ದಾಖಲೆ ಸಂಗ್ರಹಕ್ಕೆ ಮುಂದಾದ ಇ.ಡಿ.

muda scam
Published on

ಮೈಸೂರು: ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಪ್ರಕರಣದ ತನಿಖೆಗೆ ಜಾರಿ ನಿರ್ದೇಶನಾಲಯ(ಇ.ಡಿ.) ಇದೀಗ ಅಖಾಡಕ್ಕೆ ಇಳಿದಿದ್ದು, ಅದರ ಪೂರ್ವಭಾವಿಯಾಗಿ ದಾಖಲೆ ಸಂಗ್ರಹಕ್ಕೆ ಮುಂದಾಗಿದೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ಅಗತ್ಯ ದಾಖಲೆ ನೀಡುವಂತೆ ಇ.ಡಿ. ಅಧಿಕಾರಿಗಳು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಿರ್ದೇಶಿಸಿದ್ದಾರೆ ಎಂಬುದು ತಿಳಿದುಬಂದಿದೆ.


ಬೆಂಗಳೂರಿನಲ್ಲಿರುವ ಇ.ಡಿ. ಕಚೇರಿಯಿಂದ ಮುಡಾ ಕಚೇರಿಗೆ ಪತ್ರ ರವಾನೆಯಾಗಿದೆ. ಲೋಕಾಯುಕ್ತದಲ್ಲಿ ಸಿದ್ದರಾಮಯ್ಯ ಸೇರಿದಂತೆ ನಾಲ್ವರ ವಿರುದ್ಧ ದಾಖಲಾದ ಎಫ್‌ಐಆರ್‌ಗೆ ಸಂಬಂಧಿಸಿದ ಎಲ್ಲ ದಾಖಲೆಗಳ ದೃಢೀಕೃತ ಪ್ರತಿ ಕೊಡುವಂತೆ ಸೂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಇದನ್ನು ಮುಡಾ ಅಧಿಕಾರಿಗಳು ಖಚಿತಪಡಿಸಿಲ್ಲ.


ಸಿಎಂ ವಿರುದ್ಧ ಮೊದಲು ಲೋಕಾಯುಕ್ತ ಸಂಸ್ಥೆಯಲ್ಲಿ ಎಫ್‌ಐಆರ್ ದಾಖಲಾಯಿತು. ಬಳಿಕ ಇ.ಡಿ.ಯಲ್ಲೂ ಪ್ರಕರಣದ ದಾಖಲಾಗಿದೆ.


ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ನೇತೃತ್ವದಲ್ಲಿ ನಾಲ್ಕು ತಂಡಗಳು ಈಗಾಗಲೇ ತನಿಖೆ ಚುರುಕುಗೊಳಿಸಿದ್ದು, ಕೆಸರೆ ಗ್ರಾಮದ ವಿವಾದಿತ ಜಮೀನು, ವಿಜಯನಗರದಲ್ಲಿ ಮುಡಾ ನೀಡಿದ್ದ 14 ಬದಲಿ ನಿವೇಶನಗಳ ಸ್ಥಳ ಮಹಜರು ಪೂರ್ಣಗೊಳಿಸಿರುವ ಲೋಕಾಯುಕ್ತ ಪೊಲೀಸರು, ಮುಡಾ, ತಹಸೀಲ್ದಾರ್ ಕಚೇರಿ, ಉಪನೋಂದಣಿ ಕಚೇರಿಯಲ್ಲಿ ಅಗತ್ಯ ದಾಖಲೆ ಸಂಗ್ರಹಿಸಿದ್ದು, ಈ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿ ಇದೆ.


ದಸರಾ ಹಬ್ಬದ ಬಳಿಕ ವಿಚಾರಣೆಗೆ ಬರುವಂತೆ ಆರೋಪಿಗಳಿಗೆ ಸಮನ್ಸ್ ನೀಡುವ ನಿರೀಕ್ಷೆ ಇದೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ. ಪಾರ್ವತಿ, ಭಾವಮೈದುನ ಮಲ್ಲಿಕಾರ್ಜುನಸ್ವಾಮಿ, ಜಮೀನಿನ ಮಾಲೀಕ ದೇವರಾಜು ಆರೋಪಿಗಳಾಗಿದ್ದಾರೆ. ಲೋಕಾಯುಕ್ತ ತನಿಖೆಯ ಬೆನ್ನಲ್ಲೇ ಇ.ಡಿ. ಸಹ ದಾಖಲೆ ಕಲೆಹಾಕುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net