ಇ-ಸ್ವತ್ತು ತಿದ್ದುಪಡಿಗೆ ತಿಕ್ಕಾಟ

18-11-24
Published on

ವಿಕ್ರಮ ನಾಡಿಗೇರ ಧಾರವಾಡ ವಸತಿ, ವಾಣಿಜ್ಯ ಮತ್ತು ಕೃಷಿ ಭೂಮಿ ಸೇರಿ ಯಾವುದೇ ಆಸ್ತಿಗಳ ನೋಂದಣಿಗೆ ಡಿಜಿಟಲ್​ ದಾಖಲೆ (ಇ-ಆಸ್ತಿ ಅಥವಾ ಇ-ಸ್ವತ್ತು) ಕಡ್ಡಾಯಗೊಳಿಸಲಾಗಿದೆ. ಆದರೆ ಹು-ಧಾ ಮಹಾನಗರ ಪಾಲಿಕೆ ಈ ಹಿಂದೆ ನೀಡಿದ ಇ-ಸ್ವತ್ತು ದೋಷದಿಂದ ಕೂಡಿದ್ದರಿಂದ ಜನರು ಸಮಸ್ಯೆಗೆ ಸಿಲುಕುವಂತಾಗಿದೆ. ಸರ್ಕಾರ ಇ-ಸ್ವತ್ತು ಅಷ್ಟೇ ಜಾರಿ ಮಾಡಿದ್ದರೆ ಸಮಸ್ಯೆ ಇರಲಿಲ್ಲ. ಭೂಮಿ, ಆಸ್ತಿ ವ್ಯವಹಾರಗಳಲ್ಲಿನ ಮೋಸ ತಡೆಗೆ ಆಸ್ತಿಗಳ ನೋಂದಣಿ ಸಮಯದಲ್ಲಿ ಇ-ಸ್ವತ್ತು ಕಡ್ಡಾಯ ಎಂದು ಅಕ್ಟೋಬರ್​ನಲ್ಲಿ ಸರ್ಕಾರ ಹೊಸ ಆದೇಶ ಹೊರಡಿಸಿದೆ. ಇದಲ್ಲದೆ ಕಾವೇರಿ 2.0 ತಂತ್ರಾಂಶದ ಜತೆಗೆ ಇ-ಆಸ್ತಿ ತಂತ್ರಾಂಶ ಸಂಯೋಜಿಸಲಾಗಿದೆ. ಆದರೆ ಯಾವುದೇ ಸಾಧಕ-ಬಾಧಕ ಗಮನಿಸದೆ ಈ ನಿಯಮ ಜಾರಿಗೆ ತಂದಿದ್ದರಿಂದ ಜನರು ಪಾಲಿಕೆ ಕಚೇರಿಗಳಿಗೆ ನಿತ್ಯ ಎಡತಾಕುವಂತಾಗಿದೆ. ಅಕ್ರಮ ಆಸ್ತಿಗಳ ಸರ್ವೇ ಸೇರಿ ಇನ್ನೂ ಹಲವು ಕಾರಣಕ್ಕೆ ಕೆಲ ವರ್ಷಗಳ ಹಿಂದೆ ಸರ್ಕಾರ ಇ-ಸ್ವತ್ತು ಜಾರಿಗೆ ತಂದಾಗ ಬಹುತೇಕರು ಡಿಜಿಟಲ್​ ಖಾತೆ ಮಾಡಿಸಿಕೊಂಡಿದ್ದಾರೆ. ಆದರೆ ಅದರಲ್ಲಿ ಆಸ್ತಿಯ ಒಟ್ಟು ವಿಸ್ತೀರ್ಣ ಮಾತ್ರ ನಮೂದಿಸಲಾಗಿತ್ತೆ ಹೊರತು, ಪೂರ್ವ, ಪಶ್ಚಿಮ, ಉತ್ತರ ಹಾಗೂ ದಕ್ಷಿಣ ದಿಕ್ಕುಗಳ ಅಳತೆ ನಮೂದಿಸರಲಿಲ್ಲ. ಇದೇ ಈಗ ಸಮಸ್ಯೆಗೆ ಕಾರಣವಾಗಿದೆ. ಇ-ಸ್ವತ್ತಿನಲ್ಲಿ ಎಲ್ಲವೂ ಸರಿಯಾಗಿದ್ದರೆ ಮಾತ್ರ ಸ್ಥಿರಾಸ್ತಿ ದಸ್ತಾವೇಜುಗಳ ನೋಂದಣಿ ವೇಳೆ ತಂತ್ರಾಂಶದಲ್ಲಿ ಮಾಹಿತಿ ಲಭ್ಯವಾಗಲಿದೆ. ಕೊಂಚ ವ್ಯತ್ಯಾಸವಿದ್ದರೂ ಮಾಹಿತಿ ಸಿಗದೆ ನೊಂದಣಿ ಪ್ರಕ್ರಿಯೆ ಅಸಾಧ್ಯವಾಗಲಿದೆ. ಆರಂಭದಲ್ಲಿ ಪಾಲಿಕೆ ವಿತರಿಸಿದ ದಾಖಲೆಯಲ್ಲಿ ದಿಕ್ಕುಗಳ ಅಳತೆ ಇಲ್ಲದ್ದಕ್ಕೆ ಆಸ್ತಿಗಳ ನೋಂದಣಿಗೆ ಅಡೆತಡೆಯಾಗಿದೆ. ಆಸ್ತಿಗಳ ನೋಂದಣಿಗೆ ಅನುಕೂಲವಾಗುವಂತೆ ಇ-ಸ್ವತ್ತು ತಿದ್ದುಪಡಿ ಮಾಡಿಸುವಂತೆ ನೋಂದಣಿ ಕಚೇರಿ ಸಿಬ್ಬಂದಿ ಸೂಚಿಸುತ್ತಿದ್ದಾರೆ. ಆದರೆ ಇ-ಸ್ವತ್ತು ತಿದ್ದುಪಡಿ ಅಷ್ಟು ಸರಳವಾಗಿಲ್ಲ. ಹು-ಧಾ ವ್ಯಾಪ್ತಿಯಲ್ಲಿ 100 ಅರ್ಜಿಗಳು ಅಪ್​ಲೋಡ್​ ಮಾಡಿದ ಬಳಿಕ 10 ತಿದ್ದುಪಡಿಗೆ ಅವಕಾಶ ಸಿಗಲಿದೆ. ಆ ಸಮಯದಲ್ಲಿ ತಿದ್ದುಪಡಿಯಾದರೆ ಸರಿ. ಇಲ್ಲವಾದಲ್ಲಿ ಮತ್ತೆ ಕಾಯುವಂತಹ ಸ್ಥಿತಿ ಇದೆ. ಈ ಸಮಸ್ಯೆ ಕೇವಲ ಆಸ್ತಿಗಳ ನೋಂದಣಿಗೆ ಮಾತ್ರವಲ್ಲದೆ, ಆಸ್ತಿ ಮೇಲೆ ಸಾಲ ಪಡೆಯುವುದು ಸೇರಿ ಇತರ ಕಾರ್ಯಗಳಿಗೂ ಹಿನ್ನಡೆಯಾಗುತ್ತಿದೆ.

- ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಆಯುಕ್ತಮೊದಲಿನ ದಿನಗಳಲ್ಲಿ ನೀಡಿದ ದಾಖಲೆಯಲ್ಲಿ ಆಸ್ತಿಯ ಉದ್ದ, ಅಗಲ ನಮೂದಿಸುತ್ತಿರಲಿಲ್ಲ. ಆದರೆ ಕಾವೇರಿ ತಂತ್ರಾಂಶ ಅಪ್ಡೇಟ್​ ಮಾಡಿ ನೋಂದಣಿಗೆ ಇ-ಸ್ವತ್ತು ಕಡ್ಡಾಯವಾದ ಸಮಯದಲ್ಲಿ ಸಮಸ್ಯೆ ಎದುರಾಗಿತ್ತು. ಇ-ಸ್ವತ್ತು ತಿದ್ದುಪಡಿಗೆ 100 ಅಪ್​ಲೋಡ್​ ಆದ ಬಳಿಕ 10 ತಿದ್ದುಪಡಿ ನಿಯಮ ತೆಗೆಯಲಾಗಿದೆ. ಎಲ್ಲರಿಗೂ ಸಮಯಕ್ಕೆ ಸರಿಯಾಗಿ ತಿದ್ದುಪಡಿ ಮಾಡಿಕೊಡುವಂತೆ ವಲಯ ಕಚೇರಿ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ.ಸಮಸ್ಯೆ ಬಗೆಹರಿಸಲಾಗಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net