

ಕಡೂರು: ಪೌರಾಡಳಿತ ನಿರ್ದೇಶನಾಲಯದ ವಿಶೇಷ ಯೋಜನೆಯಡಿ ಇ-ಖಾತಾ ಅಭಿಯಾನಕ್ಕೆ ಚಾಲನೆ ನೀಡಿದ್ದು, ಪುರಸಭೆ ವ್ಯಾಪ್ತಿಯ ನೂತನ ಬಡಾವಣೆಗಳ ಮಾಲೀಕರು ಅನಧಿಕೃತ ಸ್ವತ್ತುಗಳಿಗೆ ಇ-ಖಾತಾ ಮಾಡಿಸಿಕೊಳ್ಳಬೇಕು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.
ಶನಿವಾರ ಹಮ್ಮಿಕೊಂಡಿದ್ದ ಇ-ಖಾತಾ ಅಭಿಯಾನ ಮತ್ತು ಇ-ಖಾತಾ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪುರಸಭೆ ವ್ಯಾಪ್ತಿಯ ಕಂದಾಯ ಭೂಮಿ ಪರಿವರ್ತನೆ ಮಾಡಿಕೊಂಡು ಖಾತೆ ಮಾಡಕೊಂಡ ಖಾತೆಗಳಿಗೆ ದಾಖಲೆ ನೀಡಬೇಡಿ, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡದಂತೆ ಆದೇಶಿಸಿತ್ತು. ಆದರೆ ಸಿಎಂ ಸಿದ್ದರಾಮಯ್ಯ ಸಚಿವರ ಸಭೆ ಕರೆದು ವಿಶೇಷ ಯೋಜನೆ ರೂಪಿಸಿ ಇ-ಖಾತಾ ಮಾಡಿಕೊಡಲು ಪುರಸಭೆಗಳಿಗೆ ಆದೇಶ ನೀಡಿದ್ದಾರೆ ಎಂದರು.
ಖಾತೆಯಾಗದೆ ಕಟ್ಟಡ ನಿರ್ಮಾಣ ಮಾಡಿದ್ದರೆ ಎರಡು ಪಟ್ಟು ಹೆಚ್ಚಿನ ಕಂದಾಯ ಪಾವತಿಸಿಕೊಂಡು ಖಾತೆ ಮಾಡಿಕೊಡಲಾಗುವುದು. ಸಾರ್ವಜನಿಕರು ಇಂತಹ ಪ್ರಕರಣಗಳಿದ್ದರೆ ಮಧ್ಯವರ್ತಿಗಳ ಜತೆ ಸಂರ್ಪಕಿಸದೇ ನೇರವಾಗಿ ಪುರಸಭೆ ಮುಖ್ಯಾಧಿಕಾರಿ,ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕು. ಹೊಸ ಬಡಾವಣೆ ಕಟ್ಟಡಗಳು ಪುರಸಭೆ ವ್ಯಾಪ್ತಿಗೆ ಒಳಪಡಲಿದ್ದು , ಮುಂದಿನ ದಿನಗಳಲ್ಲಿ ಬ್ಯಾಂಕ್ ಸಾಲ ಸೌಲಭ್ಯ, ಆಸ್ತಿ ಮರು ಹಂಚಿಕೆ, ಮಾರಾಟಕ್ಕೆ ಈ ದಾಖಲೆಗಳು ಅಗತ್ಯವಾಗಿರುವುದರಿಂದ ಸ್ವತ್ತಿನ ಮಾಲೀಕರು ಈ ಯೋಜನೆಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಉಪಾಧ್ಯಕ್ಷೆ ಮಂಜುಳ ಚಂದ್ರು, ಸದಸ್ಯರಾದ ಸುಧಾ ಉಮೇಶ್, ಯಾಸೀನ್, ಮರುಗುದ್ದಿ ಮನು, ಸುಬ್ಬಣ್ಣ ಹಾಗೂ ಮಂಜುನಾಥ್, ಶಾಮಿಯಾನ ಚಂದ್ರು, ಚಿನ್ನರಾಜ್, ಶಂಕರ್ ಮತ್ತು ಇಂಜಿನಿಯರ್ ಶ್ರೇಯಸ್,ಹರ್ಷ,ತಿಮ್ಮಯ್ಯ, ಶ್ರೀನಿವಾಸ್, ಶಂಕರ್ ಇದ್ದರು.