

ಹರಿಹರ: ಸಾರ್ವಜನಿಕರ ಸೇವೆ ಮಾಡಲು ಹಿಂದೇಟು ಹಾಕುವ ನಗರಸಭೆ ನರಕಸಭೆಯಾಗಿ ಪರಿವರ್ತನೆಯಾಗಿದೆ, ಅಲ್ಲದೇ ಕಂದಾಯ ವಿಭಾಗ ಸಂಪೂರ್ಣ ಹದಗೆಟ್ಟಿದೆ ಎಂದು ಶಾಸಕ ಬಿ.ಪಿ.ಹರೀಶ್ ಆರೋಪಿಸಿದರು.
ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಇ ಖಾತಾ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಸರ್ಕಾರದ ಈ ಯೋಜನೆಯು ನೊಂದವರ ಬಾಳಿಗೆ ಆಶಾಕಿರಣವಾಗಿದೆ, ಆದರೆ ಹರಿಹರ ನಗರಸಭೆಯ ಆಡಳಿತ ವ್ಯವಸ್ಥೆಯಿಂದ ಯೋಜನೆಯು ಅನುಷ್ಠಾನಗೊಳ್ಳುತ್ತದೆ ಎಂಬ ನಂಬಿಕೆ ಇಲ್ಲದಾಗಿದೆ ಎಂದರು.
ಎಲ್ಲ ಸದಸ್ಯರು ಮುಂದಿನ ಮೂರು ತಿಂಗಳು ನಿಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು ನಗರಸಭೆಯಲ್ಲಿ ಬೀಡುಬಿಟ್ಟು ಇ- ಖಾತಾ ವಿತರಣೆಯ ಅಭಿಯಾನವನ್ನು ಯಶಸ್ವಿಗೊಳಿಸಿ ಹರಿಹರ ನಾಗರಿಕರಿಗೆ ಅನುಕೂಲ ಮಾಡುವಂತೆ ಕೋರಿದರು.
ನಗರಸಭೆ ಸಿಬ್ಬಂದಿಯಿಂದ ಈ ಅಭಿಯಾನದ ಕೆಲಸ ಮಾಡಲು ಆಗುವುದಿಲ್ಲ. ಖಾಸಗಿ ಸಂಸ್ಥೆಗೆ ಜವಾಬ್ದಾರಿ ನೀಡುವಂತೆ ಕೆಲ ಸದಸ್ಯರು ಒತ್ತಾಯಿಸಿದರು. ಫೆ.27 ರಂದು ನಗರಸಭೆ ಸಾಮಾನ್ಯ ಸಭೆ ಕರೆದು ಸಭೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ತೀರ್ವನವನ್ನು ತೆಗೆದುಕೊಳ್ಳೋಣ ಎಂದು ಸಲಹೆ ನೀಡಿದರು.
ನಗರಸಭೆಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯುವ ಸದಸ್ಯರ ಸಾಮಾನ್ಯ ಸಭೆಗೆ ಅಗತ್ಯ ಅಜೆಂಡಾ ಸಿದ್ಧಪಡಿಸಿಕೊಂಡು ಬರುವಂತೆ ಪೌರಾಯುಕ್ತರು ಹಾಗೂ ಸಿಬ್ಬಂದಿಗೆ ಸೂಚಿಸಿದರು.
ಸರ್ಕಾರದ ಆದೇಶದಂತೆ ಇ- ಖಾತಾ ಅಭಿಯಾನವನ್ನು 3 ತಿಂಗಳವರೆಗೆ ಹಮ್ಮಿಕೊಳ್ಳಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು ಎಂದು ಪೌರಾಯುಕ್ತ ಸುಬ್ರಮಣ್ಯ ಶೆಟ್ಟಿ ತಿಳಿಸಿದರು.
ಸಾರ್ವಜನಿಕರಿಗೆ ಪ್ರಮುಖವಾದ ಈ ಕಾರ್ಯಕ್ರಮವನ್ನು ಸಾರ್ವಜನಿಕರ ಗಮನಕ್ಕೆ ತರದೆ ಸಭಾಂಗಣದಲ್ಲಿ ಆಯೋಜನೆ ಮಾಡುವ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ ಮತ್ತು ಪೌರಾಯುಕ್ತರು ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸುತ್ತಿಲ್ಲ ಎಂದು ಸದಸ್ಯ ಶಂಕರ್ ಕಟಾವಕರ್ ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಉಪಾಧ್ಯಕ್ಷ ಎಂ.ಜಂಬಣ್ಣ, ನಗರಸಭೆ ಸದಸ್ಯರಾದ ಪಿ.ಎನ್. ವಿರೂಪಾಕ್ಷಿ, ಸೈಯದ್ ಅಲೀಂ, ದಾದಾ ಖಾಲಾಂದರ್, ಆರ್.ಸಿ. ಜಾವಿದ್, ಆಟೋ ಹನುಮಂತಪ್ಪ, ಸುಮಿತ್ರಮ್ಮ ಮರಿದೇವ್, ಬಾಬುಲಾಲ್, ಕೆ.ಬಿ. ರಾಜಶೇಖರ್, ಸಂತೋಷ್ ದೊಡ್ಮನಿ, ಸಾರ್ವಜನಿಕರು ಹಾಗೂ ಸಿಬ್ಬಂದಿ ಇದ್ದರು.