

ತೂಬಗೆರೆ: ದೇವಸ್ಥಾನದ ಹುಂಡಿ ಕಾಣಿಕೆಗೂ ಡಿಜಿಟಲ್ ವ್ಯವಸ್ಥೆ ಲಗ್ಗೆ ಇಟ್ಟಿದ್ದು, ಈಗ ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದಲ್ಲಿ ಇ-ಹುಂಡಿ ವ್ಯವಸ್ಥೆಯನ್ನು ಆರಂಭಿಸಲಾಗಿದೆ.
ಮುಜರಾಯಿ ಇಲಾಖೆ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್(ಐಒಬಿ) ಸಹಯೋಗದಲ್ಲಿ ಈ ವ್ಯವಸ್ಥೆ ಕಲ್ಪಿಸಲಾಗಿದ್ದು, ಗೂಗಲ್ ಪೇ, ಫೋನ್ ಪೇ, ಬೀಮ್, ಪೇ ಟಿಎಂ ಸೇರಿ ಯಾವುದೇ ಯುಪಿಐ ಮೂಲಕ ಭಕ್ತರು ಕಾಣಿಕೆ ಸಲ್ಲಿಸಬಹುದು. ದೇವಸ್ಥಾನದಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದ್ದು, ಸ್ಕಾೃನ್ ಮಾಡಿ ಕಾಣಿಕೆ ಅರ್ಪಿಸಲು ಅನುಕೂಲ ಕಲ್ಪಿಸಲಾಗಿದೆ.
ಇ-ಹುಂಡಿಗೆ ಚಾಲನೆ ನೀಡಿದ ದೇವಸ್ಥಾನದ ಆಡಳಿತಾಧಿಕಾರಿ ಎಂ.ನಾರಾಯಣಸ್ವಾಮಿ ಮಾತನಾಡಿ, ಮುಜರಾಯಿ ಇಲಾಖೆ ಅಧೀನದ ರಾಜ್ಯದ ಎಲ್ಲ ‘ಎ’ ಗ್ರೇಡ್ ದೇವಾಲಯಗಳಲ್ಲಿ ಇ- ಹುಂಡಿ ಜಾರಿ ಮಾಡಲಾಗುತ್ತಿದ್ದು, ಘಾಟಿ ಸುಬ್ರಹ್ಮಣ್ಯಸ್ವಾಮಿ ಭಕ್ತರ ಅನುಕೂಲಕ್ಕಾಗಿ ಶ್ರೀಕ್ಷೇತ್ರದಲ್ಲಿ ಇ-ಹುಂಡಿ ಅಳವಡಿಸಲಾಗಿದೆ. ಇ-ಹುಂಡಿಗೆ ಸಂಪೂರ್ಣ ಭದ್ರತೆ ಒದಗಿಸಲಾಗಿದ್ದು, ಭಕ್ತರು ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಸದ್ಯ ಡಿಜಿಟಲ್ ಪೇಮೆಂಟ್ ಸೌಲಭ್ಯದಿಂದ ದೇಗುಲಕ್ಕೆ ಮತ್ತಷ್ಟು ದೇಣಿಗೆ ಹರಿದು ಬರುವ ಸಾಧ್ಯತೆ ಇದೆ. ಭಕ್ತರು ಹರಕೆ ಹಣ, ದೇಣಿಗೆಯನ್ನು ದೇವರ ಹುಂಡಿಗೆ ಹಾಕಲು ಜೇಬಿನಲ್ಲಿ ಹಣ ಇಲ್ಲದಿದ್ದರೂ ಸುಲಭವಾಗಿ ಮೊಬೈಲ್ ಮೂಲಕ ದೇವಾಲಯದ ಖಾತೆಗೆ ವರ್ಗಾಯಿಸಿ ಹರಕೆ ತೀರಿಸಬಹುದು ಎಂದು ನಾರಾಯಣಸ್ವಾಮಿ ಹೇಳಿದರು.