ಮತದಾನಕ್ಕೆ ನಗರವಾಸಿಗಳ ತಾತ್ಸಾರ

vote
Published on

ಮೈಸೂರು: ಈ ಬಾರಿಯ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಶೇ.70.62ರಷ್ಟು ಮತದಾನ ನಡೆದಿದ್ದರೂ ಸುಶಿಕ್ಷಿತರು ಮತ್ತು ಪ್ರಜ್ಞಾವಂತರೇ ಹೆಚ್ಚಾಗಿ ಮತದಾನದಿಂದ ದೂರ ಉಳಿದಿರುವುದು ಅಂಕಿ, ಅಂಶಗಳಿಂದ ಬಯಲಾಗಿದ್ದು, ಇದು ಆತಂಕದ ಬೆಳವಣಿಗೆಯಾಗಿದೆ.

ಕ್ಷೇತ್ರದ ಗ್ರಾಮಾಂತರ ಭಾಗವಾದ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಅತಿ ಹೆಚ್ಚು ಶೇ.80.19ರಷ್ಟು ಮತದಾನವಾಗಿದ್ದರೆ, ವಿದ್ಯಾವಂತರು ಹೆಚ್ಚಾಗಿದ್ದಾರೆ ಎನ್ನಲಾಗುವ ಕೃಷ್ಣರಾಜ(ಕೆ.ಆರ್.) ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಅಂದರೆ ಶೇ.60.87ರಷ್ಟು ಮತದಾನವಾಗಿದೆ. ಇನ್ನು ನಗರ ಭಾಗದ ಚಾಮರಾಜ ಕ್ಷೇತ್ರದಲ್ಲಿ ಶೇ.60.89 ಹಾಗೂ ನರಸಿಂಹರಾಜ ಕ್ಷೇತ್ರದಲ್ಲಿ ಶೇ. 65.55 ರಷ್ಟು ಮತದಾನವಾಗಿದೆ.

ಹುಣಸೂರಿನಲ್ಲಿ ಶೇ.77.91, ಮಡಿಕೇರಿಯಲ್ಲಿ 75.41 ಹಾಗೂ ವಿರಾಜಪೇಟೆಯಲ್ಲಿ ಶೇ.75.41ರಷ್ಟು ಉತ್ತಮ ಮತದಾನವಾಗಿದೆ. ಇನ್ನು ಹಳ್ಳಿ ಮತ್ತು ನಗರ ಪ್ರದೇಶ ಎರಡನ್ನೂ ಹೊಂದಿರುವ ಚಾಮುಂಡೇಶ್ವರಿ ಶೇ.73.40 ರಷ್ಟು ಮತದಾನವಾಗಿದೆ. ಹಳ್ಳಿಗಾಡಿನ ಜನರು ಮತದಾನದಲ್ಲಿ ಉತ್ಸಾಹದಿಂದ ಭಾಗಿಯಾಗಿ ಪ್ರಜಾಪ್ರಭುತ್ವದ ಹಬ್ಬವನ್ನು ಯಶಸ್ವಿಯಾಗಿ ಆಚರಿಸಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

‘ಸುಸಂಸ್ಕೃತರು ಮತ್ತು ವಿದ್ಯಾವಂತರ ತವರು’ ಎಂಬ ಹಿರಿಮೆ ಹೊಂದಿರುವ ಚಾಮರಾಜ ಮತ್ತು ಕೃಷ್ಣರಾಜ ಕ್ಷೇತ್ರಗಳಲ್ಲಿ ಬಹಳಷ್ಟು ಜನರು ಮತ ಚಲಾಯಿಸಿಲ್ಲ. ಇದು ಪ್ರಜ್ಞಾವಂತರ ಅಜ್ಞಾನದ ಕೆಲಸ ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ವಿಶ್ಲೇಷಿಸಲಾಗುತ್ತಿದೆ. ವ್ಯವಸ್ಥೆ ವಿರುದ್ಧ ಸದಾ ಕಿಡಿಕಾರುವ ಈ ನಗರವಾಸಿಗಳು ತಮ್ಮ ಜವಾಬ್ದಾರಿ ನಿರ್ವಹಣೆ ಬಂದಾಗ ಮಾತ್ರ ಪಲಾಯನ ಮಾಡುತ್ತಿದ್ದಾರೆ. ಮತದಾನದ ಕುರಿತು ಅವರಿಗೆ ಇರುವ ನಿರ್ಲಕ್ಷೃವೇ ಇದಕ್ಕೆ ಕಾರಣ ಎಂಬ ವಿಷಯ ಚರ್ಚೆಯಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net