

ಗದಗ: ಅಸಾಂಕ್ರಾಮಿಕ ರೋಗಗಳಲ್ಲಿ ಹೃದಯ ಸಂಬಂಧಿತ ಕಾಯಿಲೆ ನಂತರದಲ್ಲಿ 2ನೇ ಸ್ಥಾನದಲ್ಲಿ ಕ್ಯಾನ್ಸರ್‌ನಿಂದ ಅತಿ ಹೆಚ್ಚು ಸಾವು ಸಂಭವಿಸುತ್ತಿವೆ. ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆ ಮಾಡುವುದು ಮುಖ್ಯವಾಗಿದೆ ಎಂದು ಡಾ. ಗಣೇಶರಾವ ಕುಂದಾಪುರ ಹೇಳಿದರು.
ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಕ್ಯಾನ್ಸರ್ ಕುರಿತು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಫೆ.4ರಂದು ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಗುವುದು. ಕ್ಯಾನ್ಸರ್ ರೋಗದಲ್ಲಿ ನಾಲ್ಕು ಹಂತಗಳಿದ್ದು, ಮೊದಲನೇ ಮತ್ತು ಎರಡನೇ ಹಂತದಲ್ಲಿರುವ ರೋಗಕ್ಕೆ ತಜ್ಞ ವೈದ್ಯರಲ್ಲಿ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಪಡಿಸಬಹುದು ಎಂದರು.
ಆಧುನಿಕ ಜೀವನ ಶೈಲಿ ಮತ್ತು ತಂಬಾಕು ಸೇವನೆಯಿಂದ ಅತಿ ಹೆಚ್ಚು ಕ್ಯಾನ್ಸರ್ ರೋಗಗಳು ಕಂಡುಬರುತ್ತಿವೆ. ಪುರುಷರಲ್ಲಿ ಬಾಯಿ, ಅನ್ನನಾಳ, ಶ್ವಾಸಕೋಶ ಮತ್ತು ಲೀವರ್ ಕ್ಯಾನ್ಸರ್‌ಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಮಹಿಳೆಯರಲ್ಲಿ ಸ್ತನ, ಗರ್ಭಕಂಠ ಮತ್ತು ಅಂಡಾಣುವಿನ ಕ್ಯಾನ್ಸರ್ ಸಾಮಾನ್ಯವಾಗಿ ಕಂಡುಬರುತ್ತವೆ. ಕ್ಯಾನ್ಸರ್ ರೋಗಿಗಳಿಗೆ ಸರಿಯಾದ ಚಿಕಿತ್ಸೆ, ಆರೈಕೆ ಹಾಗೂ ಮನೋಸ್ಥೈರ್ಯ ಮಾತುಗಳಿಂದ ಗುಣಪಡಿಸಬಹುದು. ಉತ್ತಮ ಜೀವನ ಶೈಲಿ, ಸಮತೋಲನ ಆಹಾರ, ತರಕಾರಿ ಹಣ್ಣು ಹಂಪಲು ಸೇವನೆ, ನಿತ್ಯ ಯೋಗ, ಧ್ಯಾನ ಮತ್ತು ದೈಹಿಕ ಚಟುವಟಿಕೆಯಿಂದ ಕ್ಯಾನ್ಸರ್ ಕಾಯಿಲೆ ಬಾರದಂತೆ ತಡೆಯಬಹುದು ಎಂದರು.
ಜಿಲ್ಲಾ ಸಮೀಕ್ಷಣಾಧಿಕಾರಿ ವೆಂಕಟೇಶ ರಾಠೋಡ ಮಾತನಾಡಿ, ದೇಶದಲ್ಲಿ ಪ್ರತಿ ವರ್ಷ 14,13,316 ಹೊಸ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಅವುಗಳಲ್ಲಿ 30-60 ವಯಸ್ಸಿನವರಲ್ಲಿ 9,16,827 ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಬಾಯಿ, ಸ್ತನ ಹಾಗೂ ಗರ್ಭಕಂಠದ ಕ್ಯಾನ್ಸರ್ ತಪಾಸಣೆಯನ್ನು ಜಿಲ್ಲೆಯ ಪ್ರತಿಯೊಂದು ಆರೋಗ್ಯ ಕೇಂದ್ರಗಳಲ್ಲಿ ಕೈಗೊಳ್ಳಲಾಗುತ್ತಿದ್ದು, 30 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಅಸಾಂಕ್ರಾಮಿಕ ಕಾಯಿಲೆಗಳ ಪ್ರಾಥಮಿಕ ಹಂತದ ತಪಾಸಣೆಯನ್ನು ಪ್ರತಿ ಗ್ರಾಮದಲ್ಲಿ ಕೈಗೊಳ್ಳಲಾಗುತ್ತಿದ್ದು, ಒಟ್ಟು 7 ಎನ್‌ಸಿಡಿ ಕ್ಲಿನಿಕ್‌ಗಳು ಕಾರ್ಯ ನಿರ್ವಹಿಸುತ್ತಿವೆ ಹಾಗೂ ಪ್ರತಿ ಆರೋಗ್ಯ ಕೇಂದ್ರಗಳಲ್ಲಿ ಉಚಿತ ತಪಾಸಣೆ ಮತ್ತು ಔಷಧ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಎಸ್.ಎಸ್. ಪೀರಾ, ಮುತ್ತುನಗೌಡ ಎಸ್. ರಬ್ಬನಗೌಡ್ರ, ಗಂಗಾ ಸಜ್ಜಗಾರ, ರೂಪಸೇನ ಚವ್ಹಾಣ, ಗೀತಾ ಕಾಂಬ್ಳೆ, ಪುಷ್ಪಾ ಪಾಟೀಲ, ಡಾ. ರವಿ ಕಡಗಾವಿ, ಗೋಪಾಲ ಸುರಪುರ, ಪ್ರತೀಕ ಹುರಕಡ್ಲಿ, ವೀರೇಶ ಮದಕಟ್ಟಿ ಇದ್ದರು.