ಉದ್ಯೋಗ ಚೀಟಿಗೆ ಇ-ಕೆವೈಸಿ ಕಡ್ಡಾಯ: ಜಿಪಂ ಸಿಇಒ ಕೆ.ಆರ್.ನಂದಿನಿ ಮಾಹಿತಿ

Mandya Ceo K.R.Nandini
Published on

ಮಂಡ್ಯ: ಜಿಲ್ಲೆಯ 233 ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನೋಂದಾಯಿತ ಸಕ್ರಿಯ ಕುಟುಂಬಗಳ ಉದ್ಯೋಗ ಚೀಟಿಯ ಎಲ್ಲ ಸದಸ್ಯರು ಅ.31ರೊಳಗಾಗಿ ಇ-ಕೆವೈಸಿ ಹೊಂದುವದು ಕಡ್ಡಾಯವಾಗಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ತಿಳಿಸಿದ್ದಾರೆ.

ಇ-ಕೆವೈಸಿ ಎಲೆಕ್ಟ್ರಾನಿಕ್ ನೊವ್ ಯುವರ್ ಕಸ್ಟಮರ್ ಆಗಿದೆ. ಇದು ಗ್ರಾಹಕರ ಗುರುತು ಮತ್ತು ವಿಳಾಸವನ್ನು ಆಧಾರ್ ದೃಢೀಕರಣದಂತಹ ಡಿಜಿಟಲ್ ವಿಧಾನಗಳ ಮೂಲಕ ಪರಿಶೀಲಿಸುವ ಆನ್‌ಲೈನ್ ಪ್ರಕ್ರಿಯೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಆದೇಶ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪತ್ರ ಹಾಗೂ ವಿಡಿಯೋ ಸಂವಾದದ ಆದೇಶದ ಮೇರೆಗೆ ಮಹಾತ್ಮ ಗಾಂಧಿ ಯೋಜನೆಯಡಿ ಅನುಷ್ಠಾನಿಸುವ ಕಾಮಗಾರಿಗಳಲ್ಲಿ ಭಾಗವಹಿಸುವ ಕೂಲಿಕಾರರ ಹಾಜರಾತಿಯನ್ನು ಎನ್‌ಎಂಎಂಎಸ್ ಆ್ಯಪ್‌ನಲ್ಲಿ ಸೆರೆ ಹಿಡಿಯಲಾಗುತ್ತಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಪ್ರಾಯೋಗಿಕವಾಗಿ ಎನ್‌ಎಂಎಂಎಸ್ ಆ್ಯಪ್ ಇ-ಕೆವೈಸಿ ಸಕ್ರಿಯ ಕೂಲಿಕಾರರ ಮಾಹಿತಿಯನ್ನು ಅಪ್‌ಡೇಟ್ ಮಾಡಲು ಸೂಚಿಸಿದಂತೆ ರಾಜ್ಯದ 6 ಜಿಲ್ಲೆಗಳಲ್ಲಿ ಆರಂಭಗೊಳಿಸಲಾಗಿತ್ತು. ಇದರ ಯಶಸ್ವಿ ನಂತರ ಇತರೆ ಜಿಲ್ಲೆಗಳಿಗೂ ವಿಸ್ತರಿಸಲು ವಿಡಿಯೋ ಸಂವಾದದಲ್ಲಿ ತಿಳಿಸಲಾಗಿದೆ.

ಅದರಂತೆ ಅ.31ರೊಳಗೆ ಪೂರ್ಣಗೊಳಿಸಬೇಕು. ನೋಂದಾಯಿತ ಕೂಲಿಕಾರರಲ್ಲಿ ಸಕ್ರಿಯ ಕೂಲಿಕಾರರ ಮಾಹಿತಿಯನ್ನು ಎನ್‌ಎಂಎಂಎಸ್ ಆ್ಯಪ್ ಇ-ಕೆವೈಸಿ ಅಪ್‌ಲೋಡ್ ಮಾಡುವ ಬಗ್ಗೆ ಗ್ರಾಮ ಪಂಚಾಯಿತಿ/ಗ್ರಾಮ ಮಟ್ಟದಲ್ಲಿ ಜನರಿಗೆ ಅರಿವು ಮೂಡಿಸಲು ಪಿಡಿಒ ಹಾಗೂ ಸಿಬ್ಬಂದಿಗೆ ಸೂಚಿಸಲಾಗಿದೆ. ಈ ಸಂಬಂಧ ತರಬೇತಿ ನೀಡಲಾಗಿದೆ. ನರೇಗಾ ಯೋಜನೆಯಡಿ ಅನುಷ್ಠಾನಗೊಳ್ಳುವ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸುವ ಕೂಲಿಕಾರರ ಪ್ರತಿಯೊಬ್ಬರ ಎಣಿಕೆ ಮೂಲಕ ಎನ್‌ಎಂಎಂಎಸ್ ಆ್ಯಪ್‌ನಲ್ಲಿ ಹಾಜರಾತಿ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ತೆಗೆದುಕೊಳ್ಳುತ್ತಿದೆ. ಇ-ಕೆವೈಸಿ ಹೊಂದುವ ಕೂಲಿಕಾರರ ಹಾಜರಾತಿ ತೆಗೆದುಕೊಳ್ಳುವಾಗ ಅವರ ಆಧಾರ್ ಸಂಖ್ಯೆ ಮತ್ತು ಸ್ಥಳದಲ್ಲಿ ಹಾಜರಿದ್ದವರ ಮುಖ ಹೊಂದಾಣಿಕಯಾಗಿದ್ದಲ್ಲಿ ಮಾತ್ರ ಪರಿಗಣಿಸಲಾಗುತ್ತದೆ. ಅಂತೆಯೇ ಇ-ಕೆವೈಸಿ ಮಾಡಿಸದೇ ಇರುವಂತಹ ಕೂಲಿಕಾರರು ನ.1ರಿಂದ ಆ್ಯಪ್‌ನಲ್ಲಿ ಹಾಜರಾತಿ ತೆಗೆದುಕೊಳ್ಳುವುದಿಲ್ಲ. ಜಿಲ್ಲೆಯಲ್ಲಿ ಒಟ್ಟು 2,00,697 ಸಕ್ರಿಯ ಕೂಲಿಕಾರರಿದ್ದು, ತುರ್ತಾಗಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಪ್ರತಿಯೊಬ್ಬ ಸಕ್ರಿಯ ನರೇಗಾ ಕೂಲಿಕಾರರು ಆಧಾರ್ ಕಾರ್ಡ್ ಹಾಗೂ ಜಾಬ್ ಕಾರ್ಡ್‌ನೊಂದಿಗೆ ನಿಮ್ಮ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಇ-ಕೆವೈಸಿ ಹೊಂದಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net