

ಹುಬ್ಬಳ್ಳಿ: ಧಾರವಾಡ ಜಿಲ್ಲೆ ಅರ್ಲಿ ಇನ್ಟರ್ನ್‌ವೆನ್ಷನ್ ಸೆಂಟರ್ ಹಾಗೂ ದೈಹಿಕ ಔಷಧ ಮತ್ತು ಪುನರ್ವಸತಿ ಕೇಂದ್ರದ ಸಹಯೋಗದಲ್ಲಿ ಇಲ್ಲಿಯ ಕೆಎಂಸಿಆರ್‌ಐನ ಹೊರ ರೋಗಿಗಳ ವಿಭಾಗದಲ್ಲಿ ರಾಷ್ಟ್ರೀಯ ಸೆಲೆಬ್ರಲ್ ಪಾಲ್ಸಿ ದಿನವನ್ನು ಬುಧವಾರ ಏರ್ಪಡಿಸಲಾಗಿತ್ತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಂ. ಹೊನಕೇರಿ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಕಂಡುಬರುವ ರೋಗಗಳನ್ನು ಶೀಘ್ರವೇ ಪತ್ತೆ ಚಿಕಿತ್ಸೆ ಕೊಡುವುದು ಉತ್ತಮ. ಈ ನಿಟ್ಟಿನಲ್ಲಿ ವೈದ್ಯರು ಕಾರ್ಯಪ್ರವೃತ್ತರಾಗಿದ್ದಾರೆ. ಇವರ ಜತೆಗೆ ಪಾಲಕರು ಕೂಡ ಸಹಕರಿಸಬೇಕು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇಂಥ ಮಕ್ಕಳನ್ನು ಬೇಗ ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸಲು ಮುಂದಾಗಬೇಕು ಎಂದರು.
ಕೆಎಂಸಿಆರ್‌ಐ ನಿರ್ದೇಶಕ ಡಾ. ಈಶ್ವರ ಹೊಸಮನಿ ಮಾತನಾಡಿ, ಮಕ್ಕಳು ಜನಿಸಿದಾಗ ಕಡಿಮೆ ತೂಕ ಹೊಂದಿರುತ್ತಾರೆ. ಅವರಿಗೆ ನಿಯಮಿತವಾಗಿ ಔಷಧೋಪಚಾರ ಮಾಡುವ ಅಗತ್ಯವಿರುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರದಿಂದ ಮಕ್ಕಳ ಆರೋಗ್ಯ ಕಾಪಾಡುವಲ್ಲಿ ನಮ್ಮ ಆಸ್ಪತ್ರೆ ಸದಾ ಕಂಕಣಬದ್ಧವಾಗಿದೆ ಎಂದರು.
ಅಲಿಮ್ಕೋ ವತಿಯಿಂದ ಐವರು ಸೆಲೆಬ್ರಲ್ ಪಾಲ್ಸಿ ಮಕ್ಕಳಿಗೆ ಟಿಎಲ್‌ಎಂ ಕಿಟ್, ರೊಲೇಟರ್ಸ್ ಹಾಗೂ ಸಿಪಿ ಚೇರ್‌ಗಳನ್ನು ವಿತರಿಸಲಾಯಿತು.
ವೈದ್ಯಕೀಯ ಅಧೀಕ್ಷಕ ಡಾ. ಈಶ್ವರ ಹಸಬಿ, ಪ್ರಾಚಾರ್ಯ ಡಾ. ಸೂರ್ಯಕಾಂತ ಕಲ್ಲೂರಾಯ, ಎಲುಬು ಮತ್ತು ಕೀಲು ವಿಭಾಗದ ಮುಖ್ಯಸ್ಥ ಡಾ.ಎಸ್.ಎಫ್. ಕಮ್ಮಾರ, ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ವಿನೋದ ರಟಗೇರಿ, ಪ್ರಾಧ್ಯಾಪಕ ಡಾ. ರಾಘವೇಂದ್ರ ದೇಸಾಯಿ, ಡಾ. ವೆಂಕಟೇಶ ಮೂಲಿಮನಿ, ಡಾ. ಆನಂದ ವರ್ಮಾ, ಡಾ. ಶಾದಬ್ ಮಾಲ್ದಾರ್ ಇತರರು ಇದ್ದರು.