ಹುಬ್ಬಳ್ಳಿ: ಅವಧಿ ಪೂರ್ವ ಅಂದರೆ ಕೇವಲ ಆರು ತಿಂಗಳಿಗೇ ಜನಿಸಿದ ಗಂಡು ಮಗುವಿಗೆ ಹಲವು ಸವಾಲುಗಳ ಮಧ್ಯೆಯೂ ಯಶಸ್ವಿ ಚಿಕಿತ್ಸೆ ನೀಡಿ ಶಿಶುವನ್ನು ಪಾಲಕರಿಗೆ ಒಪ್ಪಿಸಲಾಗಿದ್ದು, ಇದೊಂದು ಅಪರೂಪದ ಪ್ರಸಂಗ ಎಂದು ಸ್ಪರ್ಶಂ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಮಾರ್ತಾಂಡಪ್ಪ ಡಿ.ಎಚ್. ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗರ್ಭ ಧರಿಸಿದ ಸುಮಾರು 25ನೇ ವಾರದಲ್ಲಿಯೇ ತಾಯಿ ಮಗುವಿಗೆ ಜನ್ಮ ನೀಡಿದ್ದಾಳೆ. ಸಾಮಾನ್ಯವಾಗಿ ಮಗು 40ನೇ ವಾರಕ್ಕೆ ಜನಿಸುತ್ತದೆ. ಹೀಗೆ ಜನಿಸಿದ ಮಗುವಿಗೆ ಆಸ್ಪತ್ರೆ ವೈದ್ಯರ ತಂಡ 80 ದಿನಗಳ ಕಾಲ ಆರೈಕೆ ಮಾಡಿದೆ. ಇದೀಗ ಮಗು ಎಲ್ಲ ಸವಾಲುಗಳನ್ನು ದಾಟಿ ಆರೋಗ್ಯಕರವಾಗಿದ್ದರಿಂದ ಪಾಲಕರಿಗೆ ನೀಡಲಾಗಿದೆ ಎಂದರು.
ಜನ್ಮ ನೀಡಿದಾಗ ಮಗು ಕೇವಲ 840 ಗ್ರಾಂ ತೂಕವಿತ್ತು. ಸೂಕ್ಷ್ಮ ನವಜಾತ ಶಿಶುವನ್ನು 80 ದಿನಗಳವರೆಗೆ ಆಸ್ಪತ್ರೆಯ ಸಿಬ್ಬಂದಿ ತೀವ್ರ ಆರೈಕೆ ಘಟಕದಲ್ಲಿಟ್ಟು ಚಿಕಿತ್ಸೆ, ಆರೈಕೆ ಮಾಡಿದ್ದಾರೆ. ಇದೀಗ ಮಗು 1.6 ಕೆಜಿ ಆಗಿದೆ. ಇತ್ತೀಚೆಗೆ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದರು.
ಸಪ್ಟೆಂಬರ್ 3ರಂದು ಶಿಶು ಜನಿಸಿದೆ. ಅವಧಿ ಪೂರ್ವ ಮಗು ಜನಿಸುವುದು ಬಹಳ ಅಪರೂಪ. ಇಂಥ ಮಗು ಸಾಕಷ್ಟು ಗಂಭೀರ ವೈದ್ಯಕಿಯ ಸವಾಲುಗಳನ್ನು ಎದುರಿಸುತ್ತದೆ. ಮೆದುಳಿನಲ್ಲಿ ರಕ್ತಸ್ರಾವ, ಕಡಿಮೆ ತೂಕ, ಉಸಿರಾಟದ ತೊಂದರೆ, ಹಾಲಿನ ಅಜಿರ್ಣತೆ, ನಂಜು ಇತರ ಸಮಸ್ಯೆಗಳು ಬರುತ್ತವೆ. ಈ ಎಲ್ಲವುಗಳನ್ನು ಎದುರಿಸಿ ಮಗುವನ್ನು ಆರೈಕೆ ಮಾಡಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.
ಪ್ರಸೂತಿ ತಜ್ಞೆ ಡಾ. ಸೀಮಾ ಭೈರಿ ಮಾತನಾಡಿ, ಭಾರತದಲ್ಲಿ ಆರು ತಿಂಗಳಿಗೆ ಮಗು ಜನಿಸುವ ಪ್ರಕರಣಗಳು ಬಹಳ ಕಡಿಮೆ. ಹುಬ್ಬಳ್ಳಿ ಮೂಲದ ಗಣಾಚಾರಿ ದಂಪತಿಗೆ ಈ ಮಗು ಜನಿಸಿದೆ. ಜನಿಸಿದ ಮೊದಲ ನಾಲ್ಕು ವಾರ ನವಜಾತ ಶಿಶುವನ್ನು ಉಸಿರಾಟದ ಯಂತ್ರದಲ್ಲಿ ಆರೈಕೆ ಮಾಡಲಾಯಿತು. 30 ದಿನ ಆಸ್ಪತ್ರೆಯಲ್ಲಿ ತಾಯಿಯೊಂದಿಗೆ ಮಗುವನ್ನು ಕಾಂಗರೂ ಆರೈಕೆಯಲ್ಲಿ ಇಟ್ಟು, ಎದೆ ಹಾಲುಣಿಸುವಿಕೆ ಪ್ರಾರಂಭಿಸಲಾಯಿತು. ಇದೀಗ ಮಗು ಆರೋಗ್ಯವಾಗಿದೆ. ನಿರಂತರ ವೈದ್ಯಕಿಯ ನಿಗಾ ವಹಿಸಲಾಗಿದೆ ಎಂದರು.
ಆಸ್ಪತ್ರೆ ಆಡಳಿತಾಕಾರಿ ಆನಂದ ಬಾಳಿ, ದಂಪತಿ ಗೋಷ್ಠಿಯಲ್ಲಿದ್ದರು.