ಇ-ಸ್ವತ್ತು ವಿತರಣೆಯಲ್ಲಿ ಪಾರದರ್ಶಕವಿರಲಿ: ಜಿಪಂ ಸಿಇಒ ಕೆ.ಆರ್.ನಂದಿನಿ ಸೂಚನೆ

E-Asset Software Workshop Mandya
Published on

ಮಂಡ್ಯ: ಇ-ಸ್ವತ್ತು ವಿತರಣೆಯಲ್ಲಿ ಪಾರದರ್ಶಕತೆ ಜತೆಗೆ ತೆರಿಗೆ ಸೋರಿಕೆಗೆ ಕಡಿವಾಣ ಹಾಕುವ ಮೂಲಕ ಗ್ರಾಮ ಪಂಚಾಯಿತಿ ವರಮಾನವನ್ನು ಹೆಚ್ಚಿಸಬಹುದು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಪಂನಿಂದ ಆಯೋಜಿಸಿದ್ದ ಇ-ಸ್ವತ್ತು ತಂತ್ರಾಂಶದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳ ಆಸ್ತಿಗಳಿಗೆ ಇ-ಸ್ವತ್ತು ದಾಖಲೆ ವಿತರಣೆಯಲ್ಲಿನ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಬೇಕು. ಜತೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಇ-ಸ್ವತ್ತು ತಂತ್ರಾಂಶದಡಿ ಪರಿಷ್ಕೃತ ಸುತ್ತೋಲೆ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ವಯ ಇ-ಸ್ವತ್ತು ಮಾಡಿ ಸಾರ್ವಜನಿಕರಿಗೆ ನಮೂನೆ 9, 11 ಮತ್ತು 11ಎ ವಿತರಿಸಲು ಮತ್ತು ಇ-ಸ್ವತ್ತು ತಂತ್ರಾಂಶದಡಿ ದಾಖಲಾತಿ ವಿತರಿಸುವಲ್ಲಿ ವಿಳಂಬವಾಗುತ್ತಿರುವುದರ ಬಗ್ಗೆ ಕ್ರಮವಹಿಸಬೇಕು ಎಂದರು.

ಗ್ರಾಪಂ ಸಿಬ್ಬಂದಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಇ-ಸ್ವತ್ತು ತಂತ್ರಾಂಶದಡಿ ಪರಿಷ್ಕೃತ ಸುತ್ತೋಲೆ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ವಯ ಇ-ಸ್ವತ್ತು ಮಾಡಿ. ಅಲ್ಲದೆ ನಿಯಮ ಬಾಹಿರವಾಗಿ ಇ-ಸ್ವತ್ತು ಮಾಡಿದ್ದಲ್ಲಿ ಕ್ರಮ ಜರುಗಿಸಲಾಗುವುದು. ಇ -ಸ್ವತ್ತು ಸಂಬಂಧಿಸಿದಂತೆ ಪಿಡಿಒ, ಕಾರ್ಯದರ್ಶಿ ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ಹೆಚ್ಚಿನ ತರಬೇತಿ ಬೇಕು ಎಂದರೆ ಆಯೋಜಿಸಲಾಗುವುದು. ಇ-ಸ್ವತ್ತು ಅಧಿಕೃತವಾಗಿ ಗ್ರಾಪಂನಲ್ಲಿಯೇ ಮಾಡಬೇಕು. ಅದನ್ನು ಹೊರತುಪಡಿಸಿ ಖಾಸಗಿ ಸೈಬರ್ ಸೆಂಟರ್‌ನಲ್ಲಿ ಮಾಡಿದ್ದಲ್ಲಿ ಕ್ರಮ ಜರುಗಿಸಲಾಗುತ್ತದೆ. ಪಿಡಿಒಗಳು ಕೇಂದ್ರ ಸ್ಥಾನದಲ್ಲಿ ಇರಬೇಕು. ಕಡ್ಡಾಯವಾಗಿ ಇ-ಹಾಜರಾತಿ ಇರಬೇಕು. ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ ಬಗೆಹರಿಸಲು ಸೂಚಿಸಿದರು.

ಪಂಚಾಯತ್ ರಾಜ್ ಇಲಾಖೆ ಉಪ ನಿರ್ದೇಶಕಿ ಗೀತಾ, ಗ್ರಾಪಂ ವ್ಯಾಪ್ತಿಗೆ ಒಳಪಟ್ಟಿರುವ ಸ್ವತ್ತಿಗೆ ಕಂದಾಯ ವಿಧಿಸುವ ಬಗ್ಗೆ ಮತ್ತು ಭೂ ಪರಿವರ್ತನೆಯಾದ ಆಯಾ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಇರುವ ಆಸ್ತಿಯನ್ನು ಇ-ಸ್ವತ್ತನ್ನು ನೀಡುವ ಬಗ್ಗೆ ಹಾಗೂ ಕ್ರಮಬದ್ದ ಮತ್ತು ಕ್ರಮಬದ್ಧವಲ್ಲದ ಆಸ್ತಿಯ ನಿರ್ವಹಣೆ ಬಗ್ಗೆ ತಿಳಿಸಿಕೊಟ್ಟರು.

ಕಾರ್ಯಾಗಾರದ ಸಂಶೋಧನಾ ಅಧಿಕಾರಿ ಶಶಿಧರ್, ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ, ಸರ್ಕಾರವು ಹಂತ ಹಂತವಾಗಿ ಜಾರಿಗೆ ತರುವ ಸುತ್ತೋಲೆಗೆ ಅನುಗುಣವಾಗಿ ಇ-ಸ್ವತ್ತು ಮಾಡಬೇಕು. ಪಂಚತಂತ್ರ ತಂತ್ರಾಂಶದ ನಿರ್ವಹಣೆ, ವಾಣಿಜ್ಯ ಮತ್ತು ಕೈಗಾರಿಕೆ, ವಸತಿ ಮತ್ತು ವಾಣಿಜ್ಯ ಹಾಗೂ ಅಪಾರ್ಟ್ಮೆಂಟ್ ಆಸ್ತಿಗಳ ವಿಧಗಳ ಆಧಾರವಾಗಿ ಕಂದಾಯ ನಿರ್ಧಾರ ಮಾಡುವ ಬಗ್ಗೆ, ದಾಖಲೆಗಳನ್ನು ನಿರ್ವಹಿಸಬೇಕು ಎಂದು ತಿಳಿಸಿದರು.

ಜಿಪಂ ಸಹಾಯಕ ಕಾರ್ಯದರ್ಶಿ ಚಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net