ದ್ವಾರಕೀಶ್‌ಗೂ ಮೈಸೂರಿಗೂ ಅವಿನಾಭಾವ ಸಂಬಂಧ

Dwarakish
Published on

ಮೈಸೂರು: ನಾಡುಕಂಡ ಅಪ್ರತಿಮ ನಟ, ನಿರ್ಮಾಪಕ ದ್ವಾರಕೀಶ್ ಅವರಿಗೂ ಮೈಸೂರಿಗೆ ಅವಿನಾಭಾವ ಸಂಬಂಧ. ಮೈಸೂರಿನಿಂದಲೇ ಚಿತ್ರರಂ ಗಕ್ಕೆ ಧುಮುಕಿದ ಅವರು ಕನ್ನಡನಾಡು ಎಂದೂ ಮರೆಯದ ‘ಪ್ರಚಂಡ ಕುಳ್ಳ’ನಾಗಿ ಕನ್ನಡಿಗರ ಹೃದಯದಲ್ಲಿ ಸದಾ ನೆಲೆನಿಂತಿದ್ದಾರೆ.

ದ್ವಾರಕೀಶ್ 19 ಆಗಸ್ಟ್ 1942 ರಂದು ಹುಣಸೂರಿನಲ್ಲಿ ಶಾಮರಾವ್-ಜಯಮ್ಮ ದಂಪತಿಗೆ ಮಗನಾಗಿ ಜನಿಸಿದರು. ಮೈಸೂರಿನ ಶಾರದಾ ವಿಲಾಸ ಮತ್ತು ಬನುಮಯ್ಯ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪೂರ್ಣಗೊಳಿಸಿದ ಅವರು ನಂತರ ಸಿಪಿಸಿ ಪಾಲಿಟೆಕ್ನಿಕ್‌ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್ ಪೂರ್ಣಗೊಳಿಸಿದರು. ವಿದ್ಯಾಭ್ಯಾಸ ಪೂರ್ಣಗೊಳಿಸಿದ ನಂತರ ಅವರು ಸೋದರನ ಜತೆ ಸೇರಿ ನಗರದಲ್ಲಿ ಭಾರತ್ ಆಟೋ ಸ್ಪೇರ್ ಸ್ಟೋರ್ ಪ್ರಾರಂಭಿಸಿದರು. 1963ರಲ್ಲಿ ಅವರು ವ್ಯಾಪಾರ ಬಿಟ್ಟು ಸಿನೆಮಾ ರಂಗ ಪ್ರವೇಶಿಸಿದರು.

ಮೈಸೂರಿನಲ್ಲಿ ದ್ವಾರಕೀಶ್ ಕುಟುಂಬ ಇಟ್ಟಿಗೂಡಿನಲ್ಲಿ ನೆಲೆಸಿದ್ದರು. ಸಿನಿಮಾ ರಂಗಕ್ಕೆ ಕಾಲಿರಿಸಿದ ನಂತರ ಅವರು ಬೆಂಗಳೂರಿನಲ್ಲಿ ನೆಲೆಸಿದರು. ಸಿನಿಮಾ ಚಿತ್ರೀಕರಣ, ಮೈಸೂರಿನ ಪ್ರೀಮಿಯರ್ ಸ್ಟೂಡಿಯೋದಲ್ಲಿ ಚಿತ್ರೀಕರಣ ಕಾರಣಕ್ಕೆ ಅವರು ಆಗಿಂದಾಗೆ ಮೈಸೂರಿಗೆ ಭೇಟಿ ನೀಡುತ್ತಿದ್ದರು. ನಟ ವಿಷ್ಣುವರ್ಧನ್ ಅವರೊಂದಿಗೆ ನಟಿಸಿದ ‘ಆಪ್ತಮಿತ್ರ’ ಚಿತ್ರ ಸೇರಿದಂತೆ ಅವರ ಹಲವು ಚಿತ್ರಗಳು ಮೈಸೂರಿನಲ್ಲಿ ಚಿತ್ರೀಕರಣಗೊಂಡಿದೆ.

ದ್ವಾರಕೀಶ್ ಅವರ ಬಾಲ್ಯದ ಸ್ನೇಹಿತ, ಹಿರಿಯ ರಂಗಕರ್ಮಿ ರಾಜಶೇಖರ ಕದಂಬ ಅವರು ದ್ವಾರಕೀಶ್ ಅವರೊಂದಿಗಿನ ಒಡನಾಟ ವನ್ನು ‘ವಿಜಯವಾಣಿ’ಯೊಂದಿಗೆ ಈ ರೀತಿ ಹಂಚಿಕೊಂಡಿದ್ದಾರೆ. ‘ದ್ವಾರಕೀಶ್ ನನ್ನ ಬಾಲ್ಯದ ಸ್ನೇಹಿತ. ನಾನು ಹಾಗೂ ದ್ವಾರಕೀಶ್ ಸಿಪಿಸಿ ಪಾಲಿಟೆಕ್ನಿಕ್‌ನಲ್ಲಿ ಓದಿದೆವು. ಸಿಪಿಸಿ ಪಾಲಿಟೆಕ್ನಿಕ್‌ನಲ್ಲಿ ಅವರು ನನಗಿಂತ ಒಂದು ವರ್ಷ ಹಿರಿಯ ವಿದ್ಯಾರ್ಥಿಯಾಗಿದ್ದರು. ಅವರ ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ನಗರದಲ್ಲಿ ಅವರ ಸಹೋದರನೊಂದಿಗೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಪ್ರಾರಂಭಿಸಿದ್ದರು. ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದ ಸಂದರ್ಭದಲ್ಲಿಯೇ ಅವರನ್ನು ಕನ್ನಡ ಚಿತ್ರರಂಗಕ್ಕೆ ಅವರ ಸೋದರ ಮಾವ, ಚಿತ್ರ ಸಾಹಿತಿ ಹುಣಸೂರು ಕೃಷ್ಣಮೂರ್ತಿ ಕರೆತಂದರು. ದ್ವಾರಕೀಶ್ ಅವರನ್ನು ಸೋದರ ಮಾವ ಅವರು ಚಿತ್ರರಂಗಕ್ಕೆ ಕರೆತಂದರೂ ನಂತರ ದ್ವಾರಕೀಶ್ ಅವರು ತಮ್ಮದೇ ಆದ ಪ್ರತಿಭೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದರು’ ಎಂದು ರಾಜಶೇಖರ ಕದಂಬ ನೆನಪಿನ ಬುತ್ತಿಯನ್ನು ತೆರೆದಿಟ್ಟರು.

ಶಾಲಾ, ಕಾಲೇಜು ದಿನಗಳಲ್ಲಿ ದ್ವಾರಕೀಶ್ ರಂಗಭೂಮಿಯೊಂದಿಗೆ ನಂಟು ಬೆಳೆಸಿಕೊಳ್ಳದೆ ಇದ್ದರೂ ಅವರಲ್ಲಿ ಅದ್ಭುತವಾದ ನಟನನೊಬ್ಬ ಇದ್ದ. ಅದನ್ನು ಗುರುತಿಸಿ ಹುಣಸೂರು ಕೃಷ್ಣಮೂರ್ತಿ ಅವರನ್ನು ಸಿನಿಮಾ ರಂಗಕ್ಕೆ ಕರೆತಂದರು. ಸಿನಿಮಾ ರಂಗದಲ್ಲಿ ಅವರು ಉತ್ತುಂಗಕ್ಕೆ ಏರಿದರೂ ಅವರು ಬಾಲ್ಯದ ಗೆಳೆಯರು ಹಾಗೂ ನಡೆದು ಬಂದ ಹಾದಿಯನ್ನು ಅವರು ಎಂದಿಗೂ ಮರೆಯಲಿಲ್ಲ. ನಾವು ಹಮ್ಮಿಕೊಳ್ಳುತ್ತಿದ್ದ ರಂಗ ಚಟುವಟಿಕೆಯಲ್ಲಿ ಅವರು ಅತಿಥಿಯಾಗಿ ಪಾಲ್ಗೊಂಡು ರಂಗಭೂಮಿಗೆ ಅವರು ಉತ್ತೇಜನ ನೀಡುತ್ತಿದ್ದರು. ಅವರು ಎಷ್ಟೇ ಎತ್ತರಕ್ಕೆ ಏರಿದರೂ ಅವರು ಎಲ್ಲರೊಂದಿಗೂ ಬೆರೆಯುವ ಗುಣವನ್ನು ಹೊಂದಿದ್ದರು ಎಂದು ನೆನಪಿಸಿಕೊಂಡರು.

ದ್ವಾರಕೀಶ್ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಯ ಪರಮ ಭಕ್ತರಾಗಿದ್ದರು. ಅವರು ಆಗಿಂದಾಗೆ ಮಂತ್ರಾಲಯಕ್ಕೆ ಭೇಟಿ ನೀಡುತ್ತಿದ್ದರು. ಒಮ್ಮೆ ಅಚಾನಕ್ಕಾಗಿ ನಾನು ಹಾಗೂ ಅವರು ಮಂತ್ರಾಲಯದಲ್ಲಿ ಭೇಟಿ ಮಾಡಿಯಾದೆವು. ಅಲ್ಲಿ ಅವರೊಂದಿಗೆ ಒಂದಷ್ಟು ಹೊತ್ತು ಕಳೆದ ನೆನಪು ಇಂದಿಗೂ ಹಸಿರಾಗಿದೆ ಎಂದರು.

ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು

ವಿಆರ್‌ಎಲ್ ಸಮೂಹ ಸಂಸ್ಥೆಗಳ ಛೇರ್ಮನ್ ಡಾ.ವಿಜಯ ಶಂಕೇಶ್ವರ ಅವರು 2004ರಲ್ಲಿ ಕನ್ನಡ ನಾಡು ಪಾರ್ಟಿ ಸ್ಥಾಪಿಸಿದಾಗ ಅವರೊಂದಿಗೆ ಪಕ್ಷ ಸಂಘಟಿಸುವ ಕಾರ್ಯದಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಮೈಸೂರು ಜಿಲ್ಲೆಯಲ್ಲಿ ಅವರು ಪಕ್ಷವನ್ನು ಕಟ್ಟಿ ಬೆಳೆಸುವ ಜವಾಬ್ದಾರಿ ವಹಿಸಿಕೊಂಡಿದ್ದರು. ಅಲ್ಲದೆ, ಹುಟ್ಟೂರು ಹುಣಸೂರಿನಲ್ಲಿ ಚುನಾವಣೆಯನ್ನು ಸಹ ಎದುರಿಸಿದ್ದರು. 2004ರ ವಿಧಾನಸಭಾ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಕನ್ನಡ ನಾಡು ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಚುನಾವ ಣೆಯಲ್ಲಿ ಜೆಡಿಎಸ್‌ನ ಜಿ.ಟಿ. ದೇವೇಗೌಡ 60,258 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ ದ್ವಾರಕೀಶ್ 2,265 ಮತಗಳನ್ನು ಪಡೆದು ಸೋಲು ಕಂಡರು. ತವರು ಕ್ಷೇತ್ರದಲ್ಲಿ ಅವರು ಸ್ಪರ್ಧಿಸಿದರೂ ಜನರು ಅವರ ಕೈಹಿಡಿಯಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net