ಕಸ ಸಂಗ್ರಹಕ್ಕೆ ವಿದ್ಯುತ್ ಚಾಲಿತ ಆಟೋಗಳಿಗೆ ಚಾಲನೆ

mng-19june- mcc vehicle
Published on



ಮಂಗಳೂರು : ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮನೆ ಮನೆ ಕಸ ಸಂಗ್ರಹಕ್ಕೆ ಬಳಸುವ ವಿದ್ಯುತ್ ಚಾಲಿತ ಆಟೋಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಮನಪಾ ಮತ್ತು ಬೆಂಗಳೂರಿನ ಪ್ರಗ್ಯಾ ಆಟೋಮೊಬೈಲ್ಸ್ ಸಹಭಾಗಿತ್ವದಲ್ಲಿ ಬುಧವಾರ ನಗರದ ಪುರಭವನದ ಆವರಣದಲ್ಲಿ ನಡೆಯಿತು.
ಕಸ ಸಂಗ್ರಹ ವಾಹನಗಳಿಗೆ ಚಾಲನೆ ನೀಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ ‘ ವಿದ್ಯುತ್ ಚಾಲಿತ ವಾಹನ ಸ್ವಚ್ಛ ಮಂಗಳೂರಿನ ಜತೆಗೆ ಹಸಿರು ಮಂಗಳೂರು ಪರಿಕಲ್ಪನೆ ಸಾಕಾರಕ್ಕೆ ಪೂರಕವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕಲ್ಪನೆಯ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ ಯೋಜನೆಯಂತೆ ಪ್ರಗ್ಯಾ ಆಟೋಮೊಬೈಲ್ಸ್ ಕಸ ಸಂಗ್ರಹ ವಾಹನ ಒದಗಿಸಿದೆ. ಇದರ ಸಮಪರ್ಕಕವಾಗಿ ನಿರ್ವಹಣೆ ಮಾಡುವುದು ಮಂಗಳೂರು ಮಹಾ ನಗರ ಪಾಲಿಕೆಯ ಜವಾಬ್ದಾರಿ ಎಂದರು.
ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿ ಕಸ ಸಂಗ್ರಹಕ್ಕೆ ವಿದ್ಯುತ್ ಚಾಲಿತ ವಾಹನಗಳ ಬಳಕೆ ರಾಜ್ಯದಲ್ಲೇ ವಿನೂತನ ಯೋಜನೆಯಾಗಿದೆ. ಮೊದಲ ಹಂತದಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ 24 ವಾಹನ ಬಂದಿದೆ. ಈ ವಾಹನವನ್ನು ಒಮ್ಮೆ
ಚಾರ್ಜ್ ಮಾಡಿದರೆ 90 ಕಿ.ಮೀ. ಕ್ರಮಿಸಬಹುದು. ಒಮ್ಮೆಗೆ 300 ಕೆಜಿ ಒಣ ಅಥವಾ ಹಸಿ ಕಸ ಸಾಗಾಟ ಸಾಧ್ಯ. ತೈಲಬೆಲೆ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಈ ವಾಹನಗಳು ಹೆಚ್ಚು ಉಪಯುಕ್ತವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಮಾಲಿನ್ಯ ರಹಿತ ವಾಹನಗಳನ್ನು ಕಸ ಸಂಗ್ರಹಕ್ಕೆ ಬಳಸುವ ಮೂಲಕ ಮಂಗಳೂರು ಮಹಾನಗರ ಪಾಲಿಕೆ ದಿಟ್ಟ ಹೆಜ್ಜೆ ಇರಿಸಿದೆ. ಕೇಂದ್ರ, ರಾಜ್ಯ ಮತ್ತು ಮನಪಾ ಅನುದಾನದಿಂದ ಬ್ಯಾಟರಿ ಚಾಲಿತ ಆಟೋ ಖರೀದಿಸಲಾಗಿದೆ. ಟೆಂಡರ್ ಪಡೆದ ಪ್ರಗ್ಯಾ ಆಟೋಮೊಬೈಲ್ಸ್ ಉತ್ತಮ ವಾಹನಗಳನ್ನು ಒದಗಿಸಿದೆ. ಈ ಆಟೋ ಗಂಟೆಗೆ 25 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಸದ್ಯಕ್ಕೆ ಮೂರು ವಾರ್ಡ್‌ಗಳಿಗೆ ಒಂದರಂತೆ ಓಣಿ ಇರುವ
ಪ್ರದೇಶಗಳಲ್ಲಿ ಹಸಿ, ಒಣ ಕಸ ಸಂಗ್ರಹಕ್ಕೆ ಈ ವಾಹನಗಳನ್ನು ಬಳಸಲಾಗುವುದು. ಕಿ.ಮೀಗೆ 40 ಪೈಸೆ ಮಾತ್ರ ವೆಚ್ಚವಾಗುತ್ತದೆ. ಮಾಲಿನ್ಯ ರಹಿತ ಮಂಗಳೂರು ಹಾಗೂ ಸ್ವಚ್ಛತೆಯಲ್ಲಿ ಮಂಗಳೂರನ್ನು ನಂ.1 ಮಾಡುವುದು ನಮ್ಮ ಗುರಿಯಾಗಿದೆ ಎಂದರು.
ಶಾಸಕ ಡಾ.ವೈ. ಭರತ್ ಶೆಟ್ಟಿ, ಉಪ ಮೇಯರ್ ಸುನೀತಾ, ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಭರತ್‌ಕುಮಾರ್, ಗಣೇಶ್ ಕುಲಾಲ್, ಲೋಹಿತ್ ಅಮೀನ್, ವರುಣ್ ಚೌಟ, ಪ್ರತಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ಕಾರ್ಪೋರೇಟರ್‌ಗಳಾದ ದಿವಾಕರ ಪಾಂಡೇಶ್ವರ, ಶಶಿಧರ ಹೆಗ್ಡೆ, ಜಯಾನಂದ ಅಂಚನ್, ನವೀನ್ ಡಿಸೋಜಾ ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಪ್ರಗ್ಯಾ ಆಟೋಮೊಬೈಲ್ಸ್ ವ್ಯವಸ್ಥಾಪಕ ನಿರ್ದೇಶಕ ಆದಿತ್ಯ ಸುರಾನ ಉಪಸ್ಥಿತರಿದ್ದರು.
ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬೆಂಗಳೂರಿನ ಪ್ರಗ್ಯಾ ಆಟೋಮೊಬೈಲ್ಸ್ ತಯಾರಿಸಿದ 24 ಪರಿಸರ ಸ್ನೇಹಿ, ಮಾಲಿನ್ಯ ರಹಿತ ವಾಹನಗಳನ್ನು ಪೌರ ಕಾರ್ಮಿಕರಿಗೆ
ಹಸ್ತಾಂತರಿಸಲಾಯಿತು. ಇದೇ ಸಂದರ್ಭ ಪೌರ ಕಾರ್ಮಿಕರಿಗೆ ಸಮವಸ ವಿತರಿಸಲಾಯಿತು. ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net