

ಮಂಡ್ಯ: ರಾಜ್ಯಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇ-ಪೌತಿ ಖಾತಾ ಆಂದೋಲನ ಜಿಲ್ಲೆಯಲ್ಲಿ ಪ್ರಾರಂಭವಾಗಿದ್ದು, ಸಾರ್ವಜನಿಕರು ಇನ್ನೂ ಮುಂದೆ ತಾಲೂಕು ಕಚೇರಿಗೆ ಅಲೆದಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಗದಗ ಜಿಲ್ಲೆಯಲ್ಲಿ ಪೈಲೆಟ್ ಪ್ರಾಜೆಕ್ಟ್ ಆಗಿ ಕಳೆದ ಎರಡು ತಿಂಗಳಿಂದ ಈ ಪೌತಿ ಖಾತೆ ಕೆಲಸ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರು, ಉಪ ತಹಸೀಲ್ದಾರ್ ಹಾಗೂ ತಹಸೀಲ್ದಾರ್ ಕಾರ್ಯಪ್ರವೃತ್ತರಾಗಬೇಕು ಎಂದರು.
ಕೃಷಿ ಜಮೀನಿನ ಸ್ವಂತ ಇಡುವಳಿದಾರರು/ ಖಾತೆದಾರರು ಮೃತಗೊಂಡ ನಂತರ ಹಲವಾರು ವರ್ಷಗಳಿಂದ ವಾರಸುದಾರರು ತಮ್ಮ ಹೆಸರಿಗೆ ಖಾತೆಯನ್ನು ವರ್ಗಾವಣೆ ಮಾಡಿಕೊಂಡಿರುವುದಿಲ್ಲ. ಆದರಿಂದ ಪಹಣಿಗಳಲ್ಲಿ ಮೃತ ಖಾತೆದಾರರ ಹೆಸರು ಮುಂದುವರೆಯುತ್ತಿದೆ. ಇದನ್ನು ಸರಿಪಡಿಸಲು ಕಂದಾಯ ಇಲಾಖೆ ಸ್ವಯಂ ಪ್ರೇರಿತವಾಗಿ ಇ-ಖಾತಾ ಆಂದೋಲವನ್ನು ಪ್ರಾರಂಭಿಸಿದೆ ಎಂದರು.
ಕಂದಾಯ ಇಲಾಖೆಯಿಂದ ಇತ್ತೀಚೆಗೆ ಪಹಣಿಗಳನ್ನು ಆಧಾರ ಜೋಡಣೆ ಮಾಡುವ ಸಂದರ್ಭದಲ್ಲಿ ಮೃತ ಖಾತೆದಾರರನ್ನು ಪತ್ತೆ ಹಚ್ಚಿ ವಿವರವನ್ನು ನಮೂದು ಮಾಡಲಾಗಿದೆ. ತಂತ್ರಾಂಶವನ್ನು ಬಳಸಿಕೊಂಡು ಇ-ಪೌತಿ ಖಾತೆ ಮಾಡಿಕೊಡಲಾಗುವುದು. ಗ್ರಾಮ ಆಡಳಿತಾಧಿಕಾರಿಗಳು ನಿಖರ ಮಾಹಿತಿಗಳೊಂದಿಗೆ ತಂತ್ರಾಂಶದಲ್ಲಿ ವರಸುದಾರರು ಹಾಗೂ ಮೃತ ಖಾತೆದಾರರ ವಿವರವನ್ನು ಭರ್ತಿ ಮಾಡಬೇಕಿದ್ದು, ಸಾರ್ವಜನಿಕರು ಮೃತ ಖಾತೆದಾರರ ಮರಣ ಪ್ರಮಾಣ ಪತ್ರ, ವಂಶವೃಕ್ಷ, ಆಧಾರ್ ವಿವರವನ್ನು ಗ್ರಾಮ ಆಡಳಿತಾಧಿಕಾರಿಗಳಿಗೆ ನೀಡಿ ಸಹಕರಿಸಬೇಕು ಎಂದರು.
ಗ್ರಾಮ ಆಡಳಿತಾಧಿಕಾರಿಗಳ ಕೆಲಸ ಪ್ರಮುಖವಾಗಿದ್ದು, ಈಗಾಗಲೇ ಜಿಲ್ಲೆಯ 185 ಗ್ರಾಮ ಆಡಳಿತಾಧಿಕಾರಿಗಳಿಗೆ ಇ-ಆಫೀಸ್‌ನಲ್ಲಿ ಕಾರ್ಯನಿರ್ವಹಿಸಲು ಲ್ಯಾಪ್‌ಟಾಪ್ ನೀಡಲಾಗಿದ್ದು, ಇ- ಪೌತಿ ಖಾತಾ ಆಂದೋಲನಕ್ಕೆ ಬಳಸಿಕೊಳ್ಳಿ. ಇ-ಪೌತಿ ಖಾತಾ ಆಂದೋಲನದ ಬಗ್ಗೆ ತಾತ್ಸಾರ ಹಾಗೂ ನಿರ್ಲಕ್ಷೃ ಮನೋಭಾವನೆ ಕಂಡುಬಂದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶಿವಮೂರ್ತಿ, ಡಿಡಿಎಲ್ಆರ್ ವಿರೂಪಾಕ್ಷ, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್ ಇತರರಿದ್ದರು. ಇ-ಪೌತಿ ಖಾತೆ ವೆಬ್ ಅಪ್ಲಿಕೇಷನ್‌ನಲ್ಲಿ ಭರ್ತಿ ಮಾಡಬೇಕಿರುವ ವಿವರ ಕುರಿತು ಆನ್‌ಲೈನ್ ಮುಖಾಂತರ ಜಿಲ್ಲೆಯ ಎಲ್ಲ ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳಿಗೆ ತರಬೇತಿ ನೀಡಲಾಯಿತು.