ಕೇಂದ್ರದಲ್ಲಿ ಬ್ರಿಟಿಷರಿಗಿಂತ ಹೀನ ಆಡಳಿತ, ಡಿವೈಎಫ್‌ಒ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್ ಟೀಕೆ

DYFO
ಸಂಡೂರು ತಾಲೂಕು ತೋರಣಗಲ್‌ನ ಹೋಟೆಲ್‌ವೊಂದರಲ್ಲಿ ಹಮ್ಮಿಕೊಂಡಿದ್ದ ಡಿವೈಎಫ್‌ಒ 7ನೇ ತಾಲೂಕು ಸಮ್ಮೇಳನದಲ್ಲಿ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್ ಗುರುವಾರ ಮಾತನಾಡಿದರು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜೆ.ಎಂ.ಚನ್ನಬಸವಯ್ಯ, ಜಿಲ್ಲಾ ಅಧ್ಯಕ್ಷ ಎರಿಸ್ವಾಮಿ, ತಾಲೂಕು ಅಧ್ಯಕ್ಷ ಶಿವಾರೆಡ್ಡಿ ಮತ್ತಿತರರಿದ್ದರು.
Published on

ಸಂಡೂರು: ಭಾರತ 75ನೇ ಸ್ವಾತಂತ್ರೃ ಮಹೋತ್ಸವ ಆಚರಿಸಿಕೊಂಡರೂ ತಿನ್ನುವ ಅನ್ನ, ವಾಸಕ್ಕೆ ಸೂರಿ, ವಸತಿಗಾಗಿ ನರಳುತ್ತಿದೆ. ಆಡಳಿತ ಸರ್ಕಾರಗಳು ಬ್ರಿಟಿಷರಿಗಿಂತ ಹೀನವಾಗಿ ದೇಶವನ್ನಾಳುತ್ತಿವೆ ಎಂದು ಡಿವೈಎಫ್‌ಒ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್ ಟೀಕಿಸಿದರು.

ತಾಲೂಕಿನ ತೋರಣಗಲ್‌ನ ಹೋಟೆಲ್‌ವೊಂದರಲ್ಲಿ ಡಿವೈಎಫ್‌ಒ 7ನೇ ತಾಲೂಕು ಸಮ್ಮೇಳನ ಉದ್ಘಾಟಿಸಿ ಗುರುವಾರ ಮಾತನಾಡಿದರು. ಹಿಂದು-ಮುಸ್ಲಿಮರು ಸೇರಿ ದೇಶವನ್ನು ಕಟ್ಟಿದ್ದಾರೆ. ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತವನ್ನು ನಾಶ ಮಾಡಲಿಕ್ಕೆ ಕೇಂದ್ರ ಸರ್ಕಾರ ಹೊರಟಿದೆ.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯುವಜನತೆ ಎಚ್ಚರಗೊಳ್ಳಬೇಕು. ಸ್ಥಳೀಯ ಕಾರ್ಖಾನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡದ ಜಿಂದಾಲ್ ಕಂಪನಿ, ನಿರುದ್ಯೋಗಿ ಯುವಕರು, ಕಾರ್ಖಾನೆಗೆ ಭೂಮಿ ನೀಡಿದ ಕುಟುಂಬಗಳಿಗೆ ಪರಿಹಾರ ನೀಡದೆ ವಂಚಿಸುತ್ತಿದೆ.

ಧನವಂತರು ಖಾಸಗಿ ಶಾಲೆಗಳನ್ನು ತೆರೆಯಲೆಂಬ ಉದ್ದೇಶದಿಂದ ಎನ್‌ಇಪಿ ಜಾರಿ ಮಾಡಲಾಗಿದೆ. ನಮ್ಮ ಸೈನ್ಯವನ್ನೇ ಖಾಸಗೀಕರಣ ಮಾಡಿ ದೇಶವನ್ನು ಅಪಾಯದ ಹಂಚಿಗೆ ತಂದಿಟ್ಟಿದೆ. ದೇಶದ ಐಕ್ಯತೆ ಒಡೆಯುವ ಕೆಲಸ ಕೇಂದ್ರ ಸರ್ಕಾರ ನಿರಂತರ ಮಾಡುತ್ತಿದೆ ಎಂದು ದೂರಿದರು.

ಡಿವೈಎಪ್‌ಒ ಜಿಲ್ಲಾ ಸಹ ಕಾರ್ಯದರ್ಶಿ ಎಸ್.ಕಾಲುಬಾ ಮಾತನಾಡಿ, ಮೋದಿ ಸರ್ಕಾರ, ಎರಡು ಕೋಟಿ ಉದ್ಯೋಗ ನೀಡುವ ಬದಲು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡುವ ಮೂಲಕ ನಿರುದ್ಯೋಗ ಮಟ್ಟ ಹೆಚ್ಚಿಸುತ್ತಿದೆ. ಭೇಟಿ ಪಡಾವೋ ಭೇಟಿ ಬಚಾವೋ ಘೋಷಣೆ ಮಾಡಿ ಮಣಿಪುರದಂತಹ ರಾಜ್ಯದಲ್ಲಿ ಬುಡಕಟ್ಟು ಜನಾಂಗದ ಮಹಿಳೆಯರನ್ನು ಬೆತ್ತಲೆಗೊಳಿಸಿ ಸಾಮೂಹಿಕ ಅತ್ಯಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪಿಸಿದರು.

ಜಿಂದಾಲ್ ಕಂಪನಿ ಸ್ಥಳೀಯರಿಗೆ ಉದ್ಯೋಗ ನೀಡದೆ ವಂಚಿಸುತ್ತಿದೆ. ಇಲ್ಲಿನ ನೈಸರ್ಗಿಕ ಸಂಪನ್ಮೂಲ ಸ್ಥಳೀಯರಿಗೆ ಬಳಕೆಯಾಗಬೇಕು. ಇಲ್ಲಿನ ನೆಲ, ಜಲ ನಮ್ಮದು. ಉದ್ಯೋಗವೂ ನಮ್ಮದೇ. ಬಹುಗ್ರಾಮ ಕುಡಿವ ನೀರಿನ ಯೋಜನೆ ಹಿಂದಿನ ಸಿದ್ದರಾಮಯ್ಯ ಸರ್ಕಾರ ಇಲ್ಲಿನ ಭುವನಹಳ್ಳಿಯಲ್ಲಿ ಸ್ಥಾಪಿಸಲು ಯೋಜಿಸಿತ್ತು. ಸ್ಥಳೀಯ ಶಾಸಕರ ಇಚ್ಛಾಶಕ್ತಿ ಕೊರತೆಯಿಂದ ಅದು ನನೆಗುದಿಗೆ ಬಿದ್ದಿದೆ. ಶುದ್ಧ ಕುಡಿವ ನೀರು ಒದಗಿಸುವಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಮುಂದಾಗಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net