ಕಟ್ಟಡ ನಕ್ಷೆ ಸೌಲಭ್ಯಕ್ಕೆ ಇ-ಖಾತಾ ಕಡ್ಡಾಯ: ಏ.1ರಿಂದ ನಿಯಮ ಜಾರಿಗೆ ಪಾಲಿಕೆ ನಿರ್ಧಾರ

bbmp office
Published on

ಬೆಂಗಳೂರು: ಮಹಾನಗರದಲ್ಲಿ ತಲೆಎತ್ತುತ್ತಿರುವ ಅಕ್ರಮ ಕಟ್ಟಡಗಳು ಹಾಗೂ ನಿರ್ಮಾಣ ಕಾರ್ಯದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಬಿಬಿಎಂಪಿಯು, ಹೊಸದಾಗಿ ನಿರ್ಮಿಸಲಾಗುವ ಬಿಲ್ಡಿಂಗ್‌ಗಳಿಗೆ ಕಟ್ಟಡ ನಕ್ಷೆ ಸೌಲಭ್ಯ ಪಡೆದುಕೊಳ್ಳಲು ಏ.1ರಿಂದ ಇ-ಖಾತಾ ಕಡ್ಡಾಯ ಮಾಡಲು ನಿರ್ಧರಿಸಿದೆ.

ಪ್ರಸ್ತುತ ಕಟ್ಟಡ ನಿರ್ಮಿಸಲು ನಿಯಮಾವಳಿ ಇದ್ದರೂ ಅವುಗಳು ಸಮರ್ಪಕವಾಗಿ ಪಾಲನೆಯಾಗುತ್ತಿಲ್ಲ. ಕಟ್ಟಡ ಉಪವಿಧಿ ಹಾಗೂ ನಿಯಮಗಳನ್ನು ಅನುಷ್ಠಾನಕ್ಕೆ ತರಲು ಪಾಲಿಕೆಯ ಅಧಿಕಾರಿ ವರ್ಗ ತಮ್ಮ ಹೊಣೆಯನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಸಾರ್ವಜನಿಕರು ಕೂಡ ನಿಯಮ ಪಾಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ವಿವಿಧ ಸಮಸ್ಯೆಗಳು ಉದ್ಭವಿಸುತ್ತಿದ್ದು, ನಗರ ಅಭಿವೃದ್ಧಿ ಯೋಜಿತವಾಗಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಡಿವಾಣ ಹಾಕಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕ್ರಮಬದ್ಧತೆ ತರುವ ಗಟ್ಟಿ ತೀರ್ಮಾನವನ್ನು ಪಾಲಿಕೆ ಕೈಗೊಂಡಿದೆ. ಇದರನ್ವಯ ಹೊಸ ಕಟ್ಟಡಗಳನ್ನು ನಿರ್ಮಿಸುವುದಿದ್ದಲ್ಲಿ ಇ-ಖಾತಾ ಪಡೆದೇ ಆಸ್ತಿದಾರರು ಬಿಲ್ಡಿಂಗ್ ಕಟ್ಟಲು ಮುಂದಾಗಬೇಕಾಗುತ್ತದೆ.

ಇ-ಖಾತಾದಿಂದ ಅಕ್ರಮಕ್ಕೆ ಕಡಿವಾಣ:

ಬಿಬಿಎಂಪಿ ವ್ಯಾಪ್ತಿಯ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಆಸ್ತಿಗಳ ಖರೀದಿ ಹಾಗೂ ಮಾರಾಟಕ್ಕೆ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಆಸ್ತಿಗಳ ದಾಖಲೆಗಳ ಸಾಚಾತನ, ಅಕ್ರಮ ತಡೆಗಟ್ಟಲು ಈ ನಿಯಮವನ್ನು ಜಾರಿಗೊಳಿಸಲಾಗಿದೆ. ಇದರಿಂದ ಯಾವುದೇ ಸ್ವತ್ತನ್ನು ನಕಲಿ ದಾಖಲೆ ಸೃಷ್ಟಿಸಿ ಜನರಿಗೆ ಮೋಸ ಮಾಡಲು ಸಾಧ್ಯವಾಗದು. ಇದು ಜನರಿಗೂ ಹಲವು ವಿಧದಲ್ಲಿ ಅನುಕೂಲವಾಗಲಿದೆ. ಹಾಗಾಗಿ ಇದೇ ಪದ್ಧತಿಯನ್ನು ಕಟ್ಟಡ ನಿರ್ಮಿಸಲು ಇ-ಖಾತಾ ಕಡ್ಡಾಯ ಮಾಡಲಾಗಿದೆ.

ಪ್ರಸ್ತುತ ಪಾಲಿಕೆಯಲ್ಲಿ ಕಟ್ಟಡ ನಕ್ಷೆಯನ್ನು ಮ್ಯಾನ್ಯುಯಲ್ ಖಾತಾ (ಕೈಬರಹದ ದಾಖಲೆ) ರೂಪದಲ್ಲಿ ವಿತರಿಸಲಾಗುತ್ತದೆ. ಕೆಲವೊಮ್ಮೆ ಈ ದಾಖಲೆಯನ್ನು ತಿದ್ದಿ ಅಥವಾ ನಕಲು ಮಾಡಿ ಹೆಚ್ಚುವರಿ ಭಾಗ ನಿರ್ಮಿಸಲು ಬಳಸಲಾಗುತ್ತಿದೆ. ಇತ್ತೀಚಿಗೆ ಆರ್.ಆರ್.ನಗರ ಸೇರಿ ಕೆಲವೆಡೆ ಕಟ್ಟಡ ನಕ್ಷೆಯನ್ನು ದುರ್ಬಳಕೆ ಮಾಡಿಕೊಂಡು ಹೆಚ್ಚುವರಿ ಮಹಡಿ ನಿರ್ಮಿಸಿದ್ದನ್ನು ಪಾಲಿಕೆ ಪತ್ತೆಹಚ್ಚಿತ್ತು. ಇಂತಹ ತಪ್ಪುಗಳಿಗೆ ಆಸ್ಪದ ನೀಡಲು ಇ-ಖಾತಾ ವಿತರಣೆಯಿಂದ ತಡೆಬೀಳಲಿದೆ. ಜತೆಗೆ ಈ-ಖಾತಾದಲ್ಲೇ ಸ್ವತ್ತುದಾರರ ಭಾವಚಿತ್ರ ಸಹಿತ ಹೆಸರು, ವಿಳಾಸ ಇತ್ಯಾದಿ ಅಂಶಗಳು ಲಭ್ಯವಾಗಲಿದೆ. ಕಟ್ಟಡ ನಿರ್ಮಿಸಿದ ಬಳಿಕ ಅದಕ್ಕೆ ಕರಾರುವಕ್ಕಾದ ವಿಸ್ತೀರ್ಣವನ್ನು ಲೆಕ್ಕಹಾಕಿ ಆಸ್ತಿತೆರಿಗೆ ನಿಗದಿ ಮಾಡಲು ಸಾಧ್ಯವಾಗಲಿದೆ. ಆಸ್ತಿದಾರರು ಕಡಿಮೆ ತೆರಿಗೆ ಪಾವತಿ ಮಾಡುವುದಕ್ಕೂ ತಡೆಬೀಳಲಿರುವುದರಿಂದ ಬಿಬಿಎಂಪಿ ಕಟ್ಟಡ ನಕ್ಷೆ ಪಡೆಯುವ ಸೌಲಭ್ಯಕ್ಕೆ ಇ-ಖಾತಾ ಕಡ್ಡಾಯ ಮಾಡಿದೆ.

ನೀರು, ವಿದ್ಯುತ್ ಸಂಪರ್ಕಕ್ಕೆ ಕೊಕ್:

ಇನ್ನು ಮುಂದೆ ನಗರದಲ್ಲಿ ಕಟ್ಟಡ ನಕ್ಷೆ ಮಂಜೂರಾತಿ ಪತ್ರ ಇಲ್ಲದಿದ್ದಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕದ ಸೌಲಭ್ಯ ಪಡೆಯಲು ಸಾಧ್ಯವಾಗದು. ಇಂಥದ್ದೊಂದು ನಿಯಮವನ್ನು ಪಾಲಿಕೆಯು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ಮುಂದಾಗಿದೆ. ಸುಪ್ರೀಂಕೋರ್ಟ್ ನೀಡಿರುವ ಆದೇಶದನ್ವಯ ನಕ್ಷೆ ಉಲ್ಲಂಘಿಸಿ ನಿರ್ಮಿಸಲಾಗುವ ಕಟ್ಟಡಗಳ ವಿಚಾರದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬಹುದು ಎಂದು ಹೇಳಿದೆ. ಈ ಆದೇಶ ಆಧರಿಸಿ ಪಾಲಿಕೆಯು ಬೆಂಗಳೂರಿನಲ್ಲಿ ಯದ್ವಾತದ್ವ ನಿರ್ಮಾಣ ಚಟುವಟಿಕೆಗಳಿಗೆ ತಡೆ ಹಾಕಲು ಈ ನಿಯಮವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿದೆ. ಈ ವಿಚಾರದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು ಜಲಮಂಡಳಿ ಹಾಗೂ ಬೆಸ್ಕಾಂ ಮುಖ್ಯಸ್ಥರಿಗೆ ಪತ್ರ ಬರೆದು ಕಟ್ಟಡ ನಕ್ಷೆ ಪಡೆಯದಿದ್ದಲ್ಲಿ ಸೌಲಭ್ಯ ನೀಡಬಾರದು ಎಂದು ವಿನಂತಿಸಿದ್ದಾರೆ.

ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ:

ನಗರದಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಕಡಿವಾಣ ಹಾಕುವಂತೆ ಸ್ವತ: ಸಿಎಂ ಹಾಗೂ ಡಿಸಿಎಂ ಅವರು ಪಾಲಿಕೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜತೆಗೆ ನಗರಾಭಿವೃದ್ಧಿ ಇಲಾಖೆಯಿಂದಲೂ ಆದೇಶ ಜಾರಿಯಲ್ಲಿದೆ. ಹಾಗಾಗಿ ಅನಧಿಕೃತವಾಗಿ ಕಟ್ಟುತ್ತಿರುವ ಬಿಲ್ಡಿಂಗ್‌ಗಳ ವಿರುದ್ಧ ನಿದಾಕ್ಷಿಣ್ಯ ಕ್ರಮ ಕೈಗೊಳ್ಳಲು ವಲಯ ಮುಖ್ಯಸ್ಥರಿಗೆ ಅಧಿಕಾರ ನೀಡಲಾಗಿದೆ. ನಕ್ಷೆ ಮಂಜೂರಾತಿಗೆ ವಿರುದ್ಧವಾಗಿ ನಿರ್ಮಾಣ ಕಾರ್ಯ ಕೈಗೊಂಡಲ್ಲಿ ಹೆಚ್ಚುವರಿ ಭಾಗ ತೆರವುಗೊಳಿಸಲಾಗುವುದು. ಆದರೆ, ಇಡೀ ಕಟ್ಟಡವನ್ನು ಹೊಡೆದುಹಾಕಲು ನಮಗೆ ಸಾಧ್ಯವಾಗದು. ಈ ವಿಚಾರದಲ್ಲಿ ಕೆಲವರು ನ್ಯಾಯಾಲಯಕ್ಕೆ ಹೋಗುವುದರಿಂದ ನಿಯಮಗಳ ಚೌಕಟ್ಟಿನೊಳಗೆ ಕಾರ್ಯಾಚರಣೆ ನಡೆಸುತ್ತೇವೆ ಎಂಬುದಾಗಿ ಬಿಬಿಎಂಪಿ ಆಯುಕ್ತರು ನಿಲುವು ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಆಯುಕ್ತರು ಬರದಿರುವ ಪತ್ರ ಇನ್ನೂ ನಮ್ಮ ಕೈಸೇರಿಲ್ಲ. ಆದರೂ, ಜಲಮಂಡಳಿಯುವ ನಿಯಮ ಪಾಲಿಸುವ ಕಟ್ಟಡ ಮಾಲೀಕರಿಗಷ್ಟೇ ಮೊದಲು ಕುಡಿಯುವ ನೀರಿಗೆ ತಾತ್ಕಾಲಿಕ ಸಂಪರ್ಕ, ನಂತರ ಕಾಯಂ ಸೌಲಭ್ಯ ನೀಡಲಾಗುವುದು. ಅಕ್ರಮಗಳಿಗೆ ಕಡಿವಾಣ ಹಾಕಲು ಪಾಲಿಕೆ ನಿಯಮ ರೂಪಿಸಿದರೆ ಅದನ್ನು ಪಾಲಿಸಲು ಬದ್ಧ.

- ರಾಮಪ್ರಸಾತ್ ಮನೋಹರ್, ಜಲಮಂಡಳಿ ಅಧ್ಯಕ್ಷ

ಕಟ್ಟಡ ನಿರ್ಮಿಸಲು ನಕ್ಷೆ ಹಾಗೂ ಆರಂಭಿಕ ಪ್ರಮಾಣಪತ್ರ (ಸಿಸಿ) ಇದಲ್ಲಿ ವಿದ್ಯುತ್ ಸಂಪರ್ಕ ಕೊಡಬೇಕು, ಇಲ್ಲದಿದ್ದಲ್ಲಿ ಸೌಲಭ್ಯ ನೀಡಬಾರದು ಎಂಬ ಪಾಲಿಕೆ ಆಯುಕ್ತರ ಪತ್ರದಂತೆ ಕ್ರಮ ಕೈಗೊಳ್ಳಲಾಗುವುದು. ನಮ್ಮ ಸಂಸ್ಥೆಯಿಂದ ಯಾವುದೇ ಅಕ್ರಮ ಕಟ್ಟಡಗಳಿಗೆ ಸೌಲಭ್ಯ ನೀಡುವುದಿಲ್ಲ. ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸುತ್ತೇವೆ.

- ಮಹಾಂತೇಶ್ ಬೀಳಗಿ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net