ಭಾರಿ ಶಬ್ದ, ಕಂಪನಕ್ಕೆ ಬೆಚ್ಚಿಬಿದ್ದ ಜನ ; ಇಡೀ ರಾತ್ರಿ ಭಯದಲ್ಲೇ ಕಳೆದ ಮುಂಗಾನಹಳ್ಳಿ ಗ್ರಾಮಸ್ಥರು

26cmy1
Published on

ಚಿಂತಾಮಣಿ: ನಾಲ್ಕು ದಿನಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ತಾಲೂಕಿನ ವಿವಿಧೆಡೆ ಭೂಮಿ ನಡುಗಿದ ಅನುಭವ, ಭಯದಿಂದ ಇನ್ನೂ ಜನರು ಹೊರ ಬಂದಿಲ್ಲ, ಇದರ ನಡುವೆ ಚಿಂತಾಮಣಿ ತಾಲೂಕಿನಲ್ಲಿ ಮತ್ತೆ ಭಾರೀ ಶಬ್ದದೊಂದಿಗೆ ಕಂಪನದ ಅನುಭವವಾಗಿದೆ.

ಬಟ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಂಗಾನಹಳ್ಳಿಯಲ್ಲಿ ಶನಿವಾರ ರಾತ್ರಿ 7.30ರ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಪಾತ್ರೆಗಳು, ಇತರ ವಸ್ತುಗಳು ಕೆಳಗೆ ಬಿದ್ದಿದ್ದು ಭಾರಿ ಶಬ್ದದಿಂದ ಬೆಚ್ಚಿಬಿದ್ದ ಜನರು ಮನೆಯಿಂದ ಹೊರಕ್ಕೆ ಓಡಿಬಂದಿದ್ದಾರೆ. ಅಕ್ಕಪಕ್ಕದ ಗ್ರಾಮಗಳಿಗೆ ಸಣ್ಣ ಪ್ರಮಾಣದಲ್ಲಿ ಶಬ್ದ ಕೇಳಿದ್ದು, ಮುಂಗಾನಹಳ್ಳಿ ಗ್ರಾಮಸ್ಥರನ್ನು ದೂರವಾಣಿ ಮೂಲಕ ನೆರೆ-ಹೊರೆಯ ಹಳ್ಳಿ ಜನರು ವಿಚಾರಿಸಿದರು. ನಾಲ್ಕೈದು ದಿನದ ಹಿಂದೆ ಚಿಕ್ಕಬಳ್ಳಾಪುರ ತಾಲೂಕು ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಭೂ ಕಂಪನವಾಗಿದ್ದು ಅದೇ ರೀತಿ ಇಲ್ಲಿಯೂ ಆಗಿರುವ ಭಯದಿಂದ ಜನರು ಮನೆಯೊಳಗೆ ಹೋಗದೆ ಕೊರೆಯುವ ಚಳಿಯಲ್ಲಿ ಹಲವು ಗಂಟೆ ಹೊರಗೆ ಕಳೆದಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಬಟ್ಲಹಳ್ಳಿ ಠಾಣಾ ಸಿಬ್ಬಂದಿ ಗ್ರಾಮಕ್ಕೆ ದೌಡಾಯಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ತೆರಳಿದ ತಹಸಿಲ್ದಾರ್ ಡಿ.ಹನುಮಂತರಾಯಪ್ಪ, ಇತ್ತೀಚಿಗೆ ಮಳೆ ಜಾಸ್ತಿಯಾಗಿದ್ದು ನೀರು ಭೂಮಿಯ ಆಳಕ್ಕೆ ಇಂಗುವಾಗ ಇಂತಹ ಶಬ್ದ, ಭೂಮಿ ನಡುಗಿದ ಅನುಭವ ಸಹಜ, ಇದರಿಂದ ಯಾವುದೇ ಅಪಾಯ ಇಲ್ಲ ಎಂದು ಗ್ರಾಮಸ್ಥರಿಗೆ ಧೈರ್ಯ ಹೇಳಿದ್ದಲ್ಲದೆ, ನವೆಂಬರ್‌ನಲ್ಲಿ ಮಿಟ್ಟಹಳ್ಳಿ ಸುತ್ತಮುತ್ತಲೂ ಇದೇ ರೀತಿಯಾಗಿದ್ದು ಯಾವುದೇ ಅನಾಹುತವಾಗಿಲ್ಲ ಎಂದು ಸಮಾಧಾನ ಮಾಡಿದರು.

ಕಳೆದೆರಡು ದಿನಗಳಿಂದಲೂ ಸಣ್ಣದಾಗಿ ಶಬ್ದ ಕೇಳಿ ಬರುತ್ತಿದ್ದು, ಶನಿವಾರ ರಾತ್ರಿ ಮನೆಯ ಬಳಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಸ್ಪೋಟದ ಶಬ್ದ ಕೇಳಿ ಗಾಬರಿಯಾಯಿತು, ನೋಡ ನೋಡುತ್ತಿದ್ದಂತೆ ಜನರು ಹೆದರಿ ಮನೆಯಿಂದ ಹೊರ ಬಂದು ನಿಂತಿದ್ದರು, ಅಧಿಕಾರಿಗಳು ಮತ್ತು ಪೊಲೀಸರು ಧೈರ್ಯ ತುಂಬಿದ ನಂತರ ಮನೆಗಳಿಗೆ ವಾಪಸಾದರು. ವೆಂಕಟೇಶ್, ಮುಂಗಾನಹಳ್ಳಿ ಮುಂಗಾನಹಳ್ಳಿ ಸುತ್ತಮುತ್ತ ಭೂಮಿ ಕಂಪಿಸಿದ ಬಗ್ಗೆ ರಾತ್ರಿ ಗ್ರಾಮಸ್ಥರು ಮಾಹಿತಿ ನೀಡಿದ್ದರು. ಅವರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ, ಪರಿಶೀಲಿಸಿದ್ದು ಸ್ಫೋಟದಿಂದ ಅನಾಹುತ ಉಂಟಾಗಿಲ್ಲ. ವರದಿ ನೀಡಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಡಿ.ಹನುಮಂತರಾಯಪ್ಪ, ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net