

ಶಿವಮೊಗ್ಗ: ಖಜಾನೆ ಗಾರ್ಡ್ ಕರ್ತವ್ಯ ಮುಂದುವರಿಸಲು ಪೇದೆಯಿಂದ 5 ಸಾವಿರ ರೂ. ಲಂಚ ಕ್ಕೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಡಿಎಆರ್) ಡಿವೈಎಸ್‌ಪಿ ಮತ್ತು ಎಆರ್‌ಎಸ್‌ಐ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಡಿವೈಎಸ್‌ಪಿ ಟಿ.ಪಿ.ಕೃಷ್ಣಮೂರ್ತಿ ಮತ್ತು ಎಆರ್‌ಎಸ್‌ಐ ಎಂ.ಕೆ.ರವಿ ಅವರನ್ನು ಲಂಚ ಸ್ವೀಕರಿಸಿದ ಆರೋಪದ ಮೇಲೆ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಪೇದೆಯೊಬ್ಬರು ಭದ್ರಾವತಿ ಟೌನ್‌ನ ತಾಲೂಕು ಕಚೇರಿಯ ಖಜಾನೆಯಲ್ಲಿ ಗಾರ್ಡ್ ಆಗಿದ್ದು ಅಲ್ಲಿ ಸೇವೆ ಮುಂದುವರಿಸಲು ಡಿವೈಎಸ್‌ಪಿ ಕೃಷ್ಣಮೂರ್ತಿ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚದ ಮೊತ್ತವನ್ನು ಎಆರ್‌ಎಸ್‌ಐ ರವಿ ಅವರ ಬಳಿ ನೀಡುವಂತೆ ಪೇದೆಗೆ ಸೂಚಿಸಿದ್ದರು.
ಡಿವೈಎಸ್‌ಪಿ ಮತ್ತು ಎಆರ್‌ಎಸ್‌ಐ ಇಬ್ಬರೂ ಮೊಬೈಲ್‌ನಲ್ಲಿ ಮಾತನಾಡಿದ್ದನ್ನು ರೇಕಾರ್ಡ್ ಮಾಡಿಕೊಂಡಿದ್ದ ಪೇದೆ, ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಮಂಗಳವಾರ ಮಧ್ಯಾಹ್ನ ಡಿಎಆರ್ ಪೊಲೀಸ್ ವಸತಿ ಗೃಹ ಕಾವೇರಿ ಬ್ಲಾಕ್ ನಂ-2ರ ಮನೆಯಲ್ಲಿ ಲಂಚ ಸ್ವೀಕರಿಸುವಾಗ ಡಿವೈಎಸ್‌ಪಿ ಕೃಷ್ಣಮೂರ್ತಿ ರೆಡ್‌ಹ್ಯಾಂಡ್ ಆಗಿದ್ದ ಸಿಕ್ಕಿಬಿದ್ದಿದ್ದಾರೆ.
ಇದೇ ಪ್ರಕರಣದಲ್ಲಿ ರವಿ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಲೋಕಾಯಕ್ತ ಪೊಲೀಸ್ ಇನ್‌ಸ್ಪೆಕ್ಟರ್ ವೀರಬಸಪ್ಪ ಕುಸಲಾಪುರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ನೇತೃತ್ವದಲ್ಲಿ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ್, ಇನ್‌ಸ್ಪೆಕ್ಟರ್ ವೀರಬಸಪ್ಪ ಕುಸಲಾಪುರ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಲಂಚದ ಸಮೇತ ಡಿವೈಎಸ್ಪಿ ಮತ್ತು ಎಆರ್‌ಎಸ್‌ಐ ಅವರನ್ನು ಬಂಧಿಸಿದೆ.