

ಮೈಸೂರು: ಉತ್ತಮ ಪ್ರದರ್ಶನ ನೀಡಿದ ಡಿವೈಇಎಸ್ ಬೆಂಗಳೂರು ತಂಡ ಪುರುಷರ ಆಹ್ವಾನಿತ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಹಾಕಿ ಮೈಸೂರು ಸಂಸ್ಥೆ ವತಿಯಿಂದ ನಗರದ ಮೈಸೂರು ವಿಶ್ವವಿದ್ಯಾಲಯದ ಹಾಕಿ ಮೈದಾನದಲ್ಲಿ ಆಯೋಜಿಸಿದ್ದ ಟೂರ್ನಿಯಲ್ಲಿ ಭಾನುವಾರ ಅಂತಿಮ ಪಂದ್ಯದಲ್ಲಿ ಎಜಿಒಆರ್‌ಸಿ ವಿರುದ್ಧ ಜಯ ಸಾಧಿಸುವ ಮೂಲಕ ಎರಡು ಲಕ್ಷ ರೂ. ನಗದು ಬಹುಮಾನ ತನ್ನದಾಗಿಸಿಕೊಂಡಿತು. ದ್ವಿತೀಯ ಸ್ಥಾನ ಪಡೆದ ಎಜಿಒಆರ್‌ಸಿ ತಂಡ ಒಂದೂವರೆ ಲಕ್ಷ ರೂ. ನಗದು ಬಹುಮಾನ ಪಡೆಯಿತು. ತೃತೀಯ ಸ್ಥಾನ ಪಡೆದ ಹಾಸನ ತಂಡ ಒಂದು ಲಕ್ಷ ರೂ. ನಗದು ಬಹುಮಾನ ಪಡೆದರೆ, ನಾಲ್ಕನೇ ಸ್ಥಾನ ಪಡೆದ ಮೈಸೂರು ತಂಡ 50 ಸಾವಿರ ರೂ. ನಗದು ಬಹುಮಾನ ತನ್ನದಾಗಿಸಿಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಗಣ್ಯರು ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ರಾಜ್ಯ ಹಾಕಿ ಸಂಸ್ಥೆ ಅಧ್ಯಕ್ಷ ಡಾ.ಎಸ್.ವಿ.ಎಸ್.ಸುಬ್ರಮಣ್ಯ ಗುಪ್ತ, ಸಂಸದ ಪ್ರತಾಪ್‌ಸಿಂಹ, ಶಾಸಕ ಕೆ.ಹರೀಶ್‌ಗೌಡ, ಪಾಲಿಕೆ ಮಾಜಿ ಸದಸ್ಯ ಸುಬ್ಬಯ್ಯ, ಸಂಸ್ಥೆ ಅಧ್ಯಕ್ಷ ದಿಲೀಪ್, ಕಾರ್ಯದರ್ಶಿ ಸಿ.ಟಿ.ಸತೀಶ್, ಸಂಸ್ಥೆ ಖಜಾಂಚಿ ಪೊನ್ನಪ್ಪ, ಗಿರೀಶ್ ಹಾಜರಿದ್ದರು.