ಮಂಗಳೂರು: ಕರಾವಳಿ ಕರ್ನಾಟಕದ ಪ್ರಮುಖ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಪ್ರವಾಸಿ ತಾಣವಾದ ಪಿಲಿಕುಳ ನಿಸರ್ಗಧಾಮದಲ್ಲಿ ಪ್ರವಾಸಿಗರ ಅನುಕೂಲತೆ, ಸುಗಮ ಪ್ರವೇಶ ವ್ಯವಸ್ಥೆ ಹಾಗೂ ಡಿಜಿಟಲ್ ಸೇವೆಗಳ ವಿಸ್ತರಣೆಯ ಉದ್ದೇಶದಿಂದ ಆಧುನಿಕ ಇ-ಟಿಕೇಟಿಂಗ್ ವ್ಯವಸ್ಥೆಗೆ ಮೇ 13ರಂದು ಚಾಲನೆ ಸಿಗಲಿದೆ.
ಪಿಲಿಕುಳ ಬಾಕ್ಸ್ ಆಫೀಸ್‌ನಲ್ಲಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವ ಎನ್.ಎಸ್.ಭೋಸರಾಜು ಅವರು ಸಂಜೆ 5 ಗಂಟೆಗೆ ಚಾಲನೆ ನೀಡಲಿದ್ದಾರೆ.
ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರವಾಸಿಗರು ಆನ್‌ಲೈನ್ ಹಾಗೂಆಫ್‌ಲೈನ್ ಎರಡೂ ವಿಧಾನಗಳ ಮೂಲಕ ಟಿಕೇಟ್ ಪಡೆಯುವಂತೆ ವ್ಯವಸ್ಥೆ ರೂಪಿಸಲಾದೆ. ಇದರ ಮೂಲಕ ಪ್ರವೇಶ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭ, ಪಾರದರ್ಶಕ ಹಾಗೂ ಸಮಯ ಉಳಿತಾಯವಾಗುವಂತೆ ಮಾಡಲಾಗಿದೆ.
ಈ ಯೋಜನೆಯ ಮೊದಲ ಹಂತವಾಗಿ ಪಿಲಿಕುಳದ ಮುಖ್ಯ ಪ್ರವೇಶ ದ್ವಾರದಲ್ಲಿ ಕಿಯೋಸ್ಕ್ ಆಧಾರಿತ ಕಾಗದ ರಹಿತ ಇ-ಟಿಕೆಟಿಂಗ್ ವ್ಯವಸ್ಥೆ ಸ್ಥಾಪಿಸಲಾಗಿದೆ. ಪ್ರವಾಸಿಗರು ಕಿಯೋಸ್ಕ್ ಮೂಲಕ ತ್ವರಿತವಾಗಿ ಟಿಕೇಟ್ ಪಡೆದು ವಿವಿಧ ಘಟಕಗಳಿಗೆ ಪ್ರವೇಶಿಸಬಹುದಾಗಿದೆ. ಡಿಜಿಟಲ್ ಪಾವತಿ ವ್ಯವಸ್ಥೆ, ಕ್ಯೂಆರ್ ಕೋಡ್ ಆಧಾರಿತ ಟಿಕೇಟಿಂಗ್ ಹಾಗೂ ಸ್ವಯಂ ಸೇವಾ ಸೌಲಭ್ಯಗಳನ್ನು ಒಳಗೊಂಡಿರುವ ಈ ವ್ಯವಸ್ಥೆಯು ಆಧುನಿಕ ಪ್ರವಾಸೋದ್ಯಮ ನಿರ್ವಹಣೆಯತ್ತ ಮಹತ್ವದ ಹೆಜ್ಜೆಯಾಗಿದೆ.
ಇ-ಟಿಕೇಟಿಂಗ್ ವ್ಯವಸ್ಥೆಯ ಅಳವಡಿಕೆಯಿಂದ ಟಿಕೇಟ್ ವಿತರಣೆ ಮತ್ತು ಪರಿಶೀಲನೆ ಪ್ರಕ್ರಿಯೆ ಸುಗಮಗೊಳ್ಳುವುದರ ಜೊತೆಗೆ ಕಾಗದ ಬಳಕೆಯೂ ಕಡಿಮೆಯಾಗಲಿದ್ದು, ಪರಿಸರ ಸಂರಕ್ಷಣೆಯ ದಿಕ್ಕಿನಲ್ಲಿ ಇದು ಸಹಕಾರಿಯಾಗಲಿದೆ. ಪ್ರವಾಸಿಗರಿಗೆ ಸರತಿ ಸಾಲಿನಲ್ಲಿ ಕಾಯುವ ಅವಶ್ಯಕತೆ ಕಡಿಮೆಯಾಗುವ ಮೂಲಕ ಉತ್ತಮ ಅನುಭವ ದೊರೆಯಲಿದೆ.