ಹಳೆ ಕಳ್ಳರ ಮೇಲೆ ಹದ್ದಿನ ಕಣ್ಣು, ಇಳಿಕೆಯಾದ ಅಪರಾಧ ಪ್ರಕರಣ

City Police commissioner Office (1)
Published on

ಆರ್.ಕೃಷ್ಣ ಮೈಸೂರು
ವರ್ಷದಿಂದ ವರ್ಷಕ್ಕೆ ಏರುಮುಖವಾಗಿದ್ದ ಅಪರಾಧ ಪ್ರಮಾಣಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿರುವ ನಗರ ಪೊಲೀಸರು, ಹಳೇ ಅಪರಾಧಿಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಅಪರಾಧ ನಿಯಂತ್ರಣಕ್ಕೆ ಮೈಸೂರು ನಗರ ಪೊಲೀಸರು ಕೈಗೊಂಡ ಮುಂಜಾಗ್ರತಾ ಕ್ರಮದಿಂದಾಗಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ನಗರದಲ್ಲಿ ಘಟಿಸಿದ ಅಪರಾಧಗಳ ಸಂಖ್ಯೆ ಸಾಕಷ್ಟು ಕಡಿಮೆಯಾಗಿದೆ.
ಹೊಸ ಕಳ್ಳರು, ಅಪರಾಧಿಗಳಿಗಿಂತ ಹಳೇ ಅಪರಾಧಿಗಳ ಮೇಲೆ ಕಣ್ಣಿಟ್ಟು ಕಾರ್ಯಾಚರಣೆ ನಡೆಸಿ, ಎರಡು ವರ್ಷದಲ್ಲಿ 698 ಜನರನ್ನು ಮತ್ತೆ ಜೈಲಿಗಟ್ಟಿದ್ದಾರೆ. ಇದರಿಂದ ಹೊಸ ಕಳ್ಳರಿಗೂ ಭೀತಿ ಹುಟ್ಟಿರುವುದು ಅಪರಾಧಗಳ ನಿಯಂತ್ರಣಕ್ಕೆ ಪ್ರಮುಖ ಕಾರಣವಾಗಿದೆ.
ನಗರದಲ್ಲಿ ಅಪರಾಧ ನಿಯಂತ್ರಣಕ್ಕೆ ಬೀಟ್ ವ್ಯವಸ್ಥೆಯನ್ನು ಮತ್ತಷ್ಟು ಸಕ್ರಿಯಗೊಳಿಸಿದ ನಗರ ಪೊಲೀಸ್ ಕಮಿಷನರ್ ಬಿ.ರಮೇಶ್ ಬಾನೋತ್ ಅವರು, ನಿರಂತರವಾಗಿ ರೌಡಿ ಪರೇಡ್ ನಡೆಸಿ ಹಳೆಯ ಅಪರಾಧಿಗಳ ಮೇಲೆ ನಿಗಾವಹಿಸುವಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಸೂಚಿಸಿದ್ದರು.
ಅಲ್ಲದೆ ಅನುಮಾನಾಸ್ಪದ ವ್ಯಕ್ತಿಗಳ ಸಂಚಾರದ ಮೇಲೆ ನಿಗಾ ಇರಿಸಲು ವಿಶೇಷ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ನಗರ ಪ್ರವೇಶ ಮಾಡುವ ಚೆಕ್‌ಪೋಸ್ಟ್ ಸೇರಿದಂತೆ ಹೆದ್ದಾರಿ ಮತ್ತು ಜನನಿಬಿಡ ಪ್ರದೇಶಗಳಲ್ಲಿ ಗಸ್ತಿನಲ್ಲಿರುವ ಪೊಲೀಸರು, ಅನುಮಾನಾಸ್ಪದ ವ್ಯಕ್ತಿಗಳು ಕಂಡರೆ ಅವರ ಬೆರಳಚ್ಚು ಪಡೆದು ಹಳೆಯ ಅಪರಾಧಿಯೇ ಎಂಬುದನ್ನು ಪತ್ತೆಹಚ್ಚಿ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದರು. ಪರಿಣಾಮ ನಗರದಲ್ಲಿ ಅಪರಾಧ ಕೃತ್ಯಗಳು ಕ್ಷೀಣಿಸಿವೆ.
698 ಜನರ ಬಂಧನ:
ಹಳೆಯ ಅಪರಾಧಿಗಳ ಮೇಲೆ ನಿಗಾವಹಿಸಿದ್ದ ನಗರ ಪೊಲೀಸರು, ಎರಡು ವರ್ಷಗಳಲ್ಲಿ ವಿವಿಧ ಪ್ರಕರಣಗಳಡಿ 698 ಜನರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಅಪರಾಧ ಕೃತ್ಯಗಳ ಬಗ್ಗೆ ಪತ್ತೆಗೆ ಕೈಗೊಂಡ ಕಾರ್ಯಾಚರಣೆಯಿಂದ ಶೇ. 46ಕ್ಕಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದು, ಸಾರ್ವಜನಿಕರು ನಿಟ್ಟಿಸಿರು ಬಿಡುವಂತಾಗಿದೆ.
2022 ಮತ್ತು 2023ರಲ್ಲಿ ಮೈಸೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ 1,348 ಅಪರಾಧ ಪ್ರಕರಣಗಳು ದಾಖಲಾಗಿದ್ದು, 618 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ.
ವಾಹನ ಕಳ್ಳರೇ ಹೆಚ್ಚು :
ಅಪರಾಧ ಕೃತ್ಯಗಳಲ್ಲಿ ಜೈಲುಪಾಲಾದವರಲ್ಲಿ ವಾಹನ ಖದೀಮರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 214 ಮಂದಿ ವಾಹನ ಕಳ್ಳರನ್ನು ಬಂಧಿಸಲಾಗಿದ್ದು, 107 ಸರಗಳ್ಳರನ್ನು ಬಂಧಿಸಿ ಹೆಡೆಮುರಿ ಕಟ್ಟಲಾಗಿದೆ. ಇದರಿಂದ ನಗರದಲ್ಲಿ ಸರಗಳ್ಳತನ ನಿಯಂತ್ರಣಕ್ಕೆ ಬಂದಿದೆ.
ದರೋಡೆ ಮತ್ತು ಸುಲಿಗೆ ಪ್ರಕರಣಗಳಿಂದ 107 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ ನಾನಾ ಕಳ್ಳತನ ಪ್ರಕರಣಗಳ ಸಂಬಂಧ 83 ಕಳ್ಳರನ್ನು ಬಂಧಿಸಲಾಗಿದೆ.

ಸರಗಳ್ಳತನಕ್ಕೆ ಕಡಿವಾಣ:

ನಗರದಲ್ಲಿ ಹಿಂದೆ ದಿನನಿತ್ಯ ನಡೆಯುತ್ತಿದ್ದ ಸರಗಳ್ಳ ಪ್ರಕರಣಕ್ಕೆ ಬಹುತೇಕ ಕಡಿವಾಣ ಹಾಕಲಾಗಿದೆ. ನಿತ್ಯ ಬೆಳಗ್ಗೆ ಹಾಗೂ ಸಂಜೆ ನಗರದ ಆಯ್ದ ಬಡಾವಣೆಗಳು ಸೇರಿದಂತೆ ತಿರುವು, ವಾಯು ವಿಹಾರ ಮಾಡುವ ಸ್ಥಳ, ದೇವಸ್ಥಾನದ ಹೊರ ಭಾಗ ಸೇರಿದಂತೆ ಹಲವು ಕಡೆಗಳಲ್ಲಿ ಸಮವಸ್ತ್ರ ಹಾಗೂ ಮಫ್ತಿಯಲ್ಲಿ ಪೊಲೀಸರನ್ನು ನಿಯೋಜಿಸಿ ನಿಗಾ ಇರಿಸಲಾಗಿದೆ. ಅಲ್ಲದೆ ರಾತ್ರಿ ಗಸ್ತು ಕೂಡ ಹೆಚ್ಚಿಸಿದ್ದರಿಂದ ಅಪರಾಧದ ಜತೆಗೆ ಸರಗಳ್ಳತನಕ್ಕೂ ಕಡಿವಾಣ ಬಿದ್ದಿದೆ.

ಕೋಟ್…
ಪ್ರವಾಸಿತಾಣವಾಗಿರುವ ಮೈಸೂರಿಗೆ ದೇಶ, ವಿದೇಶದಿಂದಲೂ ಪ್ರವಾಸಿಗರು ಆಗಮಿಸುವುದರಿಂದ ಹೆಚ್ಚಿನ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ನಗರ ಅಪರಾಧವನ್ನು ಗಮನಿಸಿದರೆ ಹೆಚ್ಚಾಗಿ ಹಳೇ ಅಪರಾಧಿಗಳೇ ಭಾಗಿಯಾಗಿರುವುದು ಕಂಡು ಬಂದಿದೆ. ಹಾಗಾಗಿ ಹಳೇ ಕಳ್ಳರ ಮೇಲೆ ನಿಗಾ ವಹಿಸಲಾಗಿತ್ತಲ್ಲದೆ, ಆಗಾಗ ರೌಡಿ ಪರೇಡ್ ನಡೆಸಿ ಹಳೇ ಅಪರಾಧಿಗಳ ಮೇಲೆ ನಿಗಾ ವಹಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು ನಗರ ಪ್ರವೇಶಿಸದಂತೆ ಕಟ್ಟೆಚ್ಚರ ವಹಿಸಿದ್ದರಿಂದ ಅಪರಾಧ ಪ್ರಮಾಣ ಇಳಿಕೆ ಕಂಡಿದೆ.
ಬಿ.ರಮೇಶ್ ಬಾನೋತ್, ನಗರ ಪೊಲೀಸ್ ಕಮೀಷನರ್

ಅಪರಾಧ ಪ್ರಕರಣಗಳು
2022
ವರದಿಯಾದ ಅಪರಾಧ ಪ್ರಕರಣಗಳು-755
ಪತ್ತೆಯಾದ ಪ್ರಕರಣಗಳು-371.
ಬಂಧಿಸಿದ ಆರೋಪಿಗಳ ಸಂಖ್ಯೆ-432.

2023
ವರದಿಯಾದ ಅಪರಾಧ ಕೃತ್ಯಗಳು-593
ಪತ್ತೆಯಾದ ಕೃತ್ಯಗಳು-247
ಬಂಧಿಸಿದ ಆರೋಪಿಗಳ ಸಂಖ್ಯೆ-266.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net