

ಬೆಳಗಾವಿ: ಮಹಾನಗರ ಪಾಲಿಕೆಯಲ್ಲಿ ಇ-ಖಾತಾ ನೀಡಲು ಆಸ್ತಿಗಳ ಮಾಲೀಕರಿಗೆ ಶೋಷಣೆ ಮಾಡುತ್ತಿರುವ ಅಧಿಕಾರಿ, ಸಿಬ್ಬಂದಿ 10 ರಿಂದ 15 ಸಾವಿರ ರೂ. ವರೆಗೆ ಹಣ ಪಡೆಯುತ್ತಿದ್ದಾರೆ. ಜನಸಾಮಾನ್ಯರಿಗೆ ಆಸ್ತಿ ದಾಖಲೆ ಕೊಡಲು ಈ ರೀತಿ ಶೋಷಣೆ ಮಾಡುವುದನ್ನು ಅಧಿಕಾರಿಗಳು ತಕ್ಷಣವೇ ನಿಲ್ಲಿಸಬೇಕು ಎಂದು ಶಾಸಕರು, ಪಾಲಿಕೆ ಸದಸ್ಯರು ಒತ್ತಾಯಿಸಿದರು.
ನಗರದ ಪಾಲಿಕೆಯ ಪರಿಷತ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಕಂದಾಯ ವಿಭಾಗದ ಅಧಿಕಾರಿ, ಸಿಬ್ಬಂದಿ ಕಾರ್ಯವೈಖರಿ ಹಾಗೂ ಮಧ್ಯವರ್ತಿಗಳ ಹಾವಳಿ, ಬಹುಮಹಡಿ ಕಟ್ಟಡಗಳಿಗೆ ಬೇಕಾಬಿಟ್ಟಿ ಪರವಾನಗಿ, ಮಾಲೀಕರಿಂದ ಹಣ ಸೂಲಿಗೆ ವಿರುದ್ಧ ಶಾಸಕ ಅಭಯ ಪಾಟೀಲ, ಆಸೀಫ್ ಸೇಠ್, ಪಾಲಿಕೆ ಸದಸ್ಯರು ಆಕ್ರೋಶ ಹೊರಹಾಕಿದರು.
ರಾಜ್ಯ ಸರ್ಕಾರವು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ನೀಡಲು 25 ರೂ. ಶುಲ್ಕ ನಿಗದಿಪಡಿಸಿದೆ. ಆದರೂ 10 ರಿಂದ 15 ಸಾವಿರ ರೂ. ಹಣ ನೀಡಬೇಕಿದೆ. ಆಸ್ತಿಗಳ ಮಾಲೀಕರು ಮಧ್ಯವರ್ತಿಗಳ ಮೂಲಕ ಬಂದರೆ ಮಾತ್ರ ಇ-ಖಾತಾ ಸೇರಿ ಇತರ ದಾಖಲೆಗಳು ಸಿಗುತ್ತವೆ. ಜನಸಾಮಾನ್ಯರು ನೇರವಾಗಿ ಕಚೇರಿಗೆ ಬಂದರೆ ಯಾವುದೇ ದಾಖಲೆ ನೀಡುವುದಿಲ್ಲ. ಈ ರೀತಿಯ ಶೋಷಣೆ ನಿಲ್ಲಿಸದಿದ್ದರೆ ಶಾಸಕರೇ ಇ-ಖಾತಾ ವಿತರಣೆ ಅಭಿಯಾನ ಆರಂಭಿಸಬೇಕಾಗುತ್ತದೆ ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಸೂಚಿಸಿದರು.
ಮಹಾನಗರದಲ್ಲಿ ಬಡವರು, ಮಧ್ಯಮ ವರ್ಗದವರು 30ಗಿ40 ನಿವೇಶನದಲ್ಲಿ ಮನೆ ಕಟ್ಟಿಕೊಳ್ಳಲು ವಿವಿಧ ಪರವಾನಗಿ ಕೇಳಿದರೆ ಪಾಲಿಕೆ ಯೋಜನಾ ವಿಭಾಗದ ಅಧಿಕಾರಿಗಳು ನೂರೆಂಟು ಕಾಯ್ದೆ ಕಾನೂನು, ನಿಯಮ ಹೇಳುತ್ತಾರೆ. ಆದರೆ, ಕಾನೂನು ಬಾಹಿರವಾಗಿ ನಗರದಲ್ಲಿ 10 ರಿಂದ 15 ಮಹಡಿ ಅಪಾರ್ಟ್‌ಮೆಂಟ್ ನಿರ್ಮಿಸುತ್ತಿರುವವರಿಗೆ ಏನೂ ಕೇಳುವುದಿಲ್ಲ. ಖುದ್ದು ಪರಿಶೀಲನೆ ನಡೆಸದೆ ಅವರಿಗೆಲ್ಲ ಸೌಲಭ್ಯ ಕಲ್ಪಿಸುತ್ತಿರುವುದು ಏಕೆ? ಎಂದು ಶಾಸಕ ಅಭಯ ಪಾಟೀಲ ತರಾಟೆಗೆ ತೆಗೆದುಕೊಂಡರು.
ಶಾಸಕ ಆಸೀಫ್ ಸೇಠ್ ಮಾತನಾಡಿದರು. ಮೇಯರ್ ಮಂಗೇಶ ಪವಾರ್, ಉಪಮೇಯರ್ ವಾಣಿ ಜೋಶಿ, ಆಯುಕ್ತೆ ಶುಭ ಬಿ. ಇತರರಿದ್ದರು.
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇ-ಖಾತಾ ಕೊಡಲು ಅಧಿಕಾರಿ, ಮಧ್ಯವರ್ತಿಗಳು ವಿದೇಶಿ ವ್ಯಕ್ತಿಯಿಂದ 75 ಸಾವಿರ ರೂ. ಹಣ ಪಡೆದುಕೊಂಡಿದ್ದಾರೆ. ಪಾಲಿಕೆಯ ಮಾನ-ಮರ್ಯಾದೆ ವಿದೇಶಗಳಲ್ಲಿ ಹರಾಜಾಗುತ್ತಿದೆ. ಸರ್ಕಾರ 25 ರೂ. ನಿಗದಿತ ಶುಲ್ಕಕ್ಕೆ ದೊಡ್ಡ ಪ್ರಮಾಣದಲ್ಲಿ ಹಣ ಕೇಳಿದರೆ ಜನ ಸಾಮಾನ್ಯರು ಎಲ್ಲಿಗೆ ಹೋಗಬೇಕು? ಪಾಲಿಕೆ ಆಯುಕ್ತರೇ ಈ ವ್ಯವಸ್ಥೆ ಇಲ್ಲಿಗೆ ನಿಲ್ಲಬೇಕು. ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶಾಸಕ ಅಭಯ ಪಾಟೀಲ ಎಚ್ಚರಿಸಿದರು.