ಘಾಟಿಯಲ್ಲಿ ಇನ್ಮುಂದೆ ಇ-ಪ್ರಸಾದ

main photo
Published on

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ

ಗ್ರಾಮಾಂತರ ಜಿಲ್ಲೆಯ ಶ್ರೀ ಘಾಟಿ ಸುಬ್ರಹ್ಮಣ್ಯ ದೇಗುಲದ ಭಕ್ತರಿಗೆ ಸಿಹಿಸುದ್ದಿ ನೀಡಿರುವ ಮುಜರಾಯಿ ಇಲಾಖೆ ಇನ್ಮುಂದೆ ದೇಗುಲದ ಪ್ರಸಾದ ಮನೆ ಬಾಗಿಲಿಗೆ ತಲುಪಿಸುವ ಇ-ಪ್ರಸಾದ ವ್ಯವಸ್ಥೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಿದೆ.

ರಾಜ್ಯದ ಪ್ರಮುಖ ದೇವಾಲಯಗಳ ಪ್ರಸಾದಗಳು ಭಕ್ತರ ಮನೆ ಬಾಗಿಲಿಗೆ ತಲುಪಿಸುವ ಯೋಜನೆಯಡಿ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯಲ್ಲಿನ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರವೂ ಸೇರ್ಪಡೆಯಾಗಿದ್ದು ದೇಗುಲದಿಂದ ಪ್ರಸಾದವನ್ನು ಆನ್‌ಲೈನ್ ಮೂಲಕ ಆರ್ಡರ್ ಮಾಡಿ ಪಡೆಯಲು ಇ-ಪ್ರಸಾದ ವೆಬ್‌ಸೈಟ್ ಮೂಲಕ ಅನುಕೂಲವನ್ನು ಕಲ್ಪಿಸಿದೆ. ರಾಜ್ಯದ ಯಾವುದೇ ಜಿಲ್ಲೆಯ ಭಕ್ತರು ಪ್ರಸಾದಕ್ಕೆ ಆರ್ಡರ್ ಮಾಡಿದರೆ ಸಿಎಸ್‌ಸಿ ಸಂಸ್ಥೆಯು ಮನೆ ಬಾಗಿಲಿಗೆ ದೇವಾಲಯದ ಪ್ರಸಾದವನ್ನು ತಲುಪಿಸುವ ಕೆಲಸ ಮಾಡುತ್ತದೆ. ಜಿಲ್ಲೆಯಲ್ಲಿ ಪ್ರಮುಖವಾಗಿ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಹ್ಮಣ್ಯ ದೇಗುಲ, ನೆಲಮಂಗಲದ ಶಿವಗಂಗೆ ಹಾಗೂ ಬೈಲಾಂಜನೇಯ ದೇಗುಲಗಳು ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡಲಿದ್ದು ಇದರಲ್ಲಿ ಘಾಟಿ ಸುಬ್ರಹ್ಮಣ್ಯ ದೇಗುಲವನ್ನು ಈ ಯೋಜನೆಯಡಿ ಆಯ್ಕೆ ಮಾಡಲಾಗಿದೆ.

ಏನೆಲ್ಲ ಇರುತ್ತದೆ? ಪ್ರಸ್ತುತ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿರುವ ಯೋಜನೆಯಡಿ ಹಲವು ಕಡೆಗಳಿಂದ ಆರ್ಡರ್ ಬರುತ್ತಿದೆ. ಎಷ್ಟು ಬೇಡಿಕೆ ಇದೆ ಎಂಬುದರ ಆಧಾರದ ಮೇಲೆ ಪ್ರಸಾದ ತಯಾರಿ ನಡೆಯುತ್ತದೆ, ಘಾಟಿ ಸುಬ್ರಹ್ಮಣ್ಯ ದೇಗುಲದ ಪ್ರಸಾದಕ್ಕೆ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದರೆ ಸ್ವಾಮೀಗೆ ಮಾಡುವ ನೈವೇದ್ಯದ ಪ್ರಸಾದದೊಂದಿಗೆ ಕಲ್ಲುಸಕ್ಕರೆ, ಬಾದಾಮಿ, ಒಣದ್ರಾಕ್ಷಿ, ದೇವರ ಭಾವಚಿತ್ರ, ದೇವರ ದಾರ, ಅರಿಶಿನ ಕುಂಕುಮಗಳನ್ನೊಳಗೊಂಡ ಪ್ಯಾಕೇಟ್ ಪ್ರಸಾದ ರೂಪದಲ್ಲಿ ಭಕ್ತರ ಮನೆಬಾಗಿಲಿಗೆ ತಲುಪಲಿದೆ, ಪ್ರಸ್ತುತ ಇನ್ನು ದರ ನಿಗಧಿಯಾಗಿಲ್ಲ, ಇದು ಸುಮಾರು 120 ರೂ.ನಿಂದ 150 ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ, ಪೋಸ್ಟಲ್ ಮೂಲಕ ಪ್ರಸಾದ ರವಾನೆಯಾಗಲಿದ್ದು ಪೋಸ್ಟಲ್ ದರವನ್ನು ಭಕ್ತರೇ ಭರಿಸಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರ್ಡರ್ ಮಾಡಿದ 3-4 ದಿನಗಳಲ್ಲಿ ಪ್ರಸಾದ ಭಕ್ತರ ಮನೆ ಬಾಗಿಲಿಗೆ ಬರಲಿದೆ. ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿ ಮಾಡಲಾಗಿದೆ, ಹೊರ ರಾಜ್ಯದ ದೇವಾಲಯಗಳ ಪ್ರಸಾದವನ್ನು ಮನೆಗೆ ತಲುಪಿಸುವ ವ್ಯವಸ್ಥೆಗೆ ಒಪ್ಪಿಗೆ ಸಿಕ್ಕಿಲ್ಲ. ಆದರೆ ಹೊರ ರಾಜ್ಯದಲ್ಲಿರುವ ಭಕ್ತರಿಗೆ ರಾಜ್ಯದ ದೇವಾಲಯದ ಪ್ರಸಾದವನ್ನು ತಲುಪಿಸಲಾಗುತ್ತದೆ

ಇ-ಪ್ರಸಾದ ವೆಬ್‌ಸೈಟ್ ಮೂಲಕ ದೇವಾಲಯದ ಪ್ರಸಾದವನ್ನು ಮನೆಗೆ ತರಿಸಿಕೊಳ್ಳುವ ಸೇವೆಗೆ ಚಾಲನೆ ನೀಡಲಾಗಿದೆ, ಕೆಲವು ಕಾರಣಗಳಿಂದಾಗಿ ಹಲವು ವೇಳೆ ಕೆಲವರಿಗೆ ದೇವಾಲಯಗಳಿಗೆ ಹೋಗಲು ಸಾಧ್ಯವಾಗುವುದಿಲ್ಲ. ಹಿರಿಯ ನಾಗರೀಕರು, ವಿಶೇಷ ಚೇತನರು, ಆನಾರೋಗ್ಯಪೀಡಿತರು ಸೇರಿ ಗ್ರಾಮೀಣ, ನಗರ ಹಾಗೂ ಹೊರ ರಾಜ್ಯದ ಭಕ್ತರ ಅನುಕೂಲಕ್ಕಾಗಿ ಇ-ಪ್ರಸಾದ ಸೇವೆ ಆರಂಭಿಸಲಾಗಿದೆ. ಇದಕ್ಕೆ ಪ್ರಾಯೋಗಿಕ ಚಾಲನೆ ನೀಡಲಾಗಿದೆ.

ರಾಮಲಿಂಗಾರೆಡ್ಡಿ, ಮುಜರಾಯಿ ಇಲಾಖೆ ಸಚಿವ

ರಾಜ್ಯದ 14 ದೇಗುಲಗಳಲ್ಲಿ ಭಕ್ತರ ಮನೆ ಬಾಗಿಲಿಗೆ ಪ್ರಸಾದ ತಲುಪಿಸುವ ಇ-ಪ್ರಸಾದ ವ್ಯವಸ್ಥೆಗೆ ಚಾಲನೆ ದೊರೆತಿದ್ದು, ಪ್ರಸ್ತುತ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆಯಲ್ಲಿನ ಶ್ರೀ ಘಾಟಿ ಸುಬ್ರಹ್ಮಣ್ಯ ದೇಗುಲದಲ್ಲೂ ಇ-ಪ್ರಸಾದ ವ್ಯವಸ್ಥೆ ಕೈಗೊಳ್ಳುವಂತೆ ಆದೇಶಿಸಲಾಗಿದೆ, ಪ್ರಸಾದಕ್ಕೆ ಇನ್ನೂ ನಿರ್ದಿಷ್ಟ ದರ ನಿಗಧಿಯಾಗಿಲ್ಲ, 120 ರೂ.ನಿಂದ 150 ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದ್ದು ಈ ಯೋಜನೆಗೆ ಸಂಬಂಧಪಟ್ಟಂತೆ ತಯಾರಿ ನಡೆಯುತ್ತಿದೆ.

ನಾರಾಯಣಸ್ವಾಮಿ, ಇಒ ಘಾಟಿ ಕ್ಷೇತ್ರ

ಯುಗಾದಿ ಹಬ್ಬದಂದು ವಿಶೇಷವಾಗಿ ಪೂಜೆ, ಪ್ರಾರ್ಥನೆ, ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ, ತೆಂಗಿನ ಗರಿಗಳಿಂದ ಚಪ್ಪರ, ತಳಿರು ತೋರಣ, ಹೂವಿನ ಅಲಂಕಾರ, ಬಣ್ಣಬಣ್ಣದ ರಂಗೋಲಿಗಳಿಂದ ಅಲಂಕರಿಸುವುದು ಮತ್ತು ಯುಗಾದಿಯಂದು ದೇವರಿಗೆ ವಿಶೇಷವಾಗಿ ಸಂಕಲ್ಪಿಸಿ, ಪ್ರಾರ್ಥಿಸಿ ಪೂಜೆಯೊಂದಿಗೆ ಬೇವು, ಬೆಲ್ಲ ವಿತರಿಸಲಾಗುತ್ತದೆ. ದೇವಾಲಯಗಳಲ್ಲಿ ಹರಿಕಥೆ, ಭಜನೆ, ಪ್ರಾರ್ಥನೆ, ಸುಗಮ ಸಂಗೀತ, ಭರತನಾಟ್ಯ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು.

ಜಿ.ಜೆ.ಹೇಮಾವತಿ, ಮುಜರಾಯಿ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net