

ಹೊಳೆನರಸೀಪುರ: ಪುರಸಭೆ ವ್ಯಾಪ್ತಿಯಲ್ಲಿನ ಬಡಾವಣೆಗಳ ಬಿ ಖಾತಾ ಸ್ವತ್ತುಗಳಿಗೆ ಇ ಖಾತಾ ನೀಡಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್ ಹೇಳಿದರು.
ಪಟ್ಟಣದ ಪುರಸಭಾ ಕಚೇರಿ ಬಳಿ ಗುರುವಾರ ಇ ಸ್ವತ್ತು ಅಭಿಯಾನಕ್ಕೆ ಚಾಲನೆ ನೀಡಿ ಮಾಹಿತಿ ನೀಡಿದರು. ಅಕ್ರಮ ಸಕ್ರಮ ಮಾಡಿಕೊಳ್ಳಲು ಒನ್ ಟೈಂ ಸೆಟಲ್‌ಮೆಂಟ್‌ಗಾಗಿ ಸರ್ಕಾರ 3 ತಿಂಗಳ ಕಾಲಾವಕಾಶ ನೀಡಿ ಆದೇಶ ಹೊರಡಿಸಿದೆ ಎಂದರು.
ಪುರಸಭಾ ವ್ಯಾಪ್ತಿಯಲ್ಲಿರುವ ಕಂದಾಯ ನಿವೇಶನಗಳನ್ನು ಅಕ್ರಮ ಸಕ್ರಮೀಕರಣಗೊಳಿಸುವ ಯೋಜನೆ ಇದಾಗಿದ್ದು, ಇದಕ್ಕಾಗಿ ಗುರುತಿನ ಚೀಟಿ, ಆಸ್ತಿದಾರನ ಫೋಟೋ, ಆಸ್ತಿಯ ಫೋಟೋ,ಕಂದಾಯ ಪಾವತಿಸಿದ ರಸೀದಿ ಮತ್ತು ಯಾವುದಾದರೂ ವ್ಯಕ್ತಿಗತ ದೃಢೀಕರಣ ನೀಡಬೇಕಿದೆ. ಇಂತಹವುಗಳಿಗೆ ಎ ಖಾತಾ ನೀಡಲು ಅವಕಾಶ ಇಲ್ಲ. ಬದಲಿಗೆ ಯೋಜಿತ ಕಾರ್ಯದಡಿ ಬಿ ಖಾತಾ ನೀಡಲಾಗುತ್ತದೆ. ಸಂಬಂಧಪಟ್ಟ ಇಲಾಖೆಯಿಂದ ಮೂಲಸೌಕರ್ಯ ಹೊಂದಲು ಮತ್ತು ಸ್ವತ್ತಿನ ಮೇಲೆ ಅಧಿಕಾರ ಹೊಂದಲು ಸಹಕಾರಿಯಾಗುತ್ತದೆ. ಸರ್ಕಾರ ಇಂತಹ ಸ್ವತ್ತುಗಳಿಗೆ ಬಿ ಖಾತೆ ಮಾಡಿಕೊಡುವ ಮೂಲಕ ಆಸ್ತಿ ತರಿಗೆ ವ್ಯಾಪ್ತಿಗೆ ತರಲಾಗುತ್ತಿದೆ ಎಂದು ತಿಳಿಸಿದರು.
ಪಟ್ಟಣದ ನಾನಾ ಬಡಾವಣೆಗಳಲ್ಲಿ ಒಟ್ಟು 1441 ಅನಧಿಕೃತ ಕಟ್ಟಡಗಳು ಮತ್ತು ನಿವೇಶನಗಳನ್ನು ಗುರುತಿಸಲಾಗಿದೆ. ಇವುಗಳಲ್ಲದೆ ಭೂ ಪರಿವರ್ತನೆಯಾಗಿ ಅನುಮೋದನೆಯಾಗದ, ಭೂ ಪರಿವರ್ತನೆ ಆಗದಿರುವ, ಅಕ್ರಮವಾಗಿ ತಲೆ ಎತ್ತುತಿರುವ ಬಡಾವಣೆಗಳೂ ಈ ವ್ಯಾಪ್ತಿಗೆ ಒಳಪಡುವ ಕಾರಣ ಸಂಬಂಧಪಟ್ಟವರು ಪುರಸಭೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ಆಯ್ದ ಭಾಗಗಳಲ್ಲಿ ಕೇಂದ್ರಗಳನ್ನು ತೆರೆದು ದಾಖಲಾತಿಗಳನ್ನು ನೀಡಲಾಗುತ್ತಿದ್ದು, ನಾಗರಿಕರು ಇದರ ಅನುಕೂಲ ಪಡೆಯಬೇಕು ಎಂದರು.
ಪುರಸಭಾ ಅಧ್ಯಕ್ಷ ಕೆ.ಶ್ರೀಧರ್, ಸದಸ್ಯರಾದ ಎಚ್.ಕೆ.ಪ್ರಸನ್ನಕುಮಾರ್, ನಿಂಗಯ್ಯ, ಜಗನ್ನಾಥ್, ಕುಮಾರ್ ಮತ್ತು ಉಮೇಶ್ ಉಪಸ್ಥಿತರಿದ್ದರು.