ಸ್ತನ ಕ್ಯಾನ್ಸರ್ ತಡೆಗೆ ಆರಂಭಿಕ ಪತ್ತೆಯೇ ಕೀಲಿ; ಪದ್ಮಶ್ರೀ ಡಾ. ಸಿ.ಎನ್.ಮಂಜುನಾಥ್ ಸಲಹೆ

bgs
Published on

ಬೆಂಗಳೂರು : ಇತ್ತೀಚೆಗೆ ಮಹಿಳೆಯರನ್ನು ಅತಿಯಾಗಿ ಬಾದಿಸುತ್ತಿರುವ ಸ್ತನ ಕ್ಯಾನ್ಸರ್ ನಿಯಂತ್ರಿಸಲು ಆರಂಭಿಕ ಹಂತದಲ್ಲೇ ಪತ್ತೆ ಮಾಡುವುದು ಪ್ರಮುಖ ಪರಿಹಾರೋಪಾಯವಾಗಿದೆ ಎಂದು ಹೃದ್ರೋಗ ತಜ್ಞರೂ ಆಗಿರುವ ಸಂಸದ ಡಾ.ಸಿ.ಎನ್.ಮಂಜುನಾಥ್ ಹೇಳಿದ್ದಾರೆ.

ಕೆಂಗೇರಿಯ ಬಿಜಿಎಸ್ ಆಸ್ಪತ್ರೆ ಆವರಣದಲ್ಲಿ ಸ್ತನ ಕ್ಯಾನ್ಸರ್ ಕುರಿತು ಆರಂಭಿಕ ಪತ್ತೆ, ತಡೆಗಟ್ಟುವಿಕೆ ಮತ್ತು ಜನಜಾಗೃತಿಗಾಗಿ ಆಯೋಜಿಸಿದ್ದ ಪಿಂಕ್ ಅಪ್ ದಿ ಪೇಸ್ 2025 -5ಕೆ ರನ್ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಇತ್ತೀಚಿನ ಕಾಲಘಟ್ಟದಲ್ಲಿ ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳು ಜೀವನಶೈಲಿಯ ಅಸ್ಥಿರತೆಯಿಂದ ಬರುತ್ತಿವೆ. ಸಿಗರೇಟ್ ಸೇವನೆ, ಮದ್ಯಪಾನ ಮತ್ತು ವಿವಿಧ ರಾಸಾಯನಿಕಗಳು ಕಾಯಿಲೆಗಳಿಗೆ ಪ್ರಮುಖ ಕಾರಣಗಳು. ಒಂದು ಮಾಹಿತಿ ಪ್ರಕಾರ, ಭಾರತದಲ್ಲಿ ಮೆಡಿಕಲ್ ಸ್ಟೋರ್ಸ್‌ಗಿಂತ ಹೆಚ್ಚು ವೈನ್ ಸ್ಟೋರ್‌ಗಳಿವೆ. ಇದು ಸಮಾಜದ ಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ.

ಸ್ತನ ಕ್ಯಾನ್ಸರ್ ಆರಂಭಿಕ ಪತ್ತೆಯಿಂದ ಗುಣಪಡಿಸಲು ಸಾಧ್ಯ. ಆದ್ದರಿಂದ ತಾಯಂದಿರಲ್ಲಿ ಸ್ತನ ಕ್ಯಾನ್ಸರ್ ಪರೀಕ್ಷೆ ಅತ್ಯಂತ ಅಗತ್ಯ. ರಾಜೀವ್ ಗಾಂಧಿ ಮೆಡಿಕಲ್ ಕಾಲೇಜ್ ಮತ್ತು ವಿಜ್ಞಾನ ಸಂಸ್ಥೆಯ ಕುಲಪತಿ ಭಗವಾನ್‌ರವರೊಂದಿಗೆ ಮಾತನಾಡಿದ್ದು, ರಾಜ್ಯದ ಎಲ್ಲಾ ಮೆಡಿಕಲ್ ಕಾಲೇಜುಗಳು ಮತ್ತು ಆಸ್ಪತ್ರೆಗಳು ಪ್ರಾಥಮಿಕ ಮಟ್ಟದಿಂದಲೇ ಸ್ತನ ಕ್ಯಾನ್ಸರ್ ತಪಾಸಣೆಯನ್ನು ಕೈಗೊಳ್ಳಲು ಕ್ರಮಕೈಗೊಳ್ಳಬೇಕು ಎಂದು ಮಂಜುನಾಥ್ ಮನವಿ ಮಾಡಿದರು.

ಸರ್ಕಾರಿ ಹಾಗೂ ಖಾಸಗಿ ಶಾಲೆಗಳ 12 ರಿಂದ 15 ವರ್ಷದ ಹೆಣ್ಣುಮಕ್ಕಳಿಗೆ ಕ್ಯಾನ್ಸರ್ ತಡೆಗಟ್ಟುವ ವ್ಯಾಕ್ಸಿನೇಷನ್ ನೀಡಿದರೆ, ಈ ಕಾಯಿಲೆಯನ್ನು ಶೇ.90 ಭಾಗ ತಡೆಗಟ್ಟಬಹುದು ಎಂದು ಡಾ. ಮಂಜುನಾಥ್ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಬಿಜಿಎಸ್ ಆಸ್ಪತ್ರೆಯ ಭರತ್ ಲೋಕಂಡೆ, ವೈದ್ಯಕೀಯ ಅಧೀಕ್ಷಕಿ.ಡಾ.ಸ್ಮಿತಾ, ಎಸಿಪಿ ಬಸವರಾಜ್, ಸಿಪಿಐ ಜಗದೀಶ್ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net