ಮೈಸೂರಿನಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಇ-ವಾಹನ

mcc
Published on
  • ಪಾಲಿಕೆಯ ಪರಿಸರ ಸ್ನೇಹಿ ನಡೆ
  • 5 ಎಲೆಕ್ಟ್ರಿಕ್ ವಾಹನ ಖರೀದಿ

ಸದೇಶ್ ಕಾರ್ಮಾಡ್ ಮೈಸೂರು
ಸ್ವಚ್ಛತೆಯಲ್ಲಿ ಪ್ರತಿ ಬಾರಿ ರಾಷ್ಟ್ರದ ಗಮನ ಸೆಳೆಯುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರು ಇದೀಗ ಸ್ವಚ್ಛತಾ ಕಾರ್ಯಕ್ಕೂ ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ಮೂಲಕ ರಾಷ್ಟ್ರದ ಗಮನ ಸೆಳೆಯಲು ಹೊರಟಿದೆ. ಇ-ವಾಹನ ಖರೀದಿ, ಇ-ತ್ಯಾಜ್ಯ ವಿಲೇವಾರಿ, ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆ ನಿಷೇಧದ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮದ ಮೂಲಕ ನಗರ ಪಾಲಿಕೆಯು ಉತ್ತಮ ಪರಿಸರ ಸ್ನೇಹಿ ನಡೆ ಅನುಸರಿಸಲು ಪ್ರಾರಂಭಿಸಿದೆ.

ನಗರದ ಹೃದಯ ಭಾಗದ ವಾಣಿಜ್ಯ ಮಳಿಗೆಗಳಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ನಗರ ಪಾಲಿಕೆಯು 6 ತಿಂಗಳ ಹಿಂದೆ 5 ಎಲೆಕ್ಟ್ರಿಕ್ ಆಟೋ ಟಿಪ್ಪರ್‌ಗಳನ್ನು ಖರೀದಿಸಿದ್ದು, ಈ ಆಟೋ ಟಿಪ್ಪರ್‌ಗಳು ಪೆಟ್ರೋಲ್ ಮತ್ತು ಡೀಸೆಲ್ ಚಾಲಿತ ಆಟೋ ಟಿಪ್ಪರ್‌ಗಳಷ್ಟೇ ಕಾರ್ಯಕ್ಷಮತೆ ಹೊಂದಿವೆ.
ತಲಾ 6 ಲಕ್ಷ ರೂ.ವೆಚ್ಚದಲ್ಲಿ 5 ಎಲೆಕ್ಟ್ರಿಕ್ ಆಟೋ ಟಿಪ್ಪರ್‌ಗಳನ್ನು ಖರೀದಿಸಲಾಗಿದೆ. 4 ಗಂಟೆ ಚಾರ್ಜ್ ಮಾಡಿದರೆ 80 ಕಿ.ಮೀ.ವರೆಗೆ ಸಂಚರಿಸಬಹುದು. 400 ರಿಂದ 500 ಕೆ.ಜಿ. ತ್ಯಾಜ್ಯವನ್ನು ತುಂಬಬಹುದು. ಗಂಟೆಗೆ 40 ರಿಂದ 60 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಇಂಧನ ಉಳಿತಾಯ:
ಪ್ರಸ್ತುತ ಇಂಧನ ದರ ದಿನೇ ದಿನೆ ಏರಿಕೆಯಾಗುತ್ತಿದೆ. ಹೀಗಾಗಿ ಪೆಟ್ರೋಲ್ ಹಾಗೂ ಡೀಸೆಲ್ ಚಾಲಿತ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಗಳ ಖರೀದಿಯತ್ತ ಜನರು ಆಸಕ್ತಿ ತೋರುತ್ತಿದ್ದಾರೆ. ಅದೇ ಹಾದಿಯನ್ನು ನಗರ ಪಾಲಿಕೆಯು ಸಹ ತುಳಿದಿದೆ. ಎಲೆಕ್ಟ್ರಿಕ್ ಟಿಪ್ಪರ್ ಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಎಲೆಕ್ಟ್ರಿಕ್ ಟಿಪ್ಪರ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ನಗರ ಪಾಲಿಕೆ ಉದ್ದೇಶಿಸಿದೆ. ಇದರಿಂದ ನಗರ ಪಾಲಿಕೆಗೆ ದೊಡ್ಡ ಪ್ರಮಾಣದಲ್ಲಿ ಇಂಧನ ಉಳಿತಾಯವಾಗಲಿದೆ ಅಲ್ಲದೆ ವಾಯು ಮಾಲಿನ್ಯದ ಪ್ರಮಾಣ ತಗ್ಗಿಸುವಲ್ಲೂ ಇದು ಬಹುದೊಡ್ಡ ಕೊಡುಗೆಯಾಗಲಿದೆ.

ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳುವ ನಗರಗಳು ಸ್ವಚ್ಛತೆ ಹಾಗೂ ಪರಿಸರ ಉಳಿವಿನ ನಿಟ್ಟಿನಲ್ಲಿ ವಿಶೇಷವಾದ ಬದಲಾವಣೆ ಹಾಗೂ ವಿಶೇಷ ಪ್ರಯೋಗಗಳನ್ನು ಕೈಗೊಳ್ಳಬೇಕು. ಆ ರೀತಿಯ ಹೊಸ ಬದಲಾವಣೆಯನ್ನು ಸ್ವಚ್ಛ ಸರ್ವೇಕ್ಷಣೆಯಲ್ಲಿ ವಿಶೇಷವಾಗಿ ಗುರುತಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ನಗರ ಪೂರ್ಣ ಪ್ರಮಾಣದಲ್ಲಿ ಸ್ವಚ್ಛತೆಗೆ ಇ-ವಾಹನ ಬಳಕೆ ಮಾಡಲು ಪ್ರಾರಂಭಿಸಿದರೆ ಮೈಸೂರು ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುವುದರಲ್ಲಿ ಸಂಶಯವಿಲ್ಲ.

ಕೇವಲ ಎಲೆಕ್ಟ್ರಿಕ್ ವಾಹನಗಳ ಖರೀದಿಯಲ್ಲಿ ಮಾತ್ರವಲ್ಲ ನಗರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಪಾಲಿಕೆ ನಿಷೇಧಿಸಿದ್ದು, ಆದೇಶ ಪಾಲಿಸದೆ ಇರುವವರಿಗೆ ದೊಡ್ಡ ಪ್ರಮಾಣದಲ್ಲಿ ದಂಡ ವಿಧಿಸಲು ಪ್ರಾರಂಭಿಸಿದೆ. ಪಾಲಿಕೆಯ ದಂಡ ಪ್ರಯೋಗದಿಂದ ನಗರದ ಬಹುತೇಕ ಕಡೆಗಳಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಂತಿದ್ದು, ಜನರು ಸಾಮಗ್ರಿಗಳನ್ನು ಖರೀದಿಸಲು ಅನಿವಾರ್ಯವಾಗಿ ಇದೀಗ ಬಟ್ಟೆ ಬ್ಯಾಗ್‌ಗಳನ್ನು ಬಳಕೆ ಮಾಡಲು ಪ್ರಾರಂಭಿಸಿದ್ದಾರೆ. ಪಾಲಿಕೆಯ ಈ ಪರಿಸರ ಸ್ನೇಹಿ ನಡೆಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಾರ್ವಜನಿಕರು ಪ್ಲಾಸ್ಟಿಕ್ ಬ್ಯಾಗ್ ಬಳಿಸಿದರೆ ಮೊದಲ ಬಾರಿ 200 ರೂ., 2ನೇ ಬಾರಿ 500 ರೂ. ದಂಡ ವಿಧಿಸಲಾಗುವುದು. ಅದೇ ರೀತಿ ಬೀದಿ ಬದಿ ವ್ಯಾಪಾರಿಗಳು ಬಳಸಿದರೆ ಕ್ರಮವಾಗಿ 500 ರೂ., 1,000 ರೂ., ವಾಣಿಜ್ಯೋದ್ಯಮಿಗಳಿಗೆ 5,000 ರೂ., 10,000 ರೂ., ಮಾರಾಟ ಅಥವಾ ವಿತರಣೆ ಮಾಡುವವರಿಗೆ 25,000 ರೂ., 50,000 ರೂ., ಸಂಗ್ರಹಣೆ ಅಥವಾ ಸಾಗಾಣಿಕೆ ಮಾಡುವವರಿಗೆ 50,000 ರೂ., 1,00,000 ರೂ., ಪ್ಲಾಸ್ಟಿಕ್ ತಯಾರಿಸುವ ಯಾವುದೇ ಕೈಗಾರಿಕೆ ಅಥವಾ ವ್ಯಕ್ತಿಗಳಿಗೆ ಮೊದಲ ಬಾರಿಗೆ 1,00,000 ರೂ., ಎರಡನೇ ಬಾರಿಗೆ 2,00,000 ರೂ. ದಂಡ ವಿಧಿಸಲಾಗುತ್ತಿದೆ. ನಗರದಲ್ಲಿ ಪ್ಲಾಸ್ಟಿಕ್ ಬಳಕೆಗೆ ದಂಡ ವಿಧಿಸಲು ಪ್ರಾರಂಭಿಸಿದ ನಂತರ ದೊಡ್ಡ ಪ್ರಮಾಣದಲ್ಲಿ ಬದಲಾವಣೆಗಳು ಕಾಣಲು ಪ್ರಾರಂಭವಾಗಿದ್ದು, ಈ ಕ್ರಮ ಇದೇ ರೀತಿ ಮುಂದುವರೆದರೆ ಶೀಘ್ರದಲ್ಲಿ ಯೇ ನಗರ ಪ್ಲಾಸ್ಟಿಕ್ ಮುಕ್ತವಾಗಲಿದೆ.

ಡಾ.ಡಿ.ಜಿ. ನಾಗರಾಜ್, ಮೈಸೂರು  ನಗರ ಪಾಲಿಕೆ ಆರೋಗ್ಯಾಧಿಕಾರಿ
ಡಾ.ಡಿ.ಜಿ. ನಾಗರಾಜ್, ಮೈಸೂರು ನಗರ ಪಾಲಿಕೆ ಆರೋಗ್ಯಾಧಿಕಾರಿ

ಇ-ತ್ಯಾಜ್ಯ ಸಂಗ್ರಹ:
ತಂತ್ರಜ್ಞಾನ ಬಳಕೆ ಪ್ರಮಾಣ ಹೆಚ್ಚಾದಂತೆ ಪ್ರತಿ ಮನೆಗಳೂ ಇ-ತ್ಯಾಜ್ಯ ಉತ್ಪಾದನೆಯ ಕೇಂದ್ರವಾಗಿವೆ. ಇ-ತ್ಯಾಜ್ಯಗಳನ್ನು ಸಮರ್ಪ ಕವಾಗಿ ವಿಲೇವಾರಿ ಮಾಡದೆ ಹೋದರೆ ಪರಿಸರಕ್ಕೆ ದೊಡ್ಡ ಪ್ರಮಾಣದ ಹಾನಿ ಉಂಟಾಗಲಿದೆ ಎಂಬುದನ್ನು ಮನಗಂಡ ನಗರ ಪಾಲಿಕೆಯು ಇತ್ತೀಚೆಗೆ ಇ-ತ್ಯಾಜ್ಯ ಸಂಗ್ರಹಣೆಗೆ ವಿಶೇಷ ಅಭಿಯಾನ ಹಮ್ಮಿಕೊಂಡು ಇ-ತ್ಯಾಜ್ಯ ಸಂಗ್ರಹಿಸಿತು. ಇ-ತ್ಯಾಜ್ಯಗಳನ್ನು ಮರು ಬಳಕೆ ಮಾಡಲು ಅವಕಾಶವಿದ್ದು, ಪಾಲಿಕೆಯ ಈ ಪರಿಸರ ಸ್ನೇಹಿ ನಡೆಯಿಂದ ದೊಡ್ಡ ಪ್ರಮಾಣದಲ್ಲಿ ಇ-ತ್ಯಾಜ್ಯವು ಭೂಮಿ ಸೇರುವುದು ತಪ್ಪಿದೆ. ಈ ರೀತಿ ನಗರ ಪಾಲಿಕೆ ಆಗಿಂದಾಗೆ ಇ-ತ್ಯಾಜ್ಯವನ್ನು ಸಂಗ್ರಹಿಸುವ ಅಭಿಯಾನವನ್ನು ಹಮ್ಮಿಕೊಳ್ಳುವ ಅವಶ್ಯಕತೆ ಇದೆ.


ಪರಿಸರ ಸ್ನೇಹಿ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ ನಗರ ಪಾಲಿಕೆ 5 ಇ-ಆಟೋ ಟಿಪ್ಪರ್‌ಗಳನ್ನು ಖರೀದಿಸಿದ್ದು, ಇ- ಆಟೋ ಟಿಪ್ಪರ್‌ಗಳನ್ನು ನಗರದ ವಾಣಿಜ್ಯ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿಗೆ ಬಳಕೆ ಮಾಡಲಾಗುತ್ತಿದೆ. ಇ-ಟಿಪ್ಪರ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಪಾಲಿಕೆಗೆ ದೊಡ್ಡ ಪ್ರಮಾಣದಲ್ಲಿ ಇಂಧನ ಉಳಿತಾಯವಾಗಲಿದೆ. ಅಲ್ಲದೆ, ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ ನೀಡಿದಂತಾಗಿದೆ.

ಡಾ.ಡಿ.ಜಿ. ನಾಗರಾಜ್, ಪಾಲಿಕೆ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net