

ಬೆಂಗಳೂರು ಗ್ರಾಮಾಂತರ: ಪಶುವೈದ್ಯ ಸಂಘ ಹಾಗೂ ಸರ್ಕಾರದ ಹಗ್ಗ-ಜಗ್ಗಾಟದಿಂದ ರಾಜ್ಯಾದ್ಯಂತ ಅ.2ರಿಂದ ಆರಂಭವಾಗಬೇಕಿದ್ದ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮಕ್ಕೆ ಹಿನ್ನಡೆಯಾಗಿದೆ.
ರೋಗಕ್ಕೆ ಲಸಿಕೆ ಹಾಕುವ ತಿಂಗಳ ಅಭಿಯಾನ ಮುಂದೂಡುವಂತೆ ಪಶುವೈದ್ಯ ಸಂಘ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯಾದ್ಯಂತ ಕಾರ್ಯಕ್ರಮಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕರೊನಾ ತೀವ್ರವಾಗಿ ಹರಡುತ್ತಿರುವುದು ಹಾಗೂ ಪಶುಗಳಲ್ಲಿ ಹೊಸದಾಗಿ ಚರ್ಮಗಂಟು ಕಾಯಿಲೆ ಕಾಣಿಸಿಕೊಂಡಿರುವಾಗ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸರಿಯಲ್ಲ ಎಂಬುದು ಸಂಘದ ವಾದವಾಗಿದೆ. ಏತನ್ಮಧ್ಯೆ ಕರೊನಾ ಸುರಕ್ಷತಾ ಕಿಟ್‌ಗಳನ್ನು ವಿತರಿಸಿದ್ದು, ಅವುಗಳನ್ನು ಬಳಸಿಕೊಂಡು ಕಾರ್ಯಕ್ರಮ ನಡೆಸಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. ಸರ್ಕಾರ ಹಾಗೂ ಪಶುವೈದ್ಯ ಸಂಘದ ಮಾತುಕತೆ ಲಪ್ರದವಾಗದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಆರಂಭಿಕ ವಿಘ್ನ ಎದುರಾಗಿದೆ.
ಕಪ್ಪುಪಟ್ಟಿ ಧರಿಸಿ ಕರ್ತವ್ಯ: ಪಶುವೈದ್ಯ ಇಲಾಖೆ ಮೇಲಧಿಕಾರಿಗಳ ಒತ್ತಡದಿಂದ ರಾಜ್ಯದಲ್ಲಿ ಬೆರಳೆಣಿಕೆ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದ್ದಾರೆ, ಆದರೆ ಬಹುಪಾಲು ಸಿಬ್ಬಂದಿ ಗೈರಾಗುವ ಮೂಲಕ 1ನೇ ಸುತ್ತಿನ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕರೊನಾ ತೀವ್ರವಾಗಿದೆ. ಇಂಥ ಕಡೆ ತೆರಳಿ ಲಸಿಕೆ ಹಾಕುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ ಎಂಬುದು ರಾಜ್ಯ ಪಶುವೈದ್ಯ ಸಂಘದ ವಾದವಾಗಿದೆ.
ಚರ್ಮಗಂಟು ಸಾಂಕ್ರಾಮಿಕ: ಪಶುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಈ ವೇಳೆ ಕಾಲುಬಾಯಿ ರೋಗದ ಲಸಿಕೆ ಹಾಕಿದರೆ ರಾಸುಗಳ ಆರೋಗ್ಯದ ಪರಿಣಾಮವಾಗಿ ಪಶುಗಳ ಸಾವಿಗೂ ಕಾರಣವಾಗುವ ಸಾಧ್ಯತೆ ಇದೆ, ಈ ರೋಗ ಸಾಂಕ್ರಾಮಿಕವಾಗಿದ್ದು, ವೈದ್ಯ ಸಿಬ್ಬಂದಿಯಿಂದಲೂ ಮತ್ತಷ್ಟು ರಾಸುಗಳಿಗೆ ಹರಡುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಮೊದಲು ಚರ್ಮಗಂಟು ಕಾಯಿಲೆಗೆ ಚಿಕಿತ್ಸೆ ನೀಡಿ ಬಳಿಕ ಲಸಿಕಾ ಕಾರ್ಯಕ್ರಮ ಆರಂಭಿಸಬಹುದು ಎಂದು ರಾಜ್ಯ ಪಶುವೈದ್ಯ ಸಂಘದ ಅಧ್ಯಕ್ಷ ಎಸ್.ಸಿ.ಸುರೇಶ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಸರ್ಕಾರ ಏನೇ ಸುರಕ್ಷತಾ ಪರಿಕರಗಳನ್ನು ವಿತರಿಸಿದರೂ ವೈಜ್ಞಾನಿಕವಾಗಿ ಇಂಥ ಸಂದರ್ಭದಲ್ಲಿ ಲಸಿಕಾ ಕಾರ್ಯಕ್ರಮ ಮುಂದೂಡುವುದೇ ಒಳಿತು, ಒಂದೆಡೆ ಸಿಬ್ಬಂದಿ ಕರೊನಾ ಭೀತಿ ಎದುರಿಸುತ್ತಿದ್ದಾರೆ, ಮತ್ತೊಂದೆಡೆ ಪಶುಗಳಿಗೆ ಚರ್ಮಗಂಟು ಕಾಯಿಲೆ ಕಾಣಿಸಿಕೊಂಡಿದೆ. ಇಂಥ ಸಂದರ್ಭದಲ್ಲಿ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಎಸ್.ಸಿ.ಸುರೇಶ್, ಅಧ್ಯಕ್ಷ, ರಾಜ್ಯ ಪಶುವೈದ್ಯ ಸಂಘ