

ಆರ್.ಕೃಷ್ಣ ಮೈಸೂರು
ತಪ್ಪು ಮಾಡಿದವರನ್ನು ಶಿಕ್ಷಿಸುವುದಕ್ಕಾಗಿ ಇರುವ ಕಾರಾಗೃಹದಲ್ಲಿಯೇ ನಡೆಯುತ್ತಿದ್ದ ಅಕ್ರಮಕ್ಕೆ ಕಡಿವಾಣ ಹಾಕಲು ಸರ್ಕಾರ ದಿಟ್ಟ ನಿಲುವು ತೆಗೆದುಕೊಂಡಿದೆ.
ಕಾರಾಗೃಹದ ಭದ್ರತಾ ಸಿಬ್ಬಂದಿಯನ್ನೂ ದಾಟಿ ಒಳಗೆ ಬರುತ್ತಿದ್ದ ಹಲವು ಆಕ್ಷೇಪಾರ್ಹ ವಸ್ತುಗಳಿಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. ಕಾರಾಗೃಹದ ಭದ್ರತೆ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಗೆ ವಹಿಸಿಕೊಡಲಾಗಿದೆ. ಇದರಿಂದ ಇನ್ನು ಮುಂದೆ ಕಾರಾಗೃಹಕ್ಕೆ ಮತ್ತಷ್ಟು ಬಿಗಿ ಭದ್ರತೆ ದೊರೆತಂತಾಗಿದೆ. ಈ ಮೂಲಕ ಕಾರಾಗೃಹ ಸಿಬ್ಬಂದಿಗೆ ಸವಾಲಾಗಿದ್ದ ಭದ್ರತಾ ಸಮಸ್ಯೆ ಈ ಮೂಲಕ ನಿವಾರಣೆಯಾದಂತಾಗಿದೆ. ಅಲ್ಲದೇ ಕೆಲ ಸಿಬ್ಬಂದಿಯಿಂದಲೇ ಅಕ್ರಮಕ್ಕೆ ನೀಡುತ್ತಿದ್ದ ಪರೋಕ್ಷ ಸಹಕಾರಕ್ಕೂ ತಡೆ ಬಿದ್ದಿದೆ.
ಕೈಗಾರಿಕಾ ಭದ್ರತಾ ಪಡೆಯಲ್ಲಿರುವವರು ಕಾರಾಗೃಹ ಸುತ್ತಲೂ ಭದ್ರತೆ ಕಲ್ಪಿಸುವುದರೊಂದಿಗೆ ಕಾರಾಗೃಹದೊಳಗೆ ನಿಷೇಧಿತ ವಸ್ತುಗಳು ಸಾಗಣೆ ಆಗದಂತೆ ಕಟ್ಟೆಚ್ಚರ ವಹಿಸುತ್ತಿದ್ದಾರೆ. ಅಲ್ಲದೇ ಕಾರಾಗೃಹಕ್ಕೆ ಭೇಟಿ ನೀಡುವ ಪ್ರತಿಯೊಬ್ಬರ ಮೇಲೂ ತೀವ್ರ ನಿಗಾ ವಹಿಸುವ ಮೂಲಕ ಮಾದಕ ವಸ್ತು, ಮೊಬೈಲ್ ಫೋನ್ ಸೇರಿದಂತೆ ಅನಧಿಕೃತ ವಸ್ತುಗಳು ಜೈಲು ಸೇರದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.
ಒಂದೂವರೆ ವರ್ಷದಿಂದ ಕಾರಾಗೃಹ ಭದ್ರತಾ ಕಾರ್ಯದಲ್ಲಿ ನಿರತರಾಗಿರುವ ಕೈಗಾರಿಕಾ ಭದ್ರತಾ ಪಡೆಯ ಪೊಲೀಸರು, ಕಾರಾಗೃಹಕ್ಕೆ ತೆರಳುವ ಕಾರಾಗೃಹ ಅಧಿಕಾರಿ ಮತ್ತು ಸಿಬ್ಬಂದಿ ಮೇಲೂ ನಿಗಾ ಇಟ್ಟಿದ್ದಾರೆ. ಅವರನ್ನೂ ತಪಾಸಣೆ ನಡೆಸಿ ಒಳಗೆ ಕಳುಹಿಸುತ್ತಿದ್ದಾರೆ. ಈ ಮೂಲಕ ಜೈಲಿನಲ್ಲಿ ನಿಷೇಧಿತ ವಸ್ತುಗಳು ಪೂರೈಕೆಯಾಗುತ್ತಿರುವುದನ್ನು ಸಂಪೂರ್ಣ ನಿಯಂತ್ರಣಕ್ಕೆ ತಂದಿದ್ದು, 20ಕ್ಕೂ ಹೆಚ್ಚು ಪ್ರಕರಣಗಳನ್ನು ಪ್ರಾರಂಭದಲ್ಲಿಯೇ ಪತ್ತೆ ಹಚ್ಚಿದ್ದಾರೆ.
ಭದ್ರತೆಗೆ ಪ್ರತ್ಯೇಕ ಪಡೆ: ಕಾರಾಗೃಹ ಭದ್ರತೆಗೆ ಕೈಗಾರಿಕಾ ಭದ್ರತಾ ಪಡೆಯಲ್ಲಿ ಒಟ್ಟು 28 ಸಿಬ್ಬಂದಿ ಇದ್ದಾರೆ. ಒಬ್ಬರು ಇನ್ಸ್‌ಪೆಕ್ಟರ್, ಒಬ್ಬರು ಸಬ್‌ಇನ್ಸ್‌ಪೆಕ್ಟರ್, ಐವರು ಹೆಡ್ ಕಾನ್‌ಸ್ಟೆಬಲ್, 21 ಕಾನ್‌ಸ್ಟೆಬಲ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾರಾಗೃಹದ ಪ್ರವೇಶ ದ್ವಾರದಲ್ಲಿ ಭದ್ರತಾ ಪಡೆಗೆ ಪ್ರತ್ಯೇಕ ಕಚೇರಿ ಇದ್ದು, ಇಲ್ಲಿಂದಲೇ ಕಾರಾಗೃಹಕ್ಕೆ ಭೇಟಿ ನೀಡುವ ಪ್ರತಿಯೊಬ್ಬರ ತಪಾಸಣೆ ನಡೆಸಲಾಗುತ್ತಿದೆ. ಇದರೊಂದಿಗೆ ಜೈಲಿನ ಸುತ್ತ ಭದ್ರತಾ ಪಡೆಯ ಸಿಬ್ಬಂದಿ ದಿನದ 24 ಗಂಟೆಯೂ ಗಸ್ತಿನಲ್ಲಿರುತ್ತಾರೆ.
ಪ್ರತಿಯೊಬ್ಬರ ತಪಾಸಣೆ:
ಕಾರಾಗೃಹದಲ್ಲಿರುವವರನ್ನು ಭೇಟಿಯಾಗಲು ಪ್ರತಿ ದಿನ ಕುಟುಂಬದವರು, ಸ್ನೇಹಿತರು ಬರುವುದು ಸಾಮಾನ್ಯ. ಹೀಗೆ ಬರುವ ಕೆಲವು ಪ್ರಭಾವಿಗಳು ಆಕ್ಷೇಪಾರ್ಹ ವಸ್ತುಗಳನ್ನು ಒಳಗೆ ನೀಡುತ್ತಿರುವ ಬಗ್ಗೆ ಅನೇಕ ದೂರು ಕೇಳಿಬಂದ ಹಿನ್ನೆಲೆಯಲ್ಲಿ ತಪಾಸಣೆ ಮಾಡಿದಾಗ ಕೆಲ ವಸ್ತುಗಳು ಸಿಕ್ಕಿದ್ದವು. ಹೀಗಾಗಿ ಯಾರೇ ಬಂದರೂ ಮೊದಲು ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ತಪಾಸಣೆ ನಡೆಸುತ್ತಾರೆ. ಅವರು ಕೊಂಡೊಯ್ಯುವ ಔಷಧ ಸೇರಿದಂತೆ ಇತರ ಅಗತ್ಯ ವಸ್ತುಗಳನ್ನು ಪ್ರಾರಂಭದಲ್ಲಿಯೇ ಚೆಕ್ ಮಾಡಲಿದ್ದು, ಬಳಿಕ ಕಾರಾಗೃಹ ಸಿಬ್ಬಂದಿ ಎರಡನೇ ಹಂತದಲ್ಲಿ ತಪಾಸಣೆ ನಡೆಸಿ ಬಂಧಿಗಳ ಭೇಟಿಗೆ ಅವಕಾಶ ನೀಡುತ್ತಾರೆ.
ತಡೆಗೋಡೆ ಸುತ್ತಲಿನ ಒಳ ಆವರಣದಲ್ಲಿ ಮೆಷ್
ಕಾರಾಗೃಹದ ಸುತ್ತಲಿನ ತಡೆಗೋಡೆಯ ಹೊರ ಆವರಣದಿಂದ ಗಾಂಜಾ ಸೇರಿದಂತೆ ಮಾದಕ ವಸ್ತುಗಳನ್ನು ಕಲ್ಲು ಕಟ್ಟಿ ಒಳಗೆ ಎಸೆಯಲಾಗುತ್ತಿತ್ತು. ಈ ಬಗ್ಗೆ ಹಿಂದಿನ ಮುಖ್ಯ ಅಧೀಕ್ಷಕರು, ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಸೂಕ್ತ ಭದ್ರತೆ ಕಲ್ಪಿಸುವಂತೆ ಮನವಿ ಮಾಡಿದ್ದರು. ಇದರಿಂದ ಈಗ ಕಾರಾಗೃಹದ ತಡೆಗೋಡೆ ಸುತ್ತಲಿನ ಒಳ ಆವರಣದಲ್ಲಿ ಮೆಷ್ ಅಳವಡಿಸಲಾಗಿದೆ. ಆ ಮೂಲಕ ಮಾದಕ ವಸ್ತುಗಳು ಸೇರಿದಂತೆ ಯಾವುದೇ ವಸ್ತುಗಳು ಕಾರಾಗೃಹದ ಒಳಗೆ ಬೀಳದಂತೆ ತಡೆಯೊಡ್ಡಲಾಗಿದೆ.
ಹೊಸ ಕಾರಾಗೃಹಕ್ಕೆ ಜಾಗವಿಲ್ಲ
ವರ್ಷದಿಂದ ವರ್ಷಕ್ಕೆ ಕಾರಾಗೃಹಕ್ಕೆ ಬರುವ ಬಂಧಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ನಗರಕ್ಕೆ ಹೊರ ಕಾರಾಗೃಹ ಬೇಕು ಎನ್ನುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಆದರೆ ಹಲವು ವರ್ಷಗಳಿಂದ ಹೊಸ ಕೇಂದ್ರ ಕಾರಾಗೃಹ ನಿರ್ಮಾಣಕ್ಕೆ ಅವಶ್ಯವಿರುವ 60 ಎಕರೆ ಭೂಮಿ ಮೈಸೂರಿನಿಂದ 15 ಕಿ.ಮೀ. ಸುತ್ತಳತೆಯಲ್ಲಿ ಸಿಗುತ್ತಿಲ್ಲ. ಹೀಗಾಗಿ ನಗರದೊಳಗಿರುವ ಈಗಿನ ಜೈಲಿನ ಆವರಣದಲ್ಲೇ ಹೊಸ ಕಟ್ಟಡ ನಿರ್ಮಾಣಕ್ಕೆ ಕೇಂದ್ರ ಕಾರಾಗೃಹದ ಅಧಿಕಾರಿಗಳು ಪ್ರಸ್ತಾಪ ಮಂಡಿಸಿದ್ದಾರೆ. ಕೇಂದ್ರ ಕಾರಾಗೃಹದಲ್ಲಿ ಸದ್ಯಕ್ಕೆ 562 ಜನರಿಗಷ್ಟೇ ಸೌಲಭ್ಯ ಒದಗಿಸುವ ಸಾಮರ್ಥ್ಯವಿದೆ. ಆದರೆ ಬಂಧಿಗಳ ಸಂಖ್ಯೆ 700ರಿಂದ 900ರವರೆಗೂ ಇರಿಸಲಾಗುತ್ತಿದೆ. ಇದರಿಂದ ಬಂಧಿಗಳಿಗೆ ಕಿರಿಕಿರಿ ಆಗಲಿದ್ದು, ಆಗಾಗ್ಗೆ ಘರ್ಷಣೆಗೂ ಕಾರಣವಾಗುತ್ತಿದೆ. ಹಾಗಾಗಿ ಜಾಗ ಗುರುತಿಸಬೇಕು, ಇಲ್ಲವೇ ಇರುವ ಜಾಗದಲ್ಲಿಯೇ ಹೊಸ ಕಟ್ಟಡ ನಿರ್ಮಿಸಿಕೊಡಬೇಕು ಎನ್ನುವ ಪ್ರಸ್ತಾವನೆ ಸರ್ಕಾರದ ಮುಂದಿದೆ.
ಕೋಟು)
ಕಾರಾಗೃಹಕ್ಕೆ ಹೊರಗಿನಿಂದ ಆಕ್ಷೇಪಾರ್ಹ ವಸ್ತುಗಳು ಬರುತ್ತಿದ್ದವು. ಹೀಗಾಗಿ ಎರಡು ಹಂತದಲ್ಲಿ ಭದ್ರತೆ ಒದಗಿಸಲಾಗಿದೆ. ಕಾರಾಗೃಹ ಒಳ ಆವರಣದಲ್ಲಿ ಕಾರಾಗೃಹ ಸಿಬ್ಬಂದಿಯೇ ಭದ್ರತಾ ಕಾರ್ಯ ನಿರ್ವಹಿಸಿದರೆ, ಹೊರಗಿನ ಆವರಣ ಮತ್ತು ಪ್ರವೇಶ ದ್ವಾರದಲ್ಲಿ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ನಿಷೇಧಿತ ವಸ್ತುಗಳ ಜೈಲಿನೊಳಗೆ ಹೋಗದಂತೆ ನಿಗಾ ವಹಿಸಲಾಗಿದೆ.
ಪಿ.ಎಸ್.ರಮೇಶ್
ಮುಖ್ಯ ಅಧೀಕ್ಷಕ, ಮೈಸೂರು ಕೇಂದ್ರ ಕಾರಾಗೃಹ