ಕುಬ್ಜ ಕ್ರೀಡಾಪಟು ದೇವಪ್ಪ ಮೋರೆಗೆ ಅದ್ದೂರಿ ಸ್ವಾಗತ

KUBJA DEVAPPA
Published on

ಕಲಘಟಗಿ: ಜರ್ಮನ್​ನಲ್ಲಿ ಇತ್ತೀಚೆಗೆ ಆಯೋಜಿಸಿದ್ದ 8ನೇ ವಿಶ್ವ ಕುಬ್ಜರ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕ ಪಡೆದ ದೇವಪ್ಪ ಮೋರೆ ಅವರನ್ನು ತಾಲೂಕಿನ ಕಾಡನಕೊಪ್ಪದಲ್ಲಿ ಮಂಗಳವಾರ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಬಾಲ್ಯದಿಂದಲೂ ಕುಬ್ಜರಾಗಿರುವ ದೇವಪ್ಪ ಮೋರೆಯವರ ನಿರಂತರ ಶ್ರಮದಿಂದಾಗಿ 8ನೇ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತ ಪರವಾಗಿ 60 ಮೀಟರ್ ಓಟದ ಸ್ಪರ್ಧೆಯಲ್ಲಿ 10.80 ಸೆಕೆಂಡ್ ಹಾಗೂ 100 ಮೀಟರ್ ಓಟದ ಸ್ಪರ್ಧೆಯಲ್ಲಿ 18.80 ಸೆಕೆಂಡ್​ಗಳಲ್ಲಿ ಕ್ರಮಿಸಿ ಚಿನ್ನದ ಪದಕ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ತರಬೇತುದಾರ ಶಿವಾನಂದ ಗುಂಜಾಳ ಮಾತನಾಡಿ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬುದಕ್ಕೆ ಕುಬ್ಜ ಕ್ರೀಡಾಪಟು ಮೋರೆ ಸಾಕ್ಷಿಯಾಗಿದ್ದಾರೆ ಎಂದರು.

ಜಿಪಂ ಮಾಜಿ ಸದಸ್ಯ ವೈ.ಬಿ. ದಾಸನಕೊಪ್ಪ ಮಾತನಾಡಿ, ದೇವಪ್ಪ ಮೊದಲಿನಿಂದಲೂ ಕ್ರೀಡೆಯಲ್ಲಿ ಆಸಕ್ತಿವುಳ್ಳವರಾಗಿದ್ದು, ಅವರ ಈ ಸಾಧನೆ ಯುವಕರಿಗೆ ಮಾದರಿಯಾಗಿದೆ ಎಂದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಪ್ರಕಾಶ ಧೂಪದ ಮಾತನಾಡಿ, ತಾಲೂಕಿನಲ್ಲಿ ಕ್ರೀಡಾಪಟುಗಳಿಗೆ ಅವಕಾಶ ಕಡಿಮೆ ಇದ್ದ ಸಂದರ್ಭದಲ್ಲೂ ದೇವಪ್ಪ ಮೋರೆ ಅವರ ಸಾಧನೆ ಶ್ಲಾಘನೀಯ ಎಂದರು.

ಕ್ರೀಡಾಪಟು ಮೋರೆ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕಾಡನಕೊಪ್ಪದ ಗ್ರಾಮಸ್ಥರು ಆರತಿ ಬೆಳಗಿ ಹೆಗಲ ಮೇಲೆ ಕೂರಿಸಿಕೊಂಡು, ವಿವಿಧ ವಾದ್ಯ ಮೇಳಗಳೊಂದಿಗೆ ಅದ್ದೂರಿಯಾಗಿ ಬರಮಾಡಿಕೊಂಡರು. ಖಂಡು ಮೋರೆ, ಪೀರಪ್ಪ ಮಾಂಡೆಕರ, ಗುರುಪಾದ ಉಳ್ಳಾಗಡ್ಡಿ, ನಾಗರಾಜ ಶಿಂಧೆ, ಶಿವಾಜಿ ಜಾಧವ, ದೇವಪ್ಪ ಖದಂ, ಗಣೇಶ ಕೊಳೆನವರ, ಬಸವರಾಜ ಜಾಧವ, ಲಕ್ಷ್ಮಣ ಮೋರೆ, ರಮೇಶ ದಾವುನವರ, ವಿಠ್ಠಲ ನರೇಂದ್ರ, ಕೃಷ್ಣಾ ರಾಮನಕೊಪ್ಪ, ಮಹಾದೇವ ಹುಬ್ಬಳ್ಳಿ, ಮಂಜುನಾಥ ತಡಸ, ಕೇದಾರಿ ಮೋರೆ, ಮಂಜುನಾಥ ಮೋರೆ, ಪರಶುರಾಮ ತಡಸ, ಅಶೋಕ ಸಂತಬಾನವರ, ಪುಂಡಲೀಕ ಜಾಧವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net