ಶೀಘ್ರವೇ ಪತ್ತೆ ಹಚ್ಚಿದರೆ ಕಾಯಿಲೆ ಶಮನ

h26-health camp
Published on

ಹುಬ್ಬಳ್ಳಿ: ಕಾಯಿಲೆಗಳನ್ನು ಮೊದಲೇ ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುವುದರಿಂದ ಶೀಘ್ರವೇ ರೋಗಿಗಳು ಗುಣವಾಗಲಿದ್ದಾರೆ ಎಂದು ಧಾರವಾಡ ಜಿಲ್ಲಾ ಗ್ರಾಮೀಣ ಬಿಜೆಪಿ ಅಧ್ಯಕ್ಷ ಬಸವರಾಜ ಕುಂದಗೋಳಮಠ ಅಭಿಪ್ರಾಯಪಟ್ಟರು.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಜನ್ಮ ದಿನ ನಿಮಿತ್ತ ಕ್ಷಮತಾ ಸೇವಾ ಸಂಸ್ಥೆ, ಬೆಳಗಾವಿ ಕೆಎಲ್​ಇ ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ, ಕೆಎಲ್​ಇ ಆಸ್ಪತ್ರೆ ಹುಬ್ಬಳ್ಳಿ, ಕೆಎಲ್​ಇ ಕೋ-ಆಪರೇಟೀವ್ ಆಸ್ಪತ್ರೆ, ಜಗದ್ಗುರು ಗಂಗಾಧರ ಮಹಾಸ್ವಾಮಿಗಳವರ ವೈದ್ಯಕೀಯ ಮಹಾವಿದ್ಯಾಲಯ ಆಶ್ರಯದಲ್ಲಿ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಕೆಲಸ ಮಾಡುವುದರ ಜತೆಗೆ ಕ್ಷೇತ್ರದ ಜನರ ಆರೋಗ್ಯದ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಕಾಳಜಿ ವಹಿಸಿದ್ದಾರೆ. ಕಳೆದ 20ವರ್ಷಗಳಿಂದ ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರಗಳನ್ನು ಏರ್ಪಡಿಸಿ ಜನರಿಗೆ ಹತ್ತಿರವಾಗುತ್ತಿದ್ದಾರೆ ಎಂದರು.

ಕೆಎಲ್​ಇ ಆಸ್ಪತ್ರೆಯ ಪ್ರಾಚಾರ್ಯ ಡಾ.ಎಂ.ಜಿ. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಗಳಹಳ್ಳಿ ಗ್ರಾಮದ ಸುತ್ತಲಿನ ಗ್ರಾಮಗಳ ನೂರಾರು ರೋಗಿಗಳು ತಪಾಸಣೆ ಮಾಡಿಸಿಕೊಂಡರು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ಹುಬ್ಬಳ್ಳಿ ಹಾಗೂ ಬೆಳಗಾವಿಯ ಕೆಎಲ್​ಇ ಆಸ್ಪತ್ರೆಗೆ ಕರೆದೊಯ್ಯಲು ವಾಹನದ ವ್ಯವಸ್ಥೆ ಮಾಡಲಾಗಿತ್ತು. 100ಕ್ಕೂ ಹೆಚ್ವು ತಜ್ಞ ವೈದ್ಯರು, ಸಾರ್ವಜನಿಕರ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿದರು. 18 ಕೌಂಟರ್, 10 ಫಾರ್ಮಸಿ ಸೆಂಟರ್ ತೆರೆಯಲಾಗಿತ್ತು. ಆಯುಷ್ಮಾನ್ ಕಾರ್ಡ್​ಗಾಗಿ 68 ಜನರ ಹೆಸರು ನೋಂದಣಿ ಮಾಡಲಾಯಿತು. 22 ಜನರನ್ನು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

ಬಿಜೆಪಿ ಮಂಡಳ ಅಧ್ಯಕ್ಷ ಮೃತ್ಯುಂಜಯ ಹಿರೇಮಠ, ಗ್ರಾಪಂ ಅಧ್ಯಕ್ಷೆ ಸುಧಾ ರೊಟ್ಟಿಗವಾಡ, ಉಪಾಧ್ಯಕ್ಷೆ ಶಂಕ್ರಮ್ಮ ಹವಳಪ್ಪನವರ, ಡಾ. ಮಹಾಂತೇಶ ಹಳೇಮನಿ, ಆರ್.ಟಿ. ತವನಪ್ಪನವರ, ಡಾ. ಅಲ್ಲಮ್ಮ ಪ್ರಭು, ದೇವರಾಜ ಡಾಡಿಬಾವಿ, ಡಾ. ಹಂಜಿ, ಡಾ. ವಿಜಯಲಕ್ಷ್ಮೀ, ಹಿರಿಯರಾದ ಇಮಾಮ್ುಸೇನ್ ಜಂಬಲ, ಮಂಜುನಾಥ ಮೆಣಸಿನಕಾಯಿ, ಪ್ರಭಯ್ಯ ಹೊಸಮಠ, ರುದ್ರಪ್ಪ ದುಂದೂರು, ಕರಿಸಿದ್ದಯ್ಯ ವಸ್ತ್ರದ, ನಾಗಪ್ಪ ಜಡಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net