65ವರ್ಷಗಳ ನಂತರ ಗ್ರಾಮ ದೇವತೆಗೆ ಜಾತ್ರೆಯ ಸಂಭ್ರಮ !

DEGULA
ಕುಷ್ಟಗಿಯ ಗ್ರಾಮ ದೇವತೆ ದ್ಯಾಮವ್ವ ದೇವಿ ದೇವಸ್ಥಾನದ ಹೊರನೋಟ. ಜಾತ್ರೆಗಾಗಿ ದೇವಸ್ಥಾನ ನವೀಕರಣ ಕಾರ್ಯ ನಡೆಯುತ್ತಿದೆ.
Published on

ಕುಷ್ಟಗಿ: ಕಳೆದ 65ವರ್ಷಗಳಿಂದ ಸ್ಥಗಿತಗೊಂಡಿದ್ದ ಪಟ್ಟಣದ ಗ್ರಾಮದೇವತೆ ದ್ಯಾಮವ್ವ ದೇವಿಯ ಜಾತ್ರೆಯನ್ನು ಈ ವರ್ಷ ಪುನರಾರಂಭಿಸಲಾಗಿದೆ. ಏ.9ರಿಂದ 20ರವರೆಗೆ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಜರುಗುತ್ತಿದ್ದು, ಜಾತ್ರೆ ನಡೆಯುವ 11ದಿನ ಪಟ್ಟಣ ವಾಸಿಗಳು ಬೇರೆಡೆ ಪ್ರಯಾಣ ಬೆಳೆಸುವಂತಿಲ್ಲ. ಈ ವೇಳೆ ಮದುವೆ ಇನ್ನಿತರ ಶುಭ ಕಾರ್ಯಗಳನ್ನೂ ಮಾಡುವಂತಿಲ್ಲ!

ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಜಾತ್ರೆಯ ವೈಭವವನ್ನು ಮರುಕಳಿಸುವಂತೆ ಮಾಡಲು ತೀರ್ಮಾನಿಸಿದ ಪಟ್ಟಣದ ವಿವಿಧ ಸಮುದಾಯಗಳ ಮುಖಂಡರು ಕಳೆದ ಡಿ.27ರಂದು ಸಭೆ ಸೇರಿ ಜಾತ್ರೆ ಪುನರಾರಂಭಿಸಲು ನಿರ್ಧರಿಸಿದರು. ಸದ್ಯ ಜಾತ್ರೆಯ ತಯಾರಿ ಭರದಿಂದ ಸಾಗಿದ್ದು, ಜಾತ್ರೆ ವೇಳೆ ಹಲವು ಕಟ್ಟಪ್ಪಣೆ ಪಾಲಿಸುವಂತೆ ದೇವಸ್ಥಾನ ಸಮಿತಿ ಸೂಚಿಸಿದೆ.

ಜಾತ್ರೆಯ 11ದಿನಗಳ ವರೆಗೆ ಕುಟ್ಟುವುದು, ಬೀಸುವುದು, ಹೊಲಿಗೆ ಹಾಕುವುದು, ಕಟ್ಟಿಗೆ ತುಂಡರಿಸುವುದು, ಕಮ್ಮಾರಿಕೆ, ಚಮ್ಮಾರಿಕೆ, ಕ್ಷೌರ ಮಾಡುವುದು, ಕೃಷಿ ಚಟುವಟಿಕೆ, ಯಂತ್ರಗಳ ಚಾಲನೆ ಮಾಡುವಂತಿಲ್ಲ. ಹಿಟ್ಟಿನ ಗಿರಣಿ, ಶ್ಯಾವಿಗೆ ಯಂತ್ರಗಳನ್ನೂ ಆರಂಭಿಸುವಂತಿಲ್ಲ. ಅನಿವಾರ್ಯ ಕಾರಣಗಳಿಂದ ಪಟ್ಟಣದಿಂದ ಪ್ರಯಾಣ ಬೆಳೆಸುವವರು ದೇವಿಗೆ ಹುಲುಸು(ನಾಣ್ಯದ ಕಾಣಿಕೆ) ಸಮರ್ಪಿಸಿ ತೆರಳಬೇಕು. ಹಿಂತಿರುಗಿ ಬಂದ ನಂತರ ಮತ್ತೊಮ್ಮೆ ದೇವಿಗೆ ಹುಲುಸು ಸಮರ್ಪಿಸಿ ಮನೆಗೆ ತೆರಳಬೇಕು.

ಪೂರ್ವ ನಿಯೋಜಿತ ಮದುವೆ ಇನ್ನಿತರ ಶುಭ ಕಾರ್ಯಗಳಿದ್ದರೆ ದೇವಿಗೆ ಹರಕೆ ಹೊತ್ತು ಆಶೀರ್ವಾದ ಪಡೆಯಬೇಕು. ಇಲ್ಲವಾದಲ್ಲಿ ಜಾತ್ರೆಯ ವೇಳೆ ಯಾವುದೇ ಕಾರ್ಯ ಮಾಡುವಂತಿಲ್ಲ. ಪ್ರತಿ ಮನೆಯವರು ತಮ್ಮ ಮನೆಯ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಿ ಮಡಿ ಮಾಡಿಕೊಳ್ಳಬೇಕು. ದೇವಿಯ ಮೂರ್ತಿ ಮೆರವಣಿಗೆ ವೇಳೆ ಮನೆ, ಕಟ್ಟಡಗಳ ಅಥವಾ ಇನ್ನಿತರ ಎತ್ತರದ ಸ್ಥಳಗಳ ಮೇಲೆ ನಿಂತು ನೋಡುವುದಾಗಲಿ ಪಾದರಕ್ಷೆಯೊಂದಿಗೆ ಓಡಾಡುವುದಾಗಲಿ ಮಾಡುವಂತಿಲ್ಲ. ಮನೆಗೆ ಹೆಣ್ಣುಮಕ್ಕಳನ್ನು ಕರೆಯಿಸಿ ಅವರಿಗೆ ಉಡಿ ತುಂಬಿ ಗೌರವದಿಂದ ನಡೆದುಕೊಳ್ಳಬೇಕು ಎಂಬ ಕಟ್ಟಪ್ಪಣೆ ವಿಧಿಸಲಾಗಿದೆ.

65ವರ್ಷದ ನಂತರ ಗ್ರಾಮದೇವತೆ ದ್ಯಾಮವ್ವ ದೇವಿಯ ಜಾತ್ರೆಯ ವೈಭವ ಮರುಕಳಿಸುತ್ತಿದೆ. ಸಂಪ್ರದಾಯಬದ್ಧ ಆಚರಣೆಗೆ ಕೆಲ ನಿಬಂಧನೆ ಹಾಕಲಾಗಿದೆ. ಜಾತ್ರೆಯ ಮೊದಲ ದಿನ ಪಟ್ಟಣದ ಸುತ್ತ ಹಾಲು-ತುಪ್ಪ ಎರೆದು ದೇವಿಗೆ ಪೂಜೆ ಸಲ್ಲಿಸಿ ಕಂಕಣ ಕಟ್ಟಲಾಗುತ್ತದೆ. ನಂತರ ಎಲ್ಲ ದೇವಸ್ಥಾನಗಳಲ್ಲಿ ನಂದಾದೀಪ ಬೆಳಗಿಸಲಾಗುತ್ತದೆ. ಹೀಗೆ ನಿತ್ಯ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿವೆ.ಈರಣ್ಣ ಸೊಬರದದ್ಯಾಮವ್ವ ದೇವಿ ದೇವಸ್ಥಾನ ಸಮಿತಿ ಕಾರ್ಯದರ್ಶಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net