

ಚಿಕ್ಕಮಗಳೂರು: ರಾಷ್ಟ್ರೀಯ ಲೋಕ ಅದಾಲತ್ ಡಿ.19ರಂದು ಜಿಲ್ಲಾದ್ಯಂತ ನಡೆಯಲಿದ್ದು, ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಶುಭಾ ಗೌಡರ್ ತಿಳಿಸಿದರು.
ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಹಲವಾರು ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ ಎಂದರು.
ನೋಂದಣಿ ಆರಂಭ
ಈಗಾಗಲೇ ಸೆಪ್ಟಂಬರ್ ಕೊನೆ ವಾರ ಹಾಗೂ ಡಿ.12ರಿಂದ ಎಲ್ಲ ನ್ಯಾಯಾಲಯಗಳು ನೋಂದಣಿ ಕಾರ್ಯ ನಡೆಸುತ್ತಿವೆ. ಅದಕ್ಕೂ ಮೊದಲು ಕರೊನಾ ತಪಾಸಣೆ ನಡೆಸಲಾಗುತ್ತಿದೆ. ಈ ಹಿಂದೆ ಜಿಲ್ಲೆಯಲ್ಲಿ ಮೆಗಾ ಲೋಕ ಅದಾಲತ್ ನಡೆಸಿ 1208 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಇದೀಗ ಡಿ.19ರ ಅದಾಲತ್‍ಗೆ ಸಂಬಂಧಿಸಿದಂತೆ ಎಲ್ಲ ನ್ಯಾಯಾಲಯಗಳಲ್ಲಿ ರಾಜಿ ಸಂಧಾನ ಪ್ರಕ್ರಿಯೆ ಪ್ರಾರಂಭಗೊಂಡಿವೆ ಎಂದು ಹೇಳಿದರು.
19,591 ಪ್ರಕರಣದಲ್ಲಿ ರಾಜಿಗೆ ಅವಕಾಶ
ಜಿಲ್ಲೆಯ ಎಲ್ಲ 7 ತಾಲೂಕುಗಳಲ್ಲಿ 29 ಸಾವಿರ ಕ್ರಿಮಿನಲ್ ಹಾಗೂ ಸಿವಿಲ್ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದು, ಅವುಗಳಲ್ಲಿ ಕಾನೂನಿನಂತೆ 19,591 ಪ್ರಕರಣಗಳನ್ನು ರಾಜಿ ಮಾಡಲು ಅವಕಾಶವಿದೆ. ಈ ಪೈಕಿ 4088 ಪ್ರಕರಣಗಳಲ್ಲಿ ರಾಜಿ ಸಂಧಾನ ನಿರೀಕ್ಷಿಸಲಾಗಿದ್ದು, ಅವುಗಳಲ್ಲಿ 808 ಪ್ರಕರಣಗಳು ಡಿ.19 ರಂದು ವಿಲೇವಾರಿಯಾಗಲು ಸಿದ್ಧವಾಗಿವೆ. ಡಿ.19ರ ಲೋಕ ಅದಾಲತ್‍ನಲ್ಲಿ ನಗರದಲ್ಲಿ 10 ಬೆಂಚ್‍ಗಳಿದ್ದು, ಒಟ್ಟು 24 ಬೆಂಚ್‍ಗಳಿರಲಿವೆ ಎಂದರು.
ಕೋರ್ಟ್ ಫೀ ವಾಪಸು
ಸಾಕಷ್ಟು ಪ್ರಕರಣಗಳನ್ನು ಕಾನೂನಿನಂತೆ ರಾಜಿ ಮಾಡಲು ಅವಕಾಶವಿದ್ದು, ಚೆಕ್‍ಬೌನ್ಸ್, ಮರಳು ಸಮಸ್ಯೆ, ಮೋಟಾರು ಅಪಘಾತದ ಪರಿಹಾರ ಪ್ರಕರಣಗಳು, ಭೂಸ್ವಾಧೀನ, ಪಾಲು ಪಂಕ್ತಿಗೆ ಸಂಬಂಧಿಸಿದ ಕೇಸುಗಳು, ಜೀವನಾಂಶ ಹಾಗೂ ಜನನ ದಿನಾಂಕದ ಪ್ರಕರಣಗಳನ್ನು ಕಾನೂನಿನಲ್ಲಿ ಸಂಧಾನ ನಡೆಸಲು ಅವಕಾಶವಿದೆ. ಕೆಲವೊಂದು ರಾಜಿಯಾದ ಪ್ರಕರಣಗಳಲ್ಲಿ ಪಾವತಿಸಿದ ನ್ಯಾಯಾಲಯ ಶುಲ್ಕವನ್ನು ವಾಪಸು ನೀಡಲು ಸಾಧ್ಯವಿದೆ. ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳಲ್ಲಿ ಶೇ.100 ಪರಿಹಾರ ಬಿಡುಗಡೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ಕೆಲವೊಂದು ಪ್ರಕರಣಗಳ ವಾಸ್ತವ ಸ್ಥಿತಿಗತಿ ಆಧರಿಸಿ ಇಂತಿಷ್ಟು ಪರಿಹಾರ ನೀಡಲಾಗುತ್ತಿತ್ತು. ಉಳಿದ ಹಣವನ್ನು ಫಿಕ್ಸೆಡ್ ಡಿಪಾಜಿಟ್‍ನಲ್ಲಿ ಇಡಲಾಗುತ್ತಿತ್ತು. ಆದರೆ ಇಲ್ಲಿ ಶೇ.100ರಷ್ಟು ಪರಿಹಾರವನ್ನು ಶೀಘ್ರವಾಗಿ ಪಡೆಯಬಹುದು. ಲೋಕ ಅದಾಲತ್‍ನಲ್ಲಿ ಇತ್ಯರ್ಥವಾದ ಪ್ರಕರಣಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ವಾಹನ ಹಾನಿಗೆ ಶೇ.100 ಪರಿಹಾರ
ವಾಹನಗಳಿಗೆ ಹಾನಿಯಾದವುಗಳಲ್ಲಿ ಶೇ.100 ರಷ್ಟು ಪರಿಹಾರ ಪಡೆಯಬಹುದು. ಅಪಘಾತದಲ್ಲಿ ಗಾಯಗೊಂಡವರಿಗೆ ವೈದ್ಯಕೀಯ ವೆಚ್ಚದ ಎಲ್ಲ ಹಣವನ್ನು ಹಾಗೂ ಉಳಿದ ಹಣದ ಶೇ.50 ರಷ್ಟು ಬಾಕಿಯನ್ನು ನೀಡಲಾಗುವುದು. ರಾಜಿ ಪ್ರಕ್ರಿಯೆಯಿಂದ ಪಕ್ಷಗಾರರು ಹಾಗೂ ವಿವಾದದ ಎದುರುವಾದಿಗಳ ವಿಶ್ವಾಸ ಉಳಿಯಲಿದ್ದು ಸಮಯ ಹಾಗೂ ಹಣ ಉಳಿತಾಯವಾಗಲಿದೆ. ಜತೆಗೆ ಮಾನಸಿಕ ಸಮಾಧಾನ ದೊರೆಯಲಿದೆ. ಈ ಸಂದರ್ಭವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕೋರಿದರು. ಪಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ ಚೇಂಗಟಿ ಸುದ್ದಿಗೋಷ್ಠಿಯಲ್ಲಿದ್ದರು.