ಜಾತ್ರೆ ವ್ಯಾಪಾರಿಗಳಿಗೆ ಬದುಕುವ ಗ್ಯಾರಂಟಿ ಕೊಡಿ ಪ್ರತಿಭಟನಾ ಸಭೆಯಲ್ಲಿ ಬಿ.ಕೆ. ಇಮ್ತಿಯಾಝ್ ಆಗ್ರಹ

mng--13 Oct DYFI Protest
Published on

ಮಂಗಳೂರು: ದೇಶದ ಸಂವಿಧಾನ ಎಲ್ಲರಿಗೂ ಬದುಕುವ ಹಕ್ಕನ್ನು ನೀಡಿದೆ. ಆದರೆ ಮಂಗಳೂರಿನಲ್ಲಿ ಜಾತ್ರೆ ವ್ಯಾಪಾರವನ್ನೇ ನಂಬಿಕೊಂಡು ಬದುಕುವ ಜಾತ್ರೆ ವ್ಯಾಪಾರಿಗಳಿಗೆ ವ್ಯಾಪಾರದ ಹಕ್ಕನ್ನು ನಿರಾಕರಿಸಲಾಗಿದೆ. ಸರ್ಕಾರ ಅನೇಕ ಗ್ಯಾರಂಟಿಗಳನ್ನು ಕೊಟ್ಟಿದೆ. ಜಾತ್ರೆ ವ್ಯಾಪಾರಿಗಳಿಗೆ ಬದುಕುವ ಗ್ಯಾರೆಂಟಿ ಕೊಡಿ ಎಂದು ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಆಗ್ರಹಿಸಿದರು.


ನಗರದ ಪುರಭವನದ ಬಳಿ ಶುಕ್ರವಾರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಶ್ರೀ ಮಂಗಳಾದೇವಿ ದೇವಸ್ಥಾನದ ನವರಾತ್ರಿ ಉತ್ಸವದಲ್ಲಿ ನಿರ್ದಿಷ್ಟ ಸಮುದಾಯದ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸಲಾಗಿದೆ. ಹಿಂದೂ ಧಾರ್ಮಿಕ ಕಾಯ್ದೆಯನ್ನು ಗೌರವಿಸುತ್ತೇವೆ. ಹಾಗೆಯೇ ಕರ್ನಾಟಕ ಮುನ್ಸಿಪಲ್ ಕಾಯ್ದೆ ಮತ್ತು ಬೀದಿಬದಿ ವ್ಯಾಪಾರದ ಕಾಯ್ದೆ ಉಲ್ಲಂಘನೆ ಮಾಡುವುದನ್ನು ವಿರೋಧಿಸುತ್ತೇವೆ ಎಂದರು.


ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ದಸರಾ ಎಲ್ಲರೂ ಸೇರಿ ಆಚರಿಸುವ ನಾಡ ಹಬ್ಬ. ಧರ್ಮದ ಹೆಸರಲ್ಲಿ ಬಡವರ ಹೊಟ್ಟೆಗೆ ಹೊಡೆಯುವುದು ಅಧರ್ಮ. ಮುಸ್ಲಿಮರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದೆನ್ನಲು ಹಿಂದೂ ಸನಾತನ ಜಾತ್ರೆ ವ್ಯಾಪಾರಿ ಸಂಘಕ್ಕೆ ಏನು ಸಂವಿಧಾನಿಕ ಹಕ್ಕಿದೆ ಎಂದು ಪ್ರಶ್ನಿಸಿದ ಅವರು ಮುಸ್ಲಿಂ ವ್ಯಾಪಾರಿಗಳಿಗೂ ಜಾತ್ರೆ ವ್ಯಾಪಾರ ನಡೆಸಲು ಹಕ್ಕಿದೆ ಎಂದು ಅವರು ಹೇಳಿದರು.


ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ, ಸಾಮಾಜಿಕ ಹೋರಾಟಗಾರ್ತಿ ಸಾಮರಸ್ಯ ಸಂಘಟನೆಯ ಮಂಜುಳಾ ನಾಯಕ್, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿದರು. ವಿವಿಧ ಸಂಘಟನೆಗಳ ಮುಖಂಡರಾದ ಮೊಹಮ್ಮದ್ ಮುಸ್ತಫಾ, ಹರೀಶ್ ಪೂಜಾರಿ ಬೋಂದೆಲ್, ಪ್ರವೀಣ್ ಕುಮಾರ್ ಕದ್ರಿ, ಶಿವಪ್ಪ, ಮನೋಜ್ ವಾಮಂಜೂರು, ಯೋಗೀಶ್ ಜಪ್ಪಿನಮೊಗರು, ನವೀನ್ ಕೊಂಚಾಡಿ, ಆಸೀಫ್ ಬಾವ ಉರುಮನೆ, ರಫೀಕ್ ಹರೇಕಳ, ಅಸುಂತ ಡಿಸೋಜಾ,ರಹಿಮಾನ್ ಅಡ್ಯಾರ್,ರಿಯಾಜ್ ಎಲ್ಯರ್ ಪದವು ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net