ಚುನಾವಣಾ ಅಕ್ರಮಗಳ ಮೇಲೆ ಹದ್ದಿನ ಕಣ್ಣು

mp election
Published on

ಸದೇಶ್ ಕಾರ್ಮಾಡ್ ಮೈಸೂರು
ಚುನಾವಣೆ ಸಂದರ್ಭ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ನಾನಾ ರೀತಿಯ ಕಸರತ್ತುಗಳನ್ನು ನಡೆಸುತ್ತಲೇ ಇರುತ್ತವೆ. ಮತದಾರರಿಗೆ ವಿವಿಧ ಆಮಿಷೆಗಳನ್ನು ಒಡ್ಡುವ ಜತೆಗೆ ಹಣ, ಹೆಂಡ ಹಂಚಿಕೆಯೂ ಜೋರಾಗಿಯೇ ನಡೆಯುತ್ತದೆ. ಈ ಎಲ್ಲ ಅಕ್ರಮ ಗಳಿಗೆ ಕಡಿವಾಣ ಹಾಕಲು ಚುನಾವಣಾ ಆಯೋಗ ಹದ್ದಿನ ಕಣ್ಣು ಇರಿಸಿದೆ.

ಜಿಲ್ಲೆಯಲ್ಲಿ ಒಟ್ಟು 11 ವಿಧಾನಸಭಾ ಕ್ಷೇತ್ರಗಳು ಹಾಗೂ 3 ಲೋಕಸಭಾ ಕ್ಷೇತ್ರಗಳು ಇವೆ. ಮೈಸೂರು-ಕೊಡಗು, ಚಾಮರಾಜನಗರ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಚುನಾವಣಾ ಅಕ್ರಮಗಳ ತಡೆಗೆ ಹಲವು ತಂಡಗಳನ್ನು ರಚಿಸಿ ಕಟ್ಟುನಿಟ್ಟಿನ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ. ಮಾದರಿ ನೀತಿ ಸಂಹಿತೆ (ಮಾ.16 ರಿಂದ) ಜಾರಿಯಾದ ನಂತರ ಕೇವಲ 10 ದಿನಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 64 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಸೂಕ್ತ ದಾಖಲೆ ಹಾಜರು ಪಡಿಸಿದ ಹಿನ್ನೆಲೆಯಲ್ಲಿ 70 ಸಾವಿರ ರೂ.ಗಳನ್ನು ಸಂಬಂಧಿಸಿದವರಿಗೆ ಹಸ್ತಾಂತರಿಸಲಾಗಿದೆ. 30.09 ಲಕ್ಷ ರೂ.ಗಳನ್ನು ಆದಾಯ ತೆರಿಗೆ ಇಲಾಖೆಗೆ ಒಪ್ಪಿಸಲಾಗಿದ್ದು, 32.94 ಲಕ್ಷ ರೂ.ಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ. ಇದುವರೆಗೆ 77,850 ರೂ. ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಮೂರು ಪಾಳಿಯಲ್ಲಿ ಕರ್ತವ್ಯ

ಜಿಲ್ಲೆಯಲ್ಲಿ 50 ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ರಚಿಸಲಾಗಿದೆ. ಈ ತಂಡದಲ್ಲಿರುವವರು ಮೂರು ಪಾಳಿಯಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ನೀತಿ ಸಂಹಿತೆ ಜಾರಿಗೊಳಿಸುವುದು, ಸಿ-ವಿಜಿಲ್ ದೂರುಗಳಿಗೆ ಸಂಬಂಧಿಸಿದ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. 42 ಸ್ಟಾೃಟಿಕ್ ಸರ್ವೇಲೆನ್ಸ್ ಟೀಂ ರಚಿಸಲಾಗಿದ್ದು, ಈ ತಂಡ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳ ತಪಾಸಣೆ ನಡೆಸಿ ಕಾನೂನು ಬಾಹಿರವಾಗಿ ಹಣ, ಮದ್ಯ ಹಾಗೂ ಇತ್ಯಾದಿಗಳ ಸಾಗಾಣಿಕೆ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಅಲ್ಲದೆ, ಮಾದರಿ ನೀತಿ ಸಂಹಿತೆ ಜಾರಿ ಕುರಿತು ಕಾರ್ಯಾಚರಣೆ ನಡೆಸಿ ವರದಿ ಸಲ್ಲಿಸುತ್ತಿದ್ದಾರೆ.

ಕ್ಯಾಮರಾ ಕಣ್ಗಾವಲು

ಸಭೆ, ಸಮಾರಂಭಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆಯೇ ಎಂದು ಪರಿಶೀಲಿಸಲು 23 ವಿಡಿಯೋ ಸರ್ವೇಲೆನ್ಸ್ ತಂಡ ರಚಿಸಲಾಗಿದ್ದು, ಈ ತಂಡಗಳು ವಿಧಾನಸಭಾ ಕ್ಷೇತ್ರವಾರು ಸಂಚರಿಸಿ ರಾಜಕೀಯ ಪಕ್ಷಗಳ ಸಭೆ, ಸಮಾರಂಭಗಳು, ರ‌್ಯಾಲಿಗಳು ಹಾಗೂ ಇತರೆ ಸಭೆ, ಸಮಾರಂಭಗಳ ವಿಡಿಯೋ ಚಿತ್ರೀಕರಣ ಮಾಡಿ ವರದಿ ನೀಡುತ್ತಿದ್ದಾರೆ. ಈ ತಂಡದವರು ನೀಡುವ ವಿಡಿಯೋ ಗಳನ್ನು ಪರಿಶೀಲಿಸಿ ನೀತಿ ಸಂಹಿತೆ ಉಲ್ಲಂಘನೆಯಾಗಿದೆಯೇ ಎಂದು ತಿಳಿದುಕೊಳ್ಳಲು 12 ವಿಡಿಯೋ ವೀವಿಂಗ್ ಟೀಂ ರಚಿಸಲಾಗಿದೆ. ಈ ತಂಡ ವಿಡಿಯೋಗಳನ್ನು ವೀಕ್ಷಿಸಿ ನೀತಿ ಸಂಹಿತೆ ಉಲ್ಲಂಘನೆ ಕುರಿತು ವರದಿ ಸಲ್ಲಿಸುತ್ತಿದ್ದಾರೆ.

ಖರ್ಚುವೆಚ್ಚದ ಮೇಲೆ ಕಣ್ಣು

ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ಕಣ್ಣಿರಿಸಲು 11 ಅಕೌಂಟಿಂಗ್ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಅಭ್ಯರ್ಥಿಗಳ ಚುನಾವಣಾ ವೆಚ್ಚಗಳ ದಾಖಲಾತಿಗಳು, ಶ್ಯಾಡೋ ಅಬ್ಸರ್ವೇಷನ್, ರಿಜಿಸ್ಟರ್ ನಿರ್ವಹಣೆ, ಅಭ್ಯರ್ಥಿಗಳ ಚುನಾವಣಾ ವೆಚ್ಚಗಳಿಗೆ ಸಂಬಂಧಿಸಿದಂತೆ ಕಡಗಳನ್ನು ನಿರ್ವಹಣೆ ಮಾಡುತ್ತಿದೆ. ಇದರೊಂದಿಗೆ 15 ಸಹಾಯಕ ವೆಚ್ಚ ವೀಕ್ಷಕರನ್ನು ನೇಮಿಸಲಾಗಿದ್ದು, ಇವರು ವೆಚ್ಚ ವೀಕ್ಷಕರಿಗೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಲೆಕ್ಕ ತಂಡದ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ನಡೆಸಿ ವೆಚ್ಚ ವೀಕ್ಷಕರಿಗೆ ವರದಿ ಸಲ್ಲಿಸುತ್ತಿದ್ದಾರೆ.

ಜಿಲ್ಲಾ ಮಟ್ಟದ ಸಮಿತಿ ಮತ್ತು ಸೆಲ್‌ಗಳು

ನೀತಿ ಸಹಿಂತೆ ಜಾರಿಗೆ ಜಿಲ್ಲಾ ಮಟ್ಟದಲ್ಲಿ ಸಮಿತಿ ಹಾಗೂ ಸೆಲ್‌ಗಳನ್ನು ರಚಿಸಲಾಗಿದೆ. ನೀತಿ ಸಂಹಿತೆ ಕೋಶ, ವೆಚ್ಚ ಉಸ್ತುವಾರಿ ಕೋಶ, ವೆಚ್ಚ ಉಸ್ತುವಾರಿ ಸಮಿತಿ, ಮಾಧ್ಯಮ ಪ್ರಾಮಾಣೀಕರಣ ಮತ್ತು ಮಾಧ್ಯಮ ಮೇಲ್ವಿಚಾರಣಾ ಸಮಿತಿ, ಮಾಧ್ಯಮ ಪೂರ್ವ ಪ್ರಾಮಾಣೀಕರಣ ಪರಿಶೀಲನೆ ಕೋಶ, ದೂರು ಮೇಲ್ವಿಚಾರಣೆ ಕೋಶ, ಕುಂದುಕೊರತೆ ಮೇಲ್ವಿಚಾರಣೆ ಸಮಿತಿಯನ್ನು ರಚಿಸಲಾಗಿದೆ. ಜಿಲ್ಲಾಡಳಿತದಿಂದ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 241 ಸೆಕ್ಟರ್ ಆಫೀಸರ್‌ಗಳನ್ನು ನಿಯೋಜಿಸಲಾಗಿದೆ. ಇವರುಗಳು ಮತಗಟ್ಟೆ ಪರಿಶೀಲನೆ, ಅಗತ್ಯ ವ್ಯವಸ್ಥೆ ಕಲ್ಪಿಸಲು ವರದಿ ಸಲ್ಲಿಸುವ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೆ, ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿ ಅಂತಹ ಮತಗಟ್ಟೆ ವ್ಯಾಪ್ತಿಯ ಮತದಾರರಲ್ಲಿ ವಿಶ್ವಾಸ ತುಂಬುವ ಕಾರ್ಯವನ್ನು ಮಾಡುತ್ತಿದ್ದಾರೆ.

ಸಿ-ವಿಜಿಲ್ ಮೂಲಕ ದೂರು

ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕೋಸ್ಕರ ಆನ್‌ಲೈನ್ ಮೊಬೈಲ್ ತಂತ್ರಾಂಶ ಸಿ-ವಿಜಿಲ್ ಅಭಿವೃದ್ಧಿ ಪಡಿಸಿದೆ. ಸಾರ್ವಜನಿಕರು ಗೂಗಲ್ ಪ್ಲೇಸ್ಟೋರ್‌ನಿಂದ ಸಿ-ವಿಜಿಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಸಾರ್ವಜನಿಕರು ಈ ಆ್ಯಪ್ ಮೂಲಕ ಮಾದರಿ ನೀತಿ ಸಂಹಿತೆ ಹಾಗೂ ಚುನಾವಣಾ ವೆಚ್ಚದ ಉಲ್ಲಂಘನೆ ಕುರಿತು ದೂರು ಸಲ್ಲಿಸಬಹುದು. ಈ ದೂರಿಗೆ ಚುನಾವಣಾ ಆಯೋಗ ರಚಿಸಿರುವ ವಿವಿಧ ತಂಡಗಳು ಕಾರ್ಯಾಚರಣೆ ನಡೆಸಲಿದೆ.

ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ಜಿಲ್ಲೆಯಾದ್ಯಂತ ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ಪ್ರತಿಯೊಂದು ವಾಹನಗಳನ್ನು ತಪಾಸಣೆ ನಡೆಸಿ 50 ಸಾವಿರಕ್ಕಿಂತ ಹೆಚ್ಚು ಹಣ ಸಾಗಿಸುತ್ತಿರುವುದು ಕಂಡು ಬಂದರೆ ಅಂತಹ ವಾಹನವನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗುತ್ತಿದೆ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಹಲವು ತಂಡಗಳನ್ನು ರಚಿಸಲಾಗಿದೆ.
ಡಾ.ಕೆ.ವಿ. ರಾಜೇಂದ್ರ,
ಜಿಲ್ಲಾ ಚುನಾವಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net