ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಗಂಭೀರ

dc
Published on

ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಅಂದುಕೊಂಡಿದ್ದಕ್ಕಿಂತ ಹೆಚ್ಚು ಗಂಭೀರವಾಗಿದೆಯೆಂದು ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳೇ ಹೇಳಿದ್ದಾರೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಧಾರವಾಡ ಜಿಲ್ಲೆಗೆ ಆಗಮಿಸಿದ ಕೇಂದ್ರ ಬರ ಅಧ್ಯಯನ ತಂಡದ ಜತೆಗಿದ್ದ ಅವರು, ಶನಿವಾರ ಸಂಜೆ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇಂದ್ರ ತಂಡವು ಧಾರವಾಡ ಜಿಲ್ಲೆಯ ಹಾರೋಬೆಳವಡಿ, ಅಮ್ಮಿನಬಾವಿ, ಗೋಕುಲ, ರಾಯನಾಳ ಗ್ರಾಮದಲ್ಲಿ ಎರಡೂವರೆ ತಾಸು ಬರ ಪರಿಸ್ಥಿತಿಯನ್ನು ಅವಲೋಕಿಸಿದೆ. ಜಿಲ್ಲೆಯ ಬರ ಪರಿಸ್ಥಿತಿಯನ್ನು ನಾವು ಮನದಟ್ಟು ಮಾಡಿದ್ದೇವೆ. ಉದ್ದು, ಹೆಸರು ಬೆಳೆದವರು ಕಟಾವು ಮಾಡಿದ್ದಾರೆ. ಸೋಯಾಬೀನ್, ಈರುಳ್ಳಿ, ಮೆಣಸಿನಕಾಯಿ, ಶೇಂಗಾ ಬೆಳೆ ಕಟಾವು ಮಾಡಿರಲಿಲ್ಲ. ಬೆಳೆ ನಷ್ಟವಾಗಿರುವುದು ಕೇಂದ್ರ ತಂಡದ ಗಮನಕ್ಕೆ ಬಂದಿದೆ ಎಂದು ಹೇಳಿದರು.

190 ಕೋಟಿ ರೂ. ಹಾನಿ ಪ್ರಸ್ತಾವನೆ: ಜಿಲ್ಲೆಯಲ್ಲಿ 1.44 ಲಕ್ಷ ಹೆಕ್ಟೇರ್ ಕೃಷಿ ಹಾಗೂ 21 ಸಾವಿರಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಎನ್​ಡಿಆರ್​ಎಫ್ ಮಾರ್ಗಸೂಚಿ ಪ್ರಕಾರ 190 ಕೋಟಿ ರೂ. ಬೆಳೆ ಹಾನಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಸಧ್ಯದ ಮಟ್ಟಿಗೆ ಹುಬ್ಬಳ್ಳಿ-ಧಾರವಾಡ ಅವಳಿನಗರ ಹಾಗೂ ಜಿಲ್ಲೆಗೆ ಕುಡಿಯುವ ನೀರು ಹಾಗೂ ಮೇವಿನ ಕೊರತೆ ಇಲ್ಲ ಎಂದು ತಿಳಿಸಿದರು.

ಬರ ಪೀಡಿತ ತಾಲೂಕುಗಳೆಂದು ಘೊಷಣೆಯಾಗದ ಕಲಘಟಗಿ, ಅಳ್ನಾವರ ಹಾಗೂ ಅಣ್ಣಿಗೇರಿ ತಾಲೂಕುಗಳಲ್ಲೂ ಬರ ಪರಿಸ್ಥಿತಿ ಇದೆ ಎಂದು ಮನದಟ್ಟು ಮಾಡಿದ್ದೇವೆ. ಸೆಪ್ಟೆಂಬರ್​ನಲ್ಲಾದ ಮಳೆ ಪ್ರಮಾಣವನ್ನು ಗಮನಿಸಿ ಕೇಂದ್ರದ ಮಾರ್ಗಸೂಚಿಯಂತೆ ಈ ತಾಲೂಕುಗಳನ್ನು ಬರ ಪೀಡಿತವೆಂದು ಘೊಷಣೆ ಮಾಡಲು ಅವಕಾಶವಿದೆ ಎಂದು ಅಭಿಪ್ರಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net