

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪೌರಾಡಳಿತ ಸರ್ವರ್‌ನಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ದೋಷದಿಂದ ಜನರ ಪರದಾಟ ತಪ್ಪಿಸಲು ಹೆಣಗಾಡುತ್ತಿರುವ ಜಿಲ್ಲಾಡಳಿತ ಸರ್ವರ್ ಸಮಸ್ಯೆಗೆ ಮುಕ್ತಿ ದೊರಕಿಸಲು ಹರಸಾಹಸ ನಡೆಸುತ್ತಿದೆ. ಸೋಮವಾರ (ೆ.24) ರಿಂದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವತ್ತುಗಳಿಗೆ ಎ ಮತ್ತು ಬಿ ಖಾತೆ ನೀಡುವ ಆಂದೋಲನ ಶುಭಾರಂಭ ಕಾಣಲಿದೆ ಎಂದು ಜಿಲ್ಲಾಡಳಿತ ಭರವಸೆ ವ್ಯಕ್ತಪಡಿಸಿದೆ.
ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ಅನಧಿಕೃತ ಬಡಾವಣೆಗಳ ಸ್ವತ್ತುಗಳ ಮಾಲೀಕರು ಕಂದಾಯ ಪಾವತಿಸಿ, ಇ-ಖಾತಾ ಪಡೆಯಬಹುದಾಗಿದೆ. ಇದರಿಂದ ಹಳೆಯ ಅನಧಿಕೃತ ಸ್ವತ್ತುಗಳ ಖಾತೆ ಸಮಸ್ಯೆಗೆ ಪರಿಹಾರ ದೊರೆಯಲಿದೆ, ಈ ಹಿನ್ನೆಲೆಯಲ್ಲಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಕೌಂಟರ್‌ಗಳ ಮುಂದೆ ಜನದಟ್ಟಣೆ ಏರ್ಪಟ್ಟಿದೆ. ಬೆಳಗ್ಗೆಯಿಂದ ಸಂಜೆವರೆಗೆ ಸಾರ್ವಜನಿಕರು ಖಾತೆಗಾಗಿ ಕಾದು ನಿಂತಿರುವ ದೃಶ್ಯ ಸಾಮಾನ್ಯವಾಗಿದೆ ಆದರೆ ಸರ್ವರ್‌ನಲ್ಲಿನ ತಾಂತ್ರಿಕ ದೋಷದ ಕಾರಣ ಜನರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಾಸಾಗುತ್ತಿದ್ದಾರೆ. ಪೌರಾಡಳಿತ ಸಿಬ್ಬಂದಿ ದಿಕ್ಕುತೋಚದಂತಾಗಿದ್ದು ಜನರಿಗೆ ಸಮರ್ಪಕ ಉತ್ತರ ನೀಡಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಸರ್ವರ್ ಸಮಸ್ಯೆ ಇದೆ ನಾಳೆ ಬನ್ನಿ ನೋಡೋಣ ಎಂಬ ಉತ್ತರ ಸಿಗುತ್ತಿದೆ. ಇದಕ್ಕೆಲ್ಲ ಸೋಮವಾರದಿಂದ ಪರಿಹಾರ ಸಿಗಲಿದೆ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
ನಗರ, ಪುರಸಭೆಯಲ್ಲಿ ಆಂದೋಲನ: ಜಿಲ್ಲೆಯ ಮೂರು ನಗರಸಭೆ, ಎರಡು ಪುರಸಭೆ, ಒಂದು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎ ಖಾತೆ ಸ್ವತ್ತು ಹಾಗೂ ಬಿ ಖಾತೆ ಸ್ವತ್ತು ಗುರುತಿಸಲಾಗಿದೆ. ಸಾರ್ವಜನಿಕರ ಗೊಂದಲ, ಸಮಸ್ಯೆಗಳಿಗೆ ಉತ್ತರಿಸಲು ಸ್ಥಳೀಯ ಸಂಸ್ಥೆಗಳಲ್ಲಿ ಸಹಾಯವಾಣಿ ಸಾಪಿಸಲಾಗಿದೆ. ವಾರ್ಡ್‌ಗಳಲ್ಲೇ ಅರ್ಜಿ ಪಡೆದು ಖಾತೆ ನೀಡಲು ಆಂದೋಲನಕ್ಕೆ ಸಿದ್ದತೆ ನಡೆಸಲಾಗಿದೆ. ಎ ಖಾತೆ ನೀಡುವ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ. ಆದರೆ ಬಿ ಖಾತೆ ನೀಡುವ ಪ್ರಕ್ರಿಯೆ ಪ್ರಸ್ತುತ ಮೂರು ತಿಂಗಳವರೆಗೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಜಿಟಲ್ ಇ ಖಾತಾ: 2024 ಸೆ. 10ರ ಪೂರ್ವದಲ್ಲಿ ನೋಂದಣಿಯಾಗಿರುವ ಸ್ವತ್ತಿನ ಮಾಲೀಕತ್ವದ ದಾಖಲೆಗಳಾದ ನೋಂದಾಯಿತ ಪತ್ರ, ಚಾಲ್ತಿ ಸಾಲಿನವರೆಗೆ ಕಂದಾಯ ಪಾವತಿ ರಶೀದಿ, ಋಣಭಾರ ಪ್ರಮಾಣ ಪತ್ರ(ಇಸಿ) ಹಾಗೂ ಮಾಲೀಕರ ಫೋಟೊ, ಆಧಾರ ಕಾರ್ಡ್ ಪ್ರತಿಯೊಂದಿಗೆ ಅರ್ಜಿ ಸಲ್ಲಿಸಿದ ಏಳು ದಿನಗಳಲ್ಲಿ ಡಿಜಿಟಲ್ ಮಾದರಿಯ ಇ-ಖಾತಾ ಪಡೆಯಬಹುದು.
ಸೀಮಿತ ಕೌಂಟರ್: ಆಂದೋಲನದ ಹಿನ್ನೆಲೆಯಲ್ಲಿ ಹೆಚ್ಚಿನ ಜನ ಕೌಂಟರ್‌ಗಳತ್ತ ದೌಡಾಯಿಸುತ್ತಿದ್ದಾರೆ. ಆದರೆ ಸ್ಥಳೀಯ ಸಂಸ್ಥೆಗಳು ಸೀಮಿತ ಕೌಂಟರ್‌ನಲ್ಲಿ ವ್ಯವಹರಿಸುತ್ತಿವೆ ಇದರಿಂದ ಹಿರಿಯ ನಾಗರೀಕರು, ಮಹಿಳೆಯರು ಪರದಾಡುವಂತಾಗಿದೆ, ಇದರ ನಡುವೆ ಸಾಕಷ್ಟು ಅಂಗವಿಕಲರು ಆಗಮಿಸುತ್ತಿದ್ದು ಪ್ರತ್ಯೇಕ ಕೌಂಟರ್ ತೆರೆಯಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಎ’ ಖಾತೆಗೆ ಅಗತ್ಯ ದಾಖಲೆ:
* ಆಸ್ತಿಗೆ ಸಂಬಂಧಿಸಿದ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರ, ದಾನಪತ್ರ, ವಿಭಾಗ ಪತ್ರ, ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕು ಪತ್ರ, ಮಂಜೂರಾತಿ ಪತ್ರ, ಕಂದಾಯ ಇಲಾಖೆಯಿಂದ 94 ಸಿಸಿ ಅಡಿ ನೀಡಲಾದ ಹಕ್ಕು ಪತ್ರ ಇವುಗಳ ಪೈಕಿ ಯಾವುದಾದರು ಒಂದು.
* ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಂಡ ಬಡಾವಣೆ ದೃಢೀಕೃತ ಪ್ರತಿ ಮತ್ತು ನಿವೇಶನ ಬಿಡುಗಡೆ ಪತ್ರ
* ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣ ಪತ್ರ(ಇ.ಸಿ).
* ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ
* ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ
* ಮಾಲೀಕರ ಗುರುತಿನ ದಾಖಲೆ ಪ್ರತಿ
’ಬಿ’ ಖಾತೆಗೆ ಬೇಕಾದ ದಾಖಲೆ
* ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ 2024ರ ಸೆ.10ರ ಪೂರ್ವದಲ್ಲಿ ನೋಂದಾಯಿತ ಮಾರಾಟ ಪತ್ರ, ದಾನಪತ್ರ,-ವಿಭಾಗ ಪತ್ರ, ಹಕ್ಕು ಖುಲಾಸೆ ಪತ್ರ.
* ಪ್ರಸಕ್ತ ಸಾಲಿನ ವರೆಗೆ ಋಣಭಾರ ಪ್ರಮಾಣ ಪತ್ರ (ಇ.ಸಿ)
* ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀದಿ.
* ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೊ
* ಮಾಲೀಕರ ಗುರುತಿನ ದಾಖಲೆ ಪ್ರತಿ
ಜಿಲ್ಲೆಯ ಪೌರಾಡಳಿತ ಸಂಸ್ಥೆ ವ್ಯಾಪ್ತಿಯ ಆಸ್ತಿಗಳಿಗೆ ಎ ಮತ್ತು ಬಿ ಖಾತಾ ವಿತರಿಸುವ ಆಂದೋಲನಕ್ಕೆ ಚಾಲನೆ ದೊರೆತಿದೆ, ಜಿಲ್ಲೆಯ ಮೂರು ನಗರಸಭೆ, ಎರಡು ಪುರಸಭೆ, ಒಂದು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿಯ ಆಸ್ತಿ ಮಾಲೀಕರು ಖಾತಾ ಪಡೆಯಬಹುದಾಗಿದೆ, ಪೌರಾಡಳಿತ ಸರ್ವರ್‌ನಲ್ಲಿ ಕಾಣಿಸಿಕೊಂಡಿರುವ ತಾಂತ್ರಿಕ ದೋಷದಿಂದಾಗಿ ಅಡಚಣೆಯಾಗಿದೆ, ಇದನ್ನು ತುರ್ತಾಗಿ ಸರಿಪಡಿಸುವ ಕೆಲಸ ನಡೆಯುತ್ತಿದ್ದು ಸೋಮವಾರದಿಂದ ಸುಗಮ ಪ್ರಕ್ರಿಯೆ ನಡೆಯಲಿದೆ. ಸಾರ್ವಜನಿಕರು ಸಹಕರಿಸುವ ಮೂಲಕ ಈ ಯೋಜನೆಯ ಸದ್ಭಳಕೆ ಮಾಡಿಕೊಳ್ಳಬೇಕು.
ಬಿ.ಎ.ಬಸವರಾಜು, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ