

ನರೇಗಲ್ಲ: ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಬಳಸಿಕೊಂಡು ನೆಮ್ಮದಿಯ ಜೀವನ ಸಾಗಿಸಬೇಕು ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಫಕೀರಪ್ಪ ಮಳ್ಳಿ ಹೇಳಿದರು. ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಇ-ಖಾತಾ ಅಭಿಯಾನದ ಭಿತ್ತಿಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸಿ ಅವರು ಮಾತನಾಡಿದರು.
ಎ ಖಾತೆ ಪಡೆದುಕೊಳ್ಳಲು ಬಯಸುವವರು ಭೂ ಪರಿವರ್ತನಾ ಆದೇಶ, ಬಡಾವಣೆ ನಕ್ಷೆ, ಸ್ವತ್ತಿನ ಮಾಲೀಕತ್ವ ದೃಢೀಕರಿಸುವ ಕ್ರಯ, ದಾನ, ವಿಲ್, ಹಕ್ಕುಪತ್ರ, ವಿಭಾಗ ಪತ್ರ, ನಮೂನೆ 15ರಲ್ಲಿ ಪಡೆದ ಋಣಭಾರ ಪ್ರಮಾಣ ಪತ್ರ, ಭಾವಚಿತ್ರ, ಸ್ವತ್ತಿನ ಜಿಪಿಎಸ್ ಛಾಯಾಚಿತ್ರ, ಮಾಲೀಕರ ಗುರುತಿನ ಚೀಟಿ, ಆಧಾರ ಕಾರ್ಡ್, ಪಾನ್‌ಕಾರ್ಡ್, ಚಾಲ್ತಿ ಸಾಲಿನ ಕಂದಾಯ ರಸೀದಿ, ವಿದ್ಯುತ್ ಬಿಲ್, ನಲ್ಲಿ ಸಂಪರ್ಕ ಹೊಂದಿದ್ದಲ್ಲಿ ನೀರಿನ ಕಂದಾಯ ಪಾವತಿಸಿರುವ ರಸೀದಿಗಳನ್ನು ಸಲ್ಲಿಸಿ ಎ-ಖಾತೆಯನ್ನು ಪಡೆಯಬಹುದು ಎಂದರು.
ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ಮಾತನಾಡಿ, ಬಿ ಖಾತೆ ಪಡೆಯಬಯಸುವವರು ಅನಧಿಕೃತ ಬಡಾವಣೆಯ ಭೂ ಪರಿವರ್ತನ ಆದೇಶ, ಸ್ವತ್ತಿನ ಮಾಲೀಕತ್ವದ ಪ್ರಮಾಣಪತ್ರ, ಕಟ್ಟಡವಾಗಿದ್ದಲ್ಲಿ ಕಟ್ಟಡದ ನಕ್ಷೆ ಮತ್ತು ಪರವಾನಗಿ ಪತ್ರ, ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರಗಳು, ದಾನಪತ್ರ, ವಿಭಾಗ ಪತ್ರಗಳು, ಹಕ್ಕು ಖುಲಾಸೆ ಇತ್ಯಾದಿಗಳೊಂದಿಗೆ ಕಂದಾಯ ರಸೀದಿ, ನೀರಿನ ರಸೀದಿ, ವಿದ್ಯುತ್ ಬಿಲ್ ಇವುಗಳನ್ನು ಸಲ್ಲಿಸಿ ಬಿ-ಖಾತೆ ಪಡೆಯಬಹುದು ಎಂದರು. ಮುಖ್ಯಾಧಿಕಾರಿ ಮಹೇಶ ನಿಡಶೇಶಿ ಮಾತನಾಡಿದರು. ಕಂದಾಯ ನಿರೀಕ್ಷಕ ರಾಮಪ್ಪ ಸೀತಿಮನಿ, ಕಂದಾಯ ಕರ ವಸೂಲಿಗಾರರು, ಶೇಖಪ್ಪ ಹೊನವಾಡ ಇತರರಿದ್ದರು.