದಾರೆ. ಅಂಗಡಿಯವರನ್ನೇ ರೈತರು ಅವಲಂಬಿತರಾಗಿದ್ದಾರೆ. ಅದಕ್ಕೂ ನಮಗೂ ಏನೂ ಸಂಬಂಧ ಇಲ್ಲದಂತೆ ಸರ್ಕಾರ ಇರುವುದು ದುರದೃಷ್ಟಕರ ಎಂದರು.
ಕುಲಾಂತರಿ ಟೆಕ್ನಾಲಜಿ ಆಹಾರ ಉತ್ಪಾದನೆ ಮಾಡಲು ರೈತರು ಬೇಕಾಗಿಲ್ಲ ಎನ್ನುತ್ತಿದೆ. ಆದರೆ ಕೃಷಿ ಕೇವಲ ಆಹಾರ ಉತ್ಪಾದನೆ ಮಾಡುವುದಲ್ಲ. ಅದೊಂದು ಜೀವನ ಕ್ರಮ, ಸಂಸ್ಕೃತಿ, ಬದುಕಿನ ಕ್ರಮ. ಸಮುದಾಯ ಉಳಿದರೆ ಕೃಷಿ ಉಳಿಯಲಿದೆ. ಆದರೆ ಸಾಹಿತ್ಯದಲ್ಲಿ ಯಾವುದೇ ಭತ್ತದ ತಳಿಯ ಹೆಸರಿಲ್ಲದಿರುವುದು ಬೇಸರದ ವಿಷಯ. ರೈತರ ಸಮುದಾಯ, ರೈತ ಸಂಸ್ಕೃತಿ ಉಳಿಸಿ ಬೆಳೆಸಬೇಕು. ಅದಕ್ಕಾಗಿ ಕೃಷಿ ಸಂಸ್ಕೃತಿ ಸಾಹಿತ್ಯದಲ್ಲಿ ಬರಲಿ ಎಂದು ಆಶಿಸಿದರು.
ಪರಿಸರ ಸಂರಕ್ಷಕ ಅಮಹದ್ ಹಗರೆ ಮಾತನಾಡಿ, ನಾಳೆಗಳ ಆತಂಕವನ್ನು ಮೊದಲು ಶಾಲಾ ಮಟ್ಟದಲ್ಲಿ ತಿಳಿಸುವಂತಾಗಬೇಕು. ಶಾಲೆ ಪ್ರಜಾಪ್ರಭುತ್ವದ ಗರಡಿ ಮನೆ ಶಾಲೆ. ಆ ಜಾಗದಲ್ಲಿ ಬಿಸಿ ಮುಟ್ಟಬೇಕು. ಹವಾಮಾನ ಬದಲಾವಣೆ, ಸಂಕಷ್ಟ ಕುರಿತು ವಿದ್ಯುನ್ಮಾನ ಮಾಧ್ಯಮಗಳು ಬೆಳಕು ಚೆಲ್ಲಬೇಕು. ಆದರೆ ಅದಾಗುತ್ತಿಲ್ಲ. ಹೊಸ ಪೀಳಿಗೆಗೆ ಬಿಸಿ ಮುಟ್ಟಿಸಬೇಕು. ಈ ವಿಷಯ ಪಠ್ಯದಲ್ಲಿ ಕಡ್ಡಾಯ ಆಗಬೇಕು. ಪರೀಕ್ಷೆಯಲ್ಲೂ ಬರಬೇಕು. ಪ್ರಧಾನ ನೆಲೆ ಒಳಗೆ ಪರಿಸರ ಸಂಕಷ್ಟ. ಪರಿಸರದ ಹುಚ್ಚು ಇರುವವರು ಎಲ್ಲರನ್ನೂ ಎಚ್ಚರಿಸುವ ಕೆಲಸ ಮಾಡಬೇಕು. ಮಕ್ಕಳನ್ನು ಗಿಡಗಳೊಂದಿಗೆ ಮಾತನಾಡಿಸಬೇಕು. ವಿವಿಧ ವಿಷಯ ಸೇರಿದಂತೆ ಕಮ್ಮಟ ಆಗಬೇಕು. ಹೊಸ ತಲೆಮಾರಿನ ಮಕ್ಕಳು ಬರೆಯಲು ಆಲೋಜಿಸಬೇಕು. ವಿಜ್ಞಾನವನ್ನು ಜನರ ಭಾಷೆಗೆ ತರಲು ಸಾಹಿತ್ಯ ಬೇಕು ಎಂದು ಪ್ರತಿಪಾದಿಸಿದರು.
ವನ್ಯಜೀವಿ ಇಕ್ಕಟ್ಟು ನಿವಾರಣೆಗೆ ಸಮಾವೇಶವಾಗಲಿ
ಮಲೆನಾಡು ಭಾಗದಲ್ಲಿ ಮಿತಿ ಮೀರಿರುವ ಕಾಡಾನೆ ಸಮಸ್ಯೆ, ಜೀವಹಾನಿ ಪ್ರಶ್ನೆಗೆ ಉತ್ತರಿಸಿದ ನಾಗೇಶ್ ಹೆಗಡೆ ಅವರು, ವಿದ್ಯುತ್ ಶಾಕ್, ರೈಲ್ವೆಹಳಿ, ಕಂದಕ ನಿರ್ಮಾಣದ ಮೂಲಕ ನಾವು ಆನೆಗಳನ್ನು ಸಾಯಿಸುತ್ತಿದ್ದೇವೆ. ರೈತ-ವನ್ಯಜೀವಿ ಮುಖಾಮುಖಿ ಬಿಕ್ಕಟ್ಟಿನ ಬಗ್ಗೆ ಜಾಗತಿಕ ಸಮ್ಮೇಳನ ನಡೆಯಬೇಕು. ವನ್ಯಜೀವಿ ಇಕ್ಕಟ್ಟು ನಿವಾರಣೆಗೆ ಸಮಾವೇಶ ಮಾಡಬೇಕು. ಎಲ್ಲರಿಗೂ ನಿಯಂತ್ರಣದ ಅರಿವು ಇರಬೇಕು. ಅಲ್ಲಿ ರೈತರು, ವನ್ಯಜೀವಿ ತಜ್ಞರು, ಸರ್ಕಾರದವರು ಇರಬೇಕು. ನಿರ್ಣಯ ಆಗಬೇಕು. ಸಾಹಿತ್ಯ, ಪ್ರಾದೇಶಿಕ, ಸಾಮಾಜಿಕ ಸಮಾನತೆ ಆಶಯದಂತೆ, ನನಗೆ ಇರುವ ಸ್ವಾತಂತ್ರ್ಯ ಮುಂದಿನ ತಲೆಮಾರಿಗೂ ಇರಬೇಕು ಎಂಬ ತಲೆಮಾರಿನ ಸಮಾಜತೆ ಇರಬೇಕು. ಸಕಲ ಜೀವ ರಾಶಿಗಳ ಸಮಾನತೆ ಬೇಕು. ಅದನ್ನು ಸೃಷ್ಟಿಸುವ ನಿಟ್ಟಿನಲ್ಲಿ ನಾವು ಹೆಜ್ಜೆ ಹಾಕೋಣ ಎಂದರು.