

ಹುಬ್ಬಳ್ಳಿ: ಮಳೆಯ ಅಭಾವದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದು ನಾನು ಪ್ರತಿನಿಧಿಸುವ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳನ್ನು ಬರ ಪೀಡಿತ ಜಿಲ್ಲೆಗಳೆಂದು ಸರ್ಕಾರ ಘೊಷಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಮೂರು ಜಿಲ್ಲೆಗಳಲ್ಲಿ ಕೆಲವು ತಾಲೂಕುಗಳು ಭೀಕರ ಬರಗಾಲದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಸರ್ಕಾರ ಗುರುತಿಸದಿರುವುದು ನನ್ನ ಗಮನಕ್ಕೆ ಬಂದಿದೆ. ಹಲವು ತಾಲೂಕುಗಳಲ್ಲಿ ಮುಂಗಾರು ಬಿತ್ತನೆಯೇ ಆಗಿಲ್ಲ. ಅಗತ್ಯವಿದ್ದಾಗ ಮಳೆ ಕೊರತೆಯಿಂದಾಗಿ ಮುಂಗಾರು ಬಿತ್ತನೆಯ ಬೆಳೆ ಸಹ ಫಲಪ್ರದವಾಗಿಲ್ಲ ಎಂದು ಹೇಳಿದ್ದಾರೆ.
ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಅನ್ನದಾತರ ಬದುಕಿಗೆ ಬರೆ ಎಳೆದಂತಾಗಿದೆ. ರೈತರು ಅಪಾರ ನಷ್ಟ ಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ್ದಾರೆ, ಸಾಲ ಶೂಲ ಮಾಡಿ ಬಿತ್ತನೆ ಬೀಜ, ಗೊಬ್ಬರ ಖರೀದಿಸಿ ಭೂ ತಾಯಿಯ ಮಡಿಲಿಗೆ ಹಾಕಿ ಬೆಳೆ ಬರದೇ ಕಂಗೆಟ್ಟಿದ್ದಾರೆ. ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳು ಈ ಪರಿಸ್ಥಿತಿಯನ್ನು ಗುರುತಿಸಿ ಸಣ್ಣ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.