

ಕೂಡ್ಲಿಗಿ: ಸಾರ್ವಜನಿಕರು ಆಸ್ತಿಗಳ ಪೌತಿ ಖಾತೆಗಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಇ- ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಸೋಮವಾರ ಇ-ಪೌತಿ ಖಾತೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇ- ಪೌತಿ ಖಾತಾ ತಂತ್ರಾಂಶದಿಂದ ಅತ್ಯಂತ ಕಡಿಮೆ ದಾಖಲೆ ಮೂಲಕ ಶೀಘ್ರವಾಗಿ ವಾರಸುದಾರರಿಗೆ ಪೌತಿ ಖಾತೆ ವರ್ಗಾವಣೆಯಾಗಲಿದೆ. ಈಗಾಗಲೇ ಸರ್ಕಾರ ಕಂದಾಯ ಇಲಾಖೆಗೆ ಒಳಪಟ್ಟಿರುವ ಜಮೀನುಗಳ ಪಹಣಿಗಳಿಗೆ ಮಾಲೀಕರ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗಿದೆ.
ಇದರಿಂದ ಜಮೀನಿನ ದಾಖಲೆಗಳು ನಕಲಿಯಾಗುವುದು ತಪ್ಪಿದೆ. ಗ್ರಾಮ ಆಡಳಿತಾಧಿಕಾರಿಗಳು ಆಧಾರ್ ಜೋಡಣೆ ಮಾಡುವ ಸಂದರ್ಭದಲ್ಲಿ ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿರುವ ಪಹಣಿಗಳನ್ನು(ಆರ್.ಟಿ.ಸಿ) ಗುರುತಿಸಿದ್ದಾರೆ. ಈ ಅಂಕಿ ಅಂಶದಂತೆ ತಾಲೂಕಿನಲ್ಲಿ ಒಟ್ಟು 37,419 ಸಾವಿರ ಅರ್ಜಿಗಳಿದ್ದು ಕಂದಾಯ ಆಡಳಿತಾಧಿಕಾರಿಗಳು ನೂತನ ತಂತ್ರಾಂಶದ ಮೂಲಕ ಅರ್ಜಿಗಳನ್ನು ವಿಲೇವಾರಿ ಮಾಡುವ ಕಾರ್ಯಕ್ಕೆ ಮುಂದಾಗುತ್ತಾರೆ ಎಂದು ತಿಳಿಸಿದರು.
ಪೌತಿ ಖಾತೆಗೆ ಮೃತ ಹೊಂದಿರುವ ವ್ಯಕ್ತಿಯ ಮರಣ ಪ್ರಮಾಣ ಪತ್ರ ಅಥವಾ ಗ್ರಾಮದ ಮಹಜರ್ ವರದಿ, ಮೃತ ವ್ಯಕ್ತಿಯ ವಂಶವೃಕ್ಷ ಅಗತ್ಯ. ಇ- ಪೌತಿ ಖಾತಾ ಆಂದೋಲನದಿಂದ ಆಸ್ತಿಯ ಎಲ್ಲ ವಾರಸುದಾರರ ಒಪ್ಪಿಗೆಯು ದಾಖಲಾಗುವುದರಿಂದ ಕಾನೂನು ಬದ್ಧರಲ್ಲದ ವಾರಸುದಾರರಿಗೆ ಖಾತೆಯಾಗುವುದು ತಪ್ಪಲಿದೆ. ತಂತ್ರಾಂಶದ ಮೂಲಕ ಆಧಾರ್ ಇಕೆವೈಸಿ ಪಡೆಯುವುದರಿಂದ ಮ್ಯುಟೇಷನ್(ಎಂ.ಆರ್)ಪ್ರಕ್ರಿಯೆ ಮುಗಿದ ನಂತರ ಸ್ವಯಂ ಚಾಲಿತವಾಗಿ ಪಹಣಿಯೊಂದಿಗೆ ಆಧಾರ್ ಸಂಖ್ಯೆ ಜೋಡಣೆಯಾಗಲಿದೆ ಎಂದು ತಿಳಿಸಿದರು.
ಮುಖಂಡರಾದ ಢಾಣಿ ರಾಘವೇಂದ್ರ, ಜಿ.ಪಿ.ಗುರುಲಿಂಗಪ್ಪ, ಸಿರಬಿ ಅಂಜಿನಪ್ಪ, ಮರುಳ ಸಿದ್ದಪ್ಪ, ದಿನಕರ, ಮಾರಣ್ಣ ಇತರರಿದ್ದರು.