

ಹುಬ್ಬಳ್ಳಿ: ಆಧುನಿಕತೆ ಹೆಚ್ಚಾದಂತೆ ಪ್ರತಿ ಮನೆಯಿಂದಲೂ ಇ ವೇಸ್ಟ್ ಉತ್ಪಾದನೆಯಾಗುತ್ತಿದೆ. ಇದರ ಬಗ್ಗೆ ಸ್ಥಳೀಯ ಆಡಳಿತಗಳು ಗಮನ ಹರಿಸಬೇಕು. ಮಾಲಿನ್ಯ ಮುಕ್ತ ಕರ್ನಾಟಕ ಧ್ಯೇಯ ವಾಕ್ಯವನ್ನು ಸಾಕಾರಗೊಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮನವಿ ಮಾಡಿದರು.
ಇಲ್ಲಿಯ ನೆಹರು ಮೈದಾನದಲ್ಲಿ ಮಂಗಳವಾರ ಧಾರವಾಡ, ಗದಗ ಮತ್ತು ಉತ್ತರಕನ್ನಡ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪನೆಯಾಗಿ 50 ವರ್ಷಗಳಾದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸುವರ್ಣ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಹವಾಮಾನ ವೈಪರೀತ್ಯದಿಂದಾಗಿ ಇತ್ತೀಚೆಗೆ ಅಕಾಲಿಕ ಮಳೆಯಂತಹ ವಿಕೋಪಗಳು ಜಾಸ್ತಿಯಾಗುತ್ತಿವೆ. ಹಾಗಾಗಿ ಎಲ್ಲೆಡೆ ಪರಿಸರ ಜಾಗೃತಿ ಮೂಡಿಸಬೇಕಿದೆ. ಅನಗತ್ಯವಾಗಿ ವಾಹನಗಳನ್ನು ಬಳಸಬಾರು. ಪೇಟೆಗೆ ಹೋಗುವಾಗ ಬಟ್ಟೆ ಚೀಲ ತೆಗೆದುಕೊಂಡು ಹೋಗಬೇಕು. ಇಂತಹ ಸಣ್ಣ ಪುಟ್ಟ ಕಾಳಜಿಯಿಂದ ಪರಿಸರಕ್ಕೆ ಎಷ್ಟೋ ಅನುಕೂಲವಾಗಲಿದೆ ಎಂದರು.
ಸಾರ್ವಜನಿಕ ಸಹಭಾಗಿತ್ವವಿಲ್ಲದೆ ಪರಿಸರ ರಕ್ಷಣೆ ಸಾಧ್ಯವಾಗುವುದಿಲ್ಲ. ಪಾಲಕರು ಮಕ್ಕಳಿಗೆ ಪರಿಸರ ಸಂರಕ್ಷಣೆ ಬಗ್ಗೆಯೂ ತಿಳಿವಳಿಕೆ ನೀಡಬೇಕು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1974ರಲ್ಲಿಯೇ ಪರಿಸರ ಜಾಗೃತಿಗೆ ಆದ್ಯತೆ ನೀಡಿದರು. ಜಲ ಕಾಯ್ದೆ ಜಾರಿಗೆ ತಂದರು. ಆದರೆ, ನಾವು ಪರಿಸರವನ್ನು ಮರೆತಿದ್ದೇವೆ. ಪ್ಲಾಸ್ಟಿಕ್ ಮಾರಕ ಎಂದು ಗೊತ್ತಿದ್ದರೂ ಬಳಸುತ್ತಿದ್ದೇವೆ. ನಿತ್ಯ ಬಳಸುವ ಹಾಲಿನ ಪ್ಯಾಕೇಟ್ ತುದಿಯಿಂದಲೇ ಎಷ್ಟೋ ಪರಿಸರ ಹಾಳಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಅವರಲ್ಲಿ ಮುಖ್ಯವಾಗಿ ಪರಿಸರ ಕಾಳಜಿ ಮೂಡಿಸಬೇಕಾಗಿದೆ. ಪರಿಸರದ ಬಗ್ಗೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಕಾಳಜಿಯನ್ನು ಮಕ್ಕಳಿಗೆ ತಿಳಿಸಬೇಕು. ಆದರೆ, ಮಕ್ಕಳು ಇಂದು ಜಾತಿ, ಧರ್ಮದ ಸಲುವಾಗಿ ಬೀದಿಗೆ ಬರುತ್ತಿದ್ದಾರೆ. ಇದು ನಿಲ್ಲಬೇಕು ಎಂದರು.
ವೆರ್ಟಿಕಲ್ ಡೆವಲಪ್‌ಮೆಂಟ್:
ಅಧ್ಯಕ್ಷತೆ ವಹಿಸಿದ್ದ ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ನಗರ ಪ್ರದೇಶದಲ್ಲಿ ಎತ್ತರದ ಕಟ್ಟಡಗಳಿಗೆ ಅವಕಾಶ ನೀಡಿ ವೆರ್ಟಿಕಲ್ ಡೆವಲಪ್‌ಮೆಂಟ್ ಗೆ ಹೆಚ್ಚು ಒತ್ತು ನೀಡಿದರೆ ಒಂದಷ್ಟು ಭೂಮಿ ಸಮಸ್ಯೆ ತಗ್ಗಿಸಬಹುದು. ತ್ಯಾಜ್ಯದ ಮೇಲೆ ತೆರಿಗೆ ಹಾಕುವಾಗ ಉದ್ಯಮದ ಜಾಗ ನೋಡದೇ ತ್ಯಾಜ್ಯದ ಪ್ರಮಾಣ ಆಧರಿಸಿ ನಿರ್ಧರಿಸಬೇಕು. ಕೆರೆ ಕಟ್ಟೆಗಳನ್ನು ಉಳಿಸುವ ಬಗ್ಗೆ ಮಂಡಳಿ ಗಮನ ಹರಿಸಬೇಕು. ಸಸ್ಯಂ ಶಿವಂ ಸುಂದರಂ ಎನ್ನುವುದು ಎಲ್ಲರ ಮಂತ್ರವಾಗಬೇಕು ಎಂದರು.
ಶಾಸಕ ಅರಬೈಲ್ ಶಿವರಾಮ ಹೆಬ್ಬಾರ, ಮೇಯರ್ ಜ್ಯೋತಿ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶಾಕೀರ್ ಸನದಿ, ಧಾರವಾಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ಪಾಟೀಲ, ಉತ್ತರ ಕನ್ನಡ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ ಜಿಲ್ಲಾಧಿಕಾರಿ ದಿವ್ಯ ಪ್ರಭು, ಧಾರವಾಡ ಮಂಡಳಿ ವಲಯ ಕಚೇರಿ ಹಿರಿಯ ಪರಿಸರ ಅಧಿಕಾರಿ ಗೋಪಾಲಕೃಷ್ಣ, ಪರಿಸರ ಅಧಿಕಾರಿ ಐ.ಎಚ್. ಜಗದೀಶ, ಇತರರು ಪಾಲ್ಗೊಂಡಿದ್ದರು.
ಇಂದಿರಾ ಪ್ರಿಯದರ್ಶಿನಿ:
ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.
ಧಾರವಾಡ ಜಿಲ್ಲೆಯ ಪಂಡಿತ ಮುಂಜಿ -ಪ್ರಥಮ, ವೀರಪ್ಪ ಅರಕೇರಿ -ದ್ವೀತಿಯ, ಮೇಘರಾಜ ಕೆರೂರು -ತೃತೀಯ ಸ್ಥಾನ ಪಡೆದರು.
ಜಿಲ್ಲಾ ಮಟ್ಟದ ಚಿತ್ರಕಲಾ ಸ್ಫರ್ಧೆಯಲ್ಲಿ ಕೇಶ್ವಾಪುರದ ಕಾನ್ವೆಂಟ್ ಹೈಸ್ಕೂಲಿನ ಸುಖದಾ ಮುರಗ -ಪ್ರಥಮ, ಕಲಘಟಗಿ -ಹುಲಕೊಪ್ಪದ ಜಿಎಚ್ಎಸ್ ಶಾಲೆಯ ವಿಜಯಲಕ್ಷ್ಮಿ ಬಡಿಗೇರ -ದ್ವೀತಿಯ, ನವಲಗುಂದ ತಾಲೂಕು ಎನ್.ಜಿ.ಬಿ.ಜಿ.ಎಚ್.ಎಸ್. ಶಿರೂರ ಶಾಲೆಯ ಗಾಯತ್ರಿ ದೊಡಮನಿ -ತೃತೀಯ ಸ್ಥಾನ ಪಡೆದಿದ್ದಾರೆ.
ಪರಿಸರ ಮಿತ್ರ: ಧಾರವಾಡ ಗ್ರಾಮೀಣ ತಾಲೂಕಿನ ವೀರಾಪುರ ಸರ್ಕಾರಿ ಪ್ರೌಢಶಾಲೆ, ಧಾರವಾಡ ಶಹರ ತಾಲೂಕಿನ ಎತ್ತಿನಗುಡ್ಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬಂಜಾರ ಕಾಲನಿಯ ಸೇಂಟ್ ಆನ್ಸ ಪ್ರೌಢಶಾಲೆ, ಹುಬ್ಬಳ್ಳಿ ಶಹರ ತಾಲೂಕಿನ ವಿಶ್ವೇಶ್ವರನಗರದ ಸರ್ಕಾರಿ ಪ್ರೌಢ ಶಾಲೆ, ಕಲಘಟಗಿ ತಾಲೂಕಿನ ಬಗಡಗೇರಿಯ ಸರ್ಕಾರಿ ಪ್ರೌಢ ಶಾಲೆ, ಕುಂದಗೋಳ ತಾಲೂಕಿನ ಬೆಟದೂರ ಗ್ರಾಮದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ, ನವಲಗುಂದ ತಾಲೂಕಿನ ಚಿಲಕವಾಡ ಗ್ರಾಮದ ಎಚ್.ಕೆ. ಜಿಕೆ ಕೋನರಡ್ಡಿ ಕೆಪಿಎಸ್ ಶಾಲೆ.
ಪ್ರಬಂಧ ಸ್ಪರ್ಧೆ: ಹುಬ್ಬಳ್ಳಿ ವಿಶ್ವೇಶ್ವರನಗರದ ಸರ್ಕಾರಿ ಪ್ರೌಢಶಾಲೆಯ ಮಧುರಾ ಜೋಗಿ -ಪ್ರಥಮ, ಯಾದವಾಡ ಎಸ್.ವಿ.ಎಸ್ ಶಾಲೆಯ ಸೃಷ್ಟಿ ಎನ್. -ದ್ವೀತಿಯ, ಉಗ್ಗಿನಕೇರಿ ಸರ್ಕಾರಿ ಪ್ರೌಢಶಾಲೆ ಸೌಮ್ಯ ಕುರುಬರ ತೃತೀಯ ಸ್ಥಾನ ಪಡೆದಿದ್ದಾರೆ.
ಪರಿಸರ ಗೀತೆ: ರಂಜನಿ ಮಹಿಳಾ ಮಂಡಳ ಪ್ರಥಮ, ಗಾನಸಿಂಚನ ಮಹಿಳಾ ಮಂಡಳ ದ್ವೀತಿಯ, ಭೂಮಿಕಾ ಮಹಿಳಾ ಮಂಡಳ ತಂಡ ತೃತೀಯ ಸ್ಥಾನ ಪಡೆದಿದ್ದಾರೆ.
ಪೌರಕಾರ್ಮಿಕರು: ಶಿವಕ್ಕ ದೇವಾನಂದ, ಅಮರಾಪುರ ಪ್ರಥಮ, ನಾಗವ್ವ ಹೊಸಮನಿ ದ್ವೀತಿಯ, ಶಿವಾನಂದ ಕೊಂಡಪಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.