

ಕಡೂರು: ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಮರ್ಥವಾಗಿ
ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು
ತಿಳಿಸಿದರು.
ಪಟ್ಟಣದ ಶ್ರೀವೀರಭದ್ರೇಶ್ವ ಸ್ವಾಮಿ ಸಮುದಾಯ ಭವನದಲ್ಲಿ ಧರ್ಮಸ್ಥಳ
ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜ್ಞಾನ ವಿಕಾಸ ಕೇಂದ್ರದ ಸಹಯೋಗದಲ್ಲಿ ನಡೆದ
ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಉದ್ಘಾಟಿಸಿ ಮಾತನಾಡಿ, ಮಹಿಳೆಯರ
ಸ್ವಾವಲಂಬನೆ ಬದುಕಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಪ್ರೋತ್ಸಾಹಿಸುತ್ತಿದೆ.
ಮಹಿಳೆಯರು ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಹೊಂದಿದ್ದು, ಕ್ರೀಡೆ, ಸಾಹಿತ್ಯ, ಕಲೆ,
ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿಯೂ ಮುನ್ನಡೆಯುತ್ತಿದ್ದಾರೆ ಎಂದರು.
12 ಹರಿವಾಣದ ಗುಡಿಕಟ್ಟಿನ ಸಮಿತಿ ಅಧ್ಯಕ್ಷ ಭರತ್ ಕೆಂಪರಾಜ್ ಮಾತನಾಡಿ,
ಮಹಿಳೆಯರಿಗೆ ಜಾಗತಿಕ ಚಿಂತನೆಗಳ ಬಗ್ಗೆ ಅನಾವರಣಗೊಳಿಸಲು
ವಿಚಾರಗೋಷ್ಠಿಗಳು ಹೆಚ್ಚು ಅವಶ್ಯಕ. ಕುಟುಂಬ ನಿರ್ವಹಣೆ ಮತ್ತು ಉತ್ತಮ ಸಮಾಜ
ನಿರ್ಮಾಣ ಮಾಡುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಪ್ರಾದೇಶಿಕ ನಿರ್ದೇಶಕಿ ಗೀತಾ, ಜೆಸಿಐ ಕಡೂರು
ಸ್ವರ್ಣಶ್ರೀ ಘಟಕದ ಅಧ್ಯಕ್ಷೆ ಆಶಾಶ್ರೀನಿವಾಸ್, ಜಿಲ್ಲಾ ಜನಜಾಗೃತಿ ಸದಸ್ಯೆ ಅಶಾ
ತಮ್ಮಯ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಬೇಬಿ, ಜ್ಞಾನ
ವಿಕಾಸಕೇಂದ್ರದ ಸಮನ್ವಯಾಧಿಕಾರಿ ಭಾಗ್ಯ ಹಾಗೂ ಸಂಸ್ಥೆ ಸಿಬ್ಬಂದಿ ಇದ್ದರು.