

ಮುಂಡರಗಿ: ರಾಜ್ಯ ಸರ್ಕಾರದ ಆದೇಶದಂತೆ ಪಟ್ಟಣದ ಪುರಸಭೆ ವ್ಯಾಪ್ತಿಯ ಸಾರ್ವಜನಿಕರ ಅನಧಿಕೃತ ಆಸ್ತಿಗಳಿಗೆ ಇ-ಖಾತೆ (ನಮೂನೆ-3) ದಾಖಲಿಸುವ ಹಾಗೂ ಪಡೆಯುವ ಸುವರ್ಣಾವಕಾಶ ಕಲ್ಪಿಸಿದ್ದರಿಂದ ಪುರಸಭೆಯಲ್ಲಿ ಇ-ಖಾತೆ ವಿತರಣೆ ಅಭಿಯಾನ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಹೇಳಿದರು.
ಪಟ್ಟಣದ ಪುರಸಭೆ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇ-ಖಾತೆ ವಿತರಣೆ ಅಭಿಯಾನ ಹಾಗೂ ಪುರಸಭೆ ಸದಸ್ಯರಿಗೆ ಯೋಜನೆ ಅರಿವು ಮೂಡಿಸುವ ಸಭೆಯಲ್ಲಿ ಅವರು ಮಾತನಾಡಿದರು. ಪುರಸಭೆ ವ್ಯಾಪ್ತಿಯ ಎಲ್ಲ ರೀತಿಯ ಕಟ್ಟಡ ಮತ್ತು ನಿವೇಶನಗಳಿಗೆ ಆಸ್ತಿ ತೆರಿಗೆಯನ್ನು ನಿಗದಿಗೊಳಿಸಲಾಗಿದೆ. 1964ರ ಕರ್ನಾಟಕ ಪೌರಸಭೆಗಳ ಅಧಿನಿಯಮ ಸೆಕ್ಷನ್ 106 (ಬಿ)ರನ್ವಯ ಸಂಬಂಧಪಟ್ಟ ಆಸ್ತಿ ಮಾಲೀಕರಿಂದ ಅವಶ್ಯ ದಾಖಲೆಗಳನ್ನು ಪಡೆದು ಅಗತ್ಯ ಮಾಹಿತಿಗಳನ್ನು ನಿರ್ವಹಿಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದರು.
ಪುರಸಭೆ ವ್ಯಾಪ್ತಿಯಲ್ಲಿ ಬರುವ ಕಟ್ಟಡಗಳ ಮತ್ತು ನಿವೇಶನಗಳ ಮಾಲೀಕರು 2024ರ ಸೆಪ್ಟೆಂಬರ್ 10ರ ಪೂರ್ವದಲ್ಲಿ ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ಪೂರಕ ಹಾಗೂ ಅಗತ್ಯ ದಾಖಲಾತಿಗಳಾದ ಆಸ್ತಿಗೆ ಸಂಬಂಧಿಸಿದಂತೆ ನೋಂದಾಯಿತ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ದಾಖಲೆ, ಹಕ್ಕಪತ್ರ, ವಿಭಾಗ ಪತ್ರ, ದಾನಪತ್ರ, ಭೂ ಪರಿವರ್ತನೆ ಆದೇಶ ಪತ್ರ, ಪುರಸಭೆಗೆ ನೀಡಿದ ವಿವಿಧ ತೆರಿಗೆಗಳ ದಾಖಲೆ ಮೊದಲಾದವುಗಳನ್ನು ಸಲ್ಲಿಸಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ಆಸ್ತಿ ಮಾಲೀಕರಿಗೆ ನಿಯಮ 10ಎ ರಂತೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷೆ ನಿರ್ಮಲಾ ಕೊರ್ಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷ ಮಹ್ಮದರಫಿ ಮುಲ್ಲಾ, ಸದಸ್ಯರಾದ ಲಿಂಗರಾಜಗೌಡ ಪಾಟೀಲ, ನಾಗರಾಜ ಹೊಂಬಳಗಟ್ಟಿ, ಕವಿತಾ ಉಳ್ಳಾಗಡ್ಡಿ, ಟಿ.ಬಿ. ದಂಡಿನ, ಪ್ರಕಾಶ ಹಲವಾಗಲಿ, ಪ್ರಹ್ಲಾದ ಹೊಸಮನಿ, ಶಿವಾನಂದ ಬಾರಕೇರ, ರೈಮಾನಸಾಬ್ ಮಲ್ಲನಕೇರಿ, ಇತರರಿದ್ದರು.