ಇ ಖಾತೆಗೆ ಶುಲ್ಕವಷ್ಟೇ ಪಾವತಿಸಿ

E-account movement
E-account movement at nelamangala
Published on

ಗ್ರಾಪಂ ಅಧ್ಯಕ್ಷ ಹನುಮಂತರಾಜು ಸಲಹೆ

ಮದಲಕೋಟೆಯಲ್ಲಿ ಅಭಿಯಾನಕ್ಕೆ ಚಾಲನೆ


ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಬಡಜನತೆಗೆ ಹೆಚ್ಚು ಉಪಯುಕ್ತವಾಗುವ ಇ-ಖಾತಾ ಆಂದೋಲನವನ್ನು ಪ್ರತಿಯೊಬ್ಬರೂ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಗ್ರಾಪಂ ಅಧ್ಯಕ್ಷ ಹನುಮಂತರಾಜು ತಿಳಿಸಿದರು.
ತಾಲೂಕಿನ ಶ್ರೀನಿವಾಸಪುರ ಗ್ರಾಪಂನ ಮದಲಕೋಟೆ ಗ್ರಾಮದಲ್ಲಿ ವಾರ್ಡ್ ಸಭೆ ಪ್ರಯುಕ್ತ ಆಯೋಜಿಸಿದ್ದ ಇ-ಖಾತಾ ಆಂದೋಲನದಲ್ಲಿ ಮಾತನಾಡಿದರು.
ಗ್ರಾಪಂ ವ್ಯಾಪ್ತಿಯ ಪ್ರತಿಯೊಂದು ಗ್ರಾಮದಲ್ಲೂ ಇ-ಖಾತಾ ಅಂದೋಲನ ಹಮ್ಮಿಕೊಳ್ಳಲಾಗಿದೆ. ಈ ಆಂದೋಲನ ತಾಲೂಕಿನಲ್ಲೇ ಪ್ರಥಮ ಪ್ರಯೋಗವಾಗಿದೆ. ಗ್ರಾಮ ಠಾಣಾ ವ್ಯಾಪ್ತಿಯಲ್ಲಿರುವ ಆಸ್ತಿಯನ್ನು ಗಣಕೀಕರಣ ವ್ಯವಸ್ಥೆಯ ಮೂಲಕ ಸಾರ್ವಜನಿಕರು ಖಾತೆ ಮಾಡಿಸಿಕೊಳ್ಳಬೇಕು. ನಮೂನೆ 9 ಮತ್ತು 11, ಮತ್ತು 11ಬಿ ಅರ್ಜಿಗಳೊಂದಿಗೆ ಅಗತ್ಯ ದಾಖಲೆ ಒದಗಿಸಿ ಸರ್ಕಾರಿ ಶುಲ್ಕ ಹೊರತು ಪಡಿಸಿ ಬೇರೆ ಯಾವುದೇ ಹಣವನ್ನು ನೀಡಬಾರದು. ಸ್ಥಳದಲ್ಲೇ ಇ-ಖಾತಾ ಅರ್ಜಿಯನ್ನು ಸ್ವೀಕಾರ ಮಾಡಿ, ಖಾತೆ ಮಾಡಿಸಿಕೊಡಲಾಗುತ್ತಿದೆ ಎಂದರು.
ಸರ್ಕಾರದ ಸೌಲಭ್ಯ ಮತ್ತು ಪಂಚಾಯಿತಿ ಸೇವೆ ಬಗ್ಗೆ ಜನರಿಗೆ ತಿಳಿಸುವ ಉದ್ದೇಶದಿಂದ ವಾರ್ಡ್ ಸಭೆ ಹಮ್ಮಿಕೊಳ್ಳಲಾಗಿದೆ. ಇ-ಖಾತಾಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ಬೇಡಿಕೆ ಇದ್ದು, ಅಗತ್ಯ ದಾಖಲೆ ಸ್ವೀಕರಿಸಿ ಖಾತಾ ನಕಲು ನೀಡಲಾಗುತ್ತಿದೆ. ಪಂಚಾಯಿತಿಯ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು ಗ್ರಾಮಕ್ಕೆ ಆಗಮಿಸುತ್ತಿದ್ದು, ಸಾರ್ವಜನಿಕರು ಮುಕ್ತವಾಗಿ ಸಮಸ್ಯೆ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದರು.
ಅನಧಿಕೃತ ಬಡಾವಣೆ ನಿರ್ಮಾಣ:
ಮದಲಕೋಟೆ ಸರ್ವೇ ನಂ 109ರಲ್ಲಿ 2 ಎಕರೆಯಲ್ಲಿ ಬಡಾವಣೆ ನಿರ್ಮಾಣ ಹಾಗೂ ವಿವಿಧ ಗ್ರಾಮದಲ್ಲಿ ಅನಧಿಕೃತ ಬಡಾವಣೆ ನಿರ್ಮಾಣ ಮಾಡಿ ಪಂಚಾಯಿತಿ ಅನುಮತಿ ಇಲ್ಲದೆ ನಿವೇಶನ ಮಾರಾಟ ಮಾಡುತ್ತಿದ್ದು, ಖಾಸಗಿ ಬಡಾವಣೆಯಲ್ಲಿ ಅಧಿಕಾರಿಗಳು ಕಂದಾಯ ವಸೂಲಿ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net