ನಗರದಲ್ಲಿ ಇ-ಖಾತಾ ಅಭಿಯಾನ: ವಾರಕ್ಕೊಂದು ವಾರ್ಡ್‌ನಲ್ಲಿ ಆಯೋಜನೆ

E-Khata Campaign Mandya
Published on

ಮಂಡ್ಯ: ರಾಜ್ಯ ಸರ್ಕಾರ ಆಸ್ತಿ ತೆರಿಗೆಯಲ್ಲಿ ತಿದ್ದುಪಡಿ ತಂದಿದ್ದು, ಇದರಲ್ಲಿ ಎ-ಖಾತಾ ಮತ್ತು ಬಿ-ಖಾತಾ ಎಂದು ಆಸ್ತಿಗಳನ್ನು ವಿಂಗಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಸದುದ್ದೇಶದಿಂದ ವಾರಕ್ಕೊಂದು ವಾರ್ಡ್‌ನಲ್ಲಿ ಇ-ಖಾತಾ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿ ಮತ್ತು ಸಿಬ್ಬಂದಿಗೆ ಆಸ್ತಿ ಕಾಯ್ದೆ ಕುರಿತಾಗಿ ತಿಳಿಸಲಾಗಿದೆ. ಸಾರ್ವಜನಿಕರಿಂದ ಅರ್ಜಿ ಪಡೆದು ಜರೂರಾಗಿ ಪ್ರಗತಿ ಸಾಧಿಸುವಂತೆ ಈಗಾಗಲೇ ನಗರ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. ಅಂತೆಯೇ ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಸ್ತಿಗಳಿಗೂ ಎ-ಖಾತಾ ಮತ್ತು ಬಿ-ಖಾತಾ ನೀಡುವುದು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.

ಮುಖ್ಯವಾಗಿ ಯೋಜನೆಯನ್ನು 3 ತಿಂಗಳೊಳಗಾಗಿ ಶೇ.100ರಷ್ಟು ಪ್ರಗತಿ ಸಾಧಿಸಬೇಕಿದೆ. ಈ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶೀಘ್ರಗತಿಯಲ್ಲಿ ಪ್ರಗತಿಯನ್ನು ಸಾಧಿಸಲು ಇ-ಖಾತಾ ಅಭಿಯಾನವನ್ನು ವಾರ್ಡ್‌ವಾರು ಹಮ್ಮಿಕೊಳ್ಳಲು ನಿರ್ಣಯ ಕೈಗೊಳ್ಳಲಾಗಿದೆ. ಅದರಂತೆ ಮಂಡ್ಯ ನಗರಸಭೆಯಲ್ಲಿ ಇ-ಖಾತಾ ನೀಡಲು ಇ-ಖಾತಾ ಆಂದೋಲನವನ್ನು ವಾರ್ಡ್‌ವಾರು ಕೈಗೊಂಡು ಶೇ.100 ರಷ್ಟು ಪ್ರಗತಿ ಸಾಧಿಸಬೇಕಿದೆ. ವಾರಕ್ಕೆ ಒಂದು ವಾರ್ಡ್‌ನಲ್ಲಿ ಇ-ಖಾತಾ ಅಭಿಯಾನಕ್ಕೆ ದಿನಾಂಕವನ್ನು ನಿಗದಿಪಡಿಸಿಕೊಂಡು ಇದಕ್ಕಾಗಿ ತಂಡ ರಚಿಸಲಾಗಿದೆ.

ತಂಡಗಳು ಆಯಾಯ ವಾರ್ಡ್ ಸದಸ್ಯರ ಸಹಕಾರ ಪಡೆದು ಸಕ್ರಿಯವಾಗಿ ತೊಡಗಿಸಿಕೊಂಡು ಪ್ರಗತಿ ಸಾಧಿಸಬೇಕು. ವಾರ್ಡ್‌ವಾರು ಪ್ರತಿಯೊಂದು ತಂಡಕ್ಕೂ ತಲಾ ಒಬ್ಬರಂತೆ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಆಯಾಯ ವಾರ್ಡ್‌ಗೆ ಸಂಬಂಧಿಸಿದ ಕರ ವಸೂಲಿಗಾರರು, ಕಂದಾಯ ನಿರೀಕ್ಷಕರು ಮತ್ತು ಡೇಟಾ ಎಂಟ್ರಿ ಅಪರೇಟರ್‌ಗೆ ಅವಶ್ಯಕ ಇತರೆ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲು ಸೂಚನೆ ನೀಡಲಾಗಿದೆ.

ಇ-ಖಾತಾ ನೀಡಲು ಬಾಕಿ ಇರುವ ಆಸ್ತಿಗಳನ್ನು ಗುರುತಿಸಿ ಇ-ಖಾತಾ ಪಡೆಯಲು ಗುರುತಿಸಲಾದ ಆಸ್ತಿಗಳ ಮಾಲೀಕರು ಇ-ಖಾತಾ ಪಡೆಯಲು ಅಗತ್ಯ ದಾಖಲೆ ಸಲ್ಲಿಸಲು ಮಾಹಿತಿ ನೀಡಬೇಕು. ಇ-ಖಾತಾ ಅಭಿಯಾನದ ಕುರಿತು ಪ್ರಚಾರ ಮಾಡಲು ಮಂಡ್ಯ ನಗರಸಭೆಯ ಕಸ ಸಂಗ್ರಹಣೆ ವಾಹನಗಳ ಮೂಲಕ ಮುದ್ರಿತ ಧ್ವನಿ(ಆಡಿಯೋ) ಪ್ರಚಾರಪಡಿಸಿ ಮತ್ತು ಕರಪತ್ರ ಮುದ್ರಿಸಿ ಮನೆ ಮನೆಗೆ ತಲುಪಿಸಿ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ತಿಳಿಸಲಾಗಿದೆ.

ಮಂಡ್ಯ ನಗರಸಭೆಯ ಎಲ್.ಇ.ಡಿ. ಸ್ಕ್ರೀನ್ ಮೂಲಕ ಇ-ಖಾತಾ ಆಂದೋಲನದ ಬಗ್ಗೆ ಪ್ರಚುರಪಡಿಸಿ. ಇ-ಖಾತಾ ಪಡೆಯಲು ಅವಶ್ಯವಿರುವ ದಾಖಲೆ ಪಟ್ಟಿಯನ್ನು ನಗರ ಸ್ಥಳೀಯ ಸಂಸ್ಥೆಗಳಲ್ಲ ಪ್ರಚುರಪಡಿಸಲಾಗುತ್ತದೆ. ಅಧಿಕೃತ ಹಾಗೂ ಅನಧಿಕೃತ ಸ್ವತ್ತಿಗಳಿಗೆ ಸಲ್ಲಿಸಬೇಕಾದ ದಾಖಲೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಬೇಕೆಂದು ಸೂಚಿಸಲಾಗಿದೆ.

ಇ-ಖಾತಾ ಪಡೆಯಲು ಬೇಕಾದ ದಾಖಲೆ

’ಎ’ ರಿಜಿಸ್ಟರ್‌ನಲ್ಲಿ ದಾಖಲಿರುವ ಅಸ್ತಿಗಳಿಗೆ ಇ-ಖಾತಾ ನೀಡಲು ಕೆಲ ದಾಖಲೆ ಸಲ್ಲಿಸಬೇಕು. ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು/ದಾನಪತ್ರ/ವಿಭಾಗ ಪತ್ರಗಳು/ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕುಪತ್ರಗಳು/ಮಂಜೂರಾತಿ ಪತ್ರಗಳು/ಕಂದಾಯ ಇಲಾಖೆಯಿಂದ 94 ಸಿಸಿ ಅಡಿ ನೀಡಲಾದ ಹಕ್ಕುಪತ್ರ. ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಢೀಕೃತ ಪ್ರತಿ ಮತ್ತು ನಿವೇಶನಗಳ ಬಿಡುಗಡೆ ಪತ್ರ. ಪ್ರಸಕ್ತ ಸಾಲಿನವರೆಗೆ ಋಣಭಾರ ರಾಹಿತ್ಯ ಪ್ರಮಾಣ ಪತ್ರ. ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ. ಮಾಲೀಕರ ಭಾವಚಿತ್ರ ಮತ್ತು ಸ್ವತ್ತಿನ ಛಾಯಾಚಿತ್ರ. ಮಾಲೀಕರ ಗುರುತಿನ ದಾಖಲೆ (ಆಧಾರ ಕಾರ್ಡ್. ಮತದಾರರ ಗುರುತಿನ ಚೀಟಿ/ಪಾನ್ ಕಾರ್ಡ್/ಪಡಿತರ ಚೀಟಿ) ನೀಡಬೇಕು ಎಂದರು.

ಬಿ ರಿಜಿಸ್ಟರ್‌ನಲ್ಲಿ ದಾಖಲಿಸಬೇಕಾದ ಆಸ್ತಿಗಳಿಗೆ ಇ-ಖಾತಾ ಪಡೆಯಲು ಆಸ್ತಿಗೆ ಸಂಬಂಧಿಸಿದ ಸ್ವತ್ತಿನ ಮಾಲೀಕತ್ವದ ಸಾಬೀತುಪಡಿಸುವ ದಿನಾಂಕ: 10-09-2024ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರಗಳ/ದಾನಪತ್ರ/ವಿಭಾಗ ಪತ್ರ/ಹಕ್ಕು ಖುಲಾಸೆ ಪತ್ರಗಳು. ಭೂ-ಪರಿವರ್ತನಾ ಆದೇಶ/ಪಹಣಿ/ರೆವಿನ್ಯೂ ಸ್ಕೆಚ್/ಇತರೆ ಅವಶ್ಯ ದಾಖಲೆಗಳು. ಪ್ರಸಕ್ತ ಸಾಲಿನವರೆಗೆ ಋಣಭಾರ ರಾಹಿತ್ಯ ಪ್ರಮಾಣ ಪತ್ರ. ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಶೀದಿ. ಮಾಲೀಕರ ಭಾವಚಿತ್ರ ಮತ್ತು ಸ್ವತ್ತಿನ ಛಾಯಾಚಿತ್ರ. ಮಾಲೀಕರ ಗುರುತಿನ ದಾಖಲೆ (ಆಧಾರ ಕಾರ್ಡ್. ಮತದಾರರ ಗುರುತಿನ ಚೀಟಿ/ಪಾನ್ ಕಾರ್ಡ್/ಪಡಿತರ ಚೀಟಿ ನೀಡಬೇಕು.

ಸಂಘದ ಸಹಾಯ ಪಡೆಯಲು ಸಲಹೆ

ವಾರ್ಡ್‌ವಾರು ಇ-ಖಾತಾ ಪಡೆಯದಿರುವ ಆಸ್ತಿಗಳ ಪಟ್ಟಿ ಮಾಡಿಕೊಳ್ಳುವುದು ಮತ್ತು ವಾರ್ಡ್ ಅಥವಾ ಬೀದಿ, ಅಪಾರ್ಟ್‌ಮೆಂಟ್/ಬಡಾವಣೆ ಗುರುತಿಸಿ ಆ ಭಾಗದಲ್ಲಿನ ಸಕ್ರಿಯ ನಾಗರಿಕರ ಗುಂಪುಗಳು ಅಥವಾ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಕ್ರಿಯ ವ್ಯಕ್ತಿಗಳ ಸಹಾಯ ಪಡೆಯಬೇಕು. ಅಂತೆಯೇ ಆಯಾಯ ವಾರ್ಡ್‌ಗಳ ಎನ್‌ಜಿಒ ಮತ್ತು ಎಸ್‌ಎಚ್‌ಜಿ ಗುಂಪು ಸದಸ್ಯರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.

ಆಂದೋಲನದ ದಿನ ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯ ಕಂಪ್ಯೂಟರ್, ಪ್ರಿಂಟರ್ ಮತ್ತು ಇಂಟರ್‌ನೆಟ್ ವ್ಯವಸ್ಥೆ ಮಾಡಿಕೊಳ್ಳಬೇಕು. ಮೂಲ ಸೌಕರ್ಯಗಳೊಂದಿಗೆ ಸಾಕಷ್ಟು ಕುಳಿತುಕೊಳ್ಳುವ ಮತ್ತು ಕಾಯುವ ಸ್ಥಳವನ್ನು ಆಯೋಜಿಸುವುದು ಮತ್ತು ಆಗಮಿಸುವ ನಾಗರಿಕರಿಗೆ ಟೋಕನ್ ನೀಡಬೇಕು. ಇ-ಖಾತಾ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸುವುದು. ಇ-ಖಾತಾ ಆಂದೋಲನಕ್ಕೆ ನಿಯೋಜಿಸಿದ ಅಧಿಕಾರಿ/ಸಿಬ್ಬಂದಿ ಬೆಳಗ್ಗೆ 7ಗಂಟೆಗೆ ವಾರ್ಡ್‌ನಲ್ಲಿದ್ದು, ಆಸ್ತಿದಾರರಿಂದ ದಾಖಲಾತಿ ಸಂಗ್ರಹಿಸಬೇಕು.

ಆಸ್ತಿದಾರರಿಂದ ಸ್ವೀಕರಿಸಿದ ಅರ್ಜಿಗೆ ಒಂದು ವಾರದಲ್ಲಿ ಇ-ಖಾತಾ ನೀಡಲು ಕ್ರಮ ವಹಿಸಬೇಕು. ಇ-ಖಾತಾ ಆಂದೋಲನದ ಪ್ರಗತಿಯ ಮಾಹಿತಿಯನ್ನು ಪ್ರತಿದಿನ ಅಧಿಕಾರಿಗೆ ಸಲ್ಲಿಸಬೇಕು. ಮಂಡ್ಯ ನಗರಸಭೆಯ ಪ್ರಕ್ರಿಯೆ ಕುರಿತು ಯೋಜನಾ ನಿರ್ದೇಶಕರು ವಾರಕ್ಕೊಮ್ಮೆ ಭೇಟಿ ನೀಡಬೇಕು. ಈ ಕಾರ್ಯವು ತ್ವರಿತ ಮತ್ತು ವ್ಯವಸ್ಥಿತವಾಗಿ ಕೈಗೊಳ್ಳುತ್ತಿರುವ ಬಗ್ಗೆ ಪರಿಶೀಲಿಸಿ ಅಗತ್ಯ ಮಾರ್ಗದರ್ಶನ ನೀಡಬೇಕು. ಒಂದು ವೇಳೆ ನಿರ್ಲಕ್ಷೃ ತೋರುವ ಹಾಗೂ ವಿಳಂಬಕ್ಕೆ ಕಾರಣರಾಗುವ ಅಧಿಕಾರಿ/ನೌಕರರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಬೇಕು. ಡಾ.ಕುಮಾರ ಜಿಲ್ಲಾಧಿಕಾರಿ

ರಾಜ್ಯ ಕಾಂಗ್ರೆಸ್ ಸರ್ಕಾರ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಖಾತಾ ಅಂದೋಲನ ಆರಂಭಿಸಿದೆ. ಅದರಂತೆ ಮಂಡ್ಯದಲ್ಲಿ 33,283 ನಿವೇಶನ ಗುರುತಿಸಿದ್ದು, ಈ ಪೈಕಿ 17,764 ಖಾತೆ ಮಾಡಲಾಗಿದೆ. ಉಳಿದ 15 ಸಾವಿರ ಸಂಖ್ಯೆಯ ಖಾತೆ ಮಾಡಿಕೊಡಲು ಆಂದೋಲನ ಸಹಕಾರಿಯಾಗಿದೆ. ಇದನ್ನು ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ರವಿಕುಮಾರ್ ಗಣಿಗ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net