ಕಾರ್ಮಿಕರಂತೆ ನಮಗೂ ಸರ್ಕಾರಿ ಸೌಲಭ್ಯ ನೀಡಿ - ಆಟೋ ಚಾಲಕರ ಒಕ್ಕೂಟ

0202
Published on

ಬೆಳಗಾವಿ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಉತ್ತರ ಕರ್ನಾಟಕ ಆಟೋ ಚಾಲಕರ ಒಕ್ಕೂಟದ ನೇತೃತ್ವದಲ್ಲಿ ಆಟೋ ಚಾಲಕರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಪ್ರತಿಭಟಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ವಿವಿಧ ಕ್ಷೇತ್ರಗಳಲ್ಲಿನ ಕಾರ್ಮಿಕರಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯವನ್ನು ಆಟೋ ಚಾಲಕರಿಗೂ ನೀಡಬೇಕು. ಆಟೋ ಚಾಲಕರಿಗೆ ವಿಧಿಸಿರುವ ಅವೈಜ್ಞಾನಿಕ ನಿಯಮ ರದ್ದುಪಡಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ವಿಶೇಷ ಪ್ಯಾಕೇಜ್ ಘೋಷಿಸಿ: ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡಿರುವ ಆಟೋ ಚಾಲಕರು, ಅವರ ಕುಟುಂಬಗಳಿಗೆ ಆರೋಗ್ಯ, ಪಡಿತರ ಹಾಗೂ ಸಾಲ ಸೌಲಭ್ಯ ಯೋಜನೆಗಳು ಸಿಗುತ್ತಿಲ್ಲ. ಎಲ್ಲ ಕಾರ್ಮಿಕರ ಕುಟುಂಬಕ್ಕಾಗಿ ಸರ್ಕಾರವು ಕಾರ್ಮಿಕ ಇಲಾಖೆಯಲ್ಲಿ ಅನುದಾನ ಮೀಸಲಿಡುತ್ತಿದೆ. ಆದರೆ, ಆಟೋ ಚಾಲಕರಿಗೆ ಮಾತ್ರ ಈ ಭಾಗ್ಯ ಸಿಕ್ಕಿಲ್ಲ.

ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಆಟೋ ಚಾಲಕರಿಗೆ ಅಗತ್ಯ ಸೌಲಭ್ಯದ ಜತೆಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು. ಪ್ರಕಾಶ ಜಾದವಿ, ಗಜಾನನ ಕೆ., ರಾಜ್‌ಸಾಬ್ ಅತ್ತಾರ, ಶಿವಾಜಿ ಖಾಂಡೆ, ಸುನೀಲ ಮಾಳಿ, ಸಲೀಂ ಖಲೀಫ್, ಜಾಕೀರ ನಾಯಕವಾಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net