

ಆರ್.ಬಿ.ಜಗದೀಶ್ ಕಾರ್ಕಳ
ಪುರಸಭಾ ವ್ಯಾಪ್ತಿಯ ಬಂಗ್ಲೆಗುಡ್ಡೆ ಜಂಕ್ಷನ್, ಆನೆಕೆರೆ ಹಾಗೂ ವಿಸ್ತೃತ ಬಸ್ ನಿಲ್ದಾಣ ಪರಿಸರದಲ್ಲಿ ಇ-ಟಾಯ್ಲೆಟ್ ನಿರ್ಮಾಣವಾಗಲಿದೆ.
2018ರಲ್ಲಿ ಅಂದಿನ ರಾಜ್ಯ ಸರ್ಕಾರ ನಗರೋತ್ಥಾನ ಹಂತ-3ರ ಅಡಿಯಲ್ಲಿ ಬಿಡುಗಡೆಗೊಳಿಸಿವ 3 ಕೋಟಿ ರೂ. ಅನುದಾನದಲ್ಲಿ ವಿವಿಧ ಕಾಮಗಾರಿಗಳಲ್ಲಿ ಇ-ಟಾಯ್ಲೆಟ್ ಕೂಡ ಒಳಗೊಂಡಿದೆ. ನಾಲ್ಕು ಕಡೆಗಳಲ್ಲಿ ನಿರ್ಮಾಣಗೊಳ್ಳಲಿರುವ ಇ-ಟಾಯ್ಲೆಟ್‌ಗಳ ಒಟ್ಟು ವೆಚ್ಚ 26 ಲಕ್ಷ ರೂ.ಆಗಿದೆ. ಸಾರ್ವಜನಿಕ ಉಪಯೋಗಕ್ಕೆ ಇರುವ ಇ-ಟಾಯ್ಲೆಟ್ ಬಳಕೆಗೆ ನಾಗರಿಕರು ಐದು ರೂ. ನಾಣ್ಯ ಬಳಸಬೇಕಾಗಿದ್ದು, ಒಳಪ್ರವೇಶಿಸುವ ದ್ವಾರದ ಪಕ್ಕದಲ್ಲಿ ಜೋಡಣೆ ಮಾಡಲಾಗುವ ಯಂತ್ರದ ಪೆಟ್ಟಿಗೆಯೊಳಗೆ ಐದು ರೂ.ನಾಣ್ಯವನ್ನು ಹಾಕಿದಾಗ ಸ್ವಯಂ ಚಾಲಿತ ಬಾಗಿಲು ತೆರೆದುಕೊಳ್ಳುತ್ತದೆ. ಸಾಮಾನ್ಯ ಸಾರ್ವಜನಿಕ ಶೌಚಗೃಹಗಳನ್ನು ಕಾರ್ಮಿಕ ನಿರ್ವಹಣೆಯೊಂದಿಗೆ ಶೌಚಕ್ಕೆ ಹೋಗುವವರಿಂದ ಶುಲ್ಕ ವಸೂಲು ಮಾಡಲಾಗುತ್ತದೆ. ಅಲ್ಲಿ ಸಂಗ್ರಹವಾಗುವ ಶುಲ್ಕ ನಿರ್ವಹಣೆ ನಡೆಸುವ ಸಂಸ್ಥೆ ಪಾಲಾಗುತ್ತದೆ ಹೊರತು ಸ್ಥಳೀಯಾಡಳಿತಕ್ಕೆ ಯಾವುದೇ ಅದಾಯ ಇರುವುದಿಲ್ಲ. ಸಾರ್ವಜನಿಕ ಶೌಚಗೃಹಗಳಲ್ಲಿ ಮೂಲ ಸೌಕರ್ಯದ ಜೊತೆಗೆ ಸ್ವಚ್ಛತೆಗೆ ಒತ್ತು ನೀಡುತ್ತಿಲ್ಲ ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದ್ದರೂ ಸ್ಥಳೀಯಾಡಳಿತ ಅದಕ್ಕೆ ಸ್ಪಂದಿಸುವುದಿಲ್ಲ ಎಂಬ ದೂರು ಬರುತ್ತಿವೆ.
ಇಂತಹ ಪರಿಸ್ಥಿತಿಯ ನಡುವೆ ಇ-ಟಾಯ್ಲೆಟ್‌ನ ಸ್ಥಳದಲ್ಲಿಯೇ ದಿನಪೂರ್ತಿ ಕೆಲಸ ನಿರ್ವಹಿಸುವ ಅಗತ್ಯ ಇರುವುದಿಲ್ಲ. ಇಲ್ಲಿ ಸಂಗ್ರಹವಾಗುವ ಶುಲ್ಕ ನೇರವಾಗಿ ಸ್ಥಳೀಯಾಡಳಿತಕ್ಕೆ ಸಂದಾಯವಾಗುತ್ತದೆ. ಬಂಗ್ಲೆಗುಡ್ಡೆ ಜಂಕ್ಷನ್‌ನಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಶೌಚಗುಂಡಿ ತೋಡಬೇಕಾಗುತ್ತದೆ. ಆನೆಕೆರೆ, ವಿಸ್ತೃತ ಬಸ್ ನಿಲ್ದಾಣ ಪರಿಸರದಲ್ಲಿ ನಿರ್ಮಾಣಗೊಳ್ಳಲಿರುವ ಇ-ಟಾಯ್ಲೆಟ್‌ನ ತ್ಯಾಜ್ಯವು ನೇರವಾಗಿ ಒಳಚರಂಡಿಗೆ ಜೋಡಣೆ ಮಾಡಲಾಗುತ್ತದೆ. ಇ-ಟಾಯ್ಲೆಟ್‌ನಲ್ಲಿ 300 ಲೀಟರರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಇರುತ್ತದೆ. ಹೆಚ್ಚುವರಿ ನೀರಿನ ಅಗತ್ಯ ಬೇಕಾದಲ್ಲಿ ಸ್ಥಳೀಯಾಡಳಿತವೇ ಟ್ಯಾಂಕ್‌ಗಳನ್ನು ಜೋಡಣೆ ಮಾಡಬೇಕಾಗುತ್ತದೆ. ಕಾಪು ಸುರೇಶ್ ಶೆಟ್ಟಿ ಕಾಮಗಾರಿ ವಹಿಸಿಕೊಂಡಿದ್ದು, ಒಂದು ವರ್ಷ ಅವಧಿಗೆ ನಿರ್ವಹಣೆ ನಡೆಸಲಿದ್ದಾರೆ.
ನಗರೋತ್ಥಾನದ ಇತರ ಕಾಮಗಾರಿ: ನಗರೋತ್ಥಾನ ಹಂತ-3 ಯೋಜನೆಗೆ 2018 ಸಾಲಿನಲ್ಲಿ ಅಂದಿನ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಕಾರ್ಕಳ ಪುರಸಭಾ ಕಚೇರಿಯ ಮುಂಭಾಗ ಹಾಗೂ ಸಾಲ್ಮರದಲ್ಲಿ ಚಾಲನೆ ನೀಡಿದ್ದರು. ಶಾಸಕ ವಿ.ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೆನರಾ ಬ್ಯಾಂಕ್ ಸಮೀಪದಿಂದ ಪೆರ್ವಾಜೆ ರಸ್ತೆ, ಗುಡ್ಡೆಯಂಗಡಿಯಿಂದ ಗಾಜ್ರಾಯ ಆಸ್ಪತ್ರೆ ರಸ್ತೆ, ಗಾಂಧಿ ಮೈದಾನದಿಂದ ಹವಾಲ್ದಾರ್ ಬೆಟ್ಟು ರಸ್ತೆ, ಜೋಗಲ್‌ಬೆಟ್ಟುನಿಂದ ಇಂದುಗುರಿ ರಸ್ತೆಗಳಿಗೆ ಡಾಂಬರು, ಎಸ್.ಸಿ ಮತ್ತು ಎಸ್‌ಟಿ ಕಾಲನಿಗಳಾದ ಮರಿಣಾಪುರ, ಬಂಡೀಮಠ, ಪತ್ತೊಂಜಿಕಟ್ಟೆ, ಶಾಮತಿನಗರ, ದಾನಸಾಲೆ, ಕುಂಬ್ರಪದವು ರಸ್ತೆಗಳಿಗೆ ಕಾಂಕ್ರೀಟ್ ಕಾಮಗಾರಿ ಇದರಲ್ಲಿ ಒಳಗೊಂಡಿದೆ. ಇದರ ಕಾಮಗಾರಿ ಈಗ ಪೂರ್ಣಗೊಂಡಿವೆ.
ನಗರೋತ್ಥಾನ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿ ಜಾರಿಗೊಂಡಿದೆ. ಇ- ಟಾಯ್ಲೆಟ್ ಕಾರ್ಕಳ ನಗರದ ಹೊಸತನ ನೀಡಲಿದೆ. ಸ್ವಚ್ಚತೆ, ಸುಂದರ ನಗರಕ್ಕೆ ಪೂರಕವಾಗಿದೆ ಯೋಜನೆ.
ರೇಖಾ ಶೆಟ್ಟಿ, ಮುಖ್ಯಾಧಿಕಾರಿ ಕಾರ್ಕಳ ಪುರಸಭೆ