

ಶ್ರೀನಿವಾಸಪುರ: ಡಿವಿಜಿ ಅವರು ವಿದ್ವತ್ತು ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದರು. ಸಾಹಿತ್ಯ ಹಾಗೂ ಪತ್ರಿಕಾ ಕ್ಷೇತ್ರಕ್ಕೆ ಅವರು ಸಲ್ಲಿಸಿರುವ ಸೇವೆ ಸಾರ್ವಕಾಲಿಕ ಮಾದರಿಯಾಗಿದೆ ಎಂದು ಉಪನ್ಯಾಸಕ ಹಾಗೂ ಸಾಹಿತಿ ಎನ್.ಶಂಕರೇಗೌಡ ಹೇಳಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಡಿವಿಜಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ಸರ್ವಜ್ಞ ಎನಿಸಿಕೊಂಡಿರುವ ಡಿವಿಜಿ ಜೀವನದ ಕಷ್ಟಗಳ ನಡುವೆ ಪ್ರಾಮಾಣಿಕತೆಗೆ ಎಂದೂ ಬೆನ್ನು ತೋರಿಸಿದವರಲ್ಲ. ತಾವು ನಂಬಿದ ತತ್ವಗಳಿಗೆ ಬದ್ಧರಾಗಿದ್ದರು. ಮಾದರಿ ಜೀವನ ನಡೆಸಿದರು ಎಂದರು.
ಡಿವಿಜಿ ಅವರಂಥ ಸಾಹಿತ್ಯ ದಿಗ್ಗಜರ ಬದುಕು ಹಾಗೂ ಬರಹ ಕುರಿತು ಯುವ ಸಮುದಾಯದಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶಾಲಾ&ಕಾಲೇಜುಗಳಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ಲೇಖಕಿ ಮಾಯಾ ಬಾಲಚಂದ್ರ ಮಾತನಾಡಿ, ಮಂಕುತಿಮ್ಮನ ಕಗ್ಗ ಆಧುನಿಕ ಭಗವದ್ಗೀತೆ ಎಂದು ಹೆಸರಾಗಿದೆ. ಕಗ್ಗ ಸಮಾಜದ ಕಣ್ಣು ತೆರೆಸುತ್ತದೆ ಹಾಗೂ ಆದರ್ಶ ಬದುಕಿನ ದರ್ಶನ ಮಾಡಿಸುತ್ತದೆ. ಪ್ರತಿ ಪದ್ಯದಲ್ಲೂ ಜೀವನದ ಅನುಭವ ತುಂಬಿ ತುಳುಕುತ್ತದೆ. ಬದುಕಿನ ತತ್ವ ಹಾಗೂ ವೇದಾಂತ ಸಾರವನ್ನು ತಿಳಿಸುತ್ತದೆ ಎಂದರು.
ಡಿವಿಜಿ ಅವರ ಬದುಕು ತೆರೆದ ಪುಸ್ತಕವಿದ್ದಂತೆ. ಜೀವನದ ಉದ್ದಕ್ಕೂ ಸಮಾಜಕ್ಕೆ ಉಪಯುಕ್ತವಾಗಿ ಬದುಕಿದರು. ಸಮಾಜಕ್ಕೆ ಬೇಕಾದ್ದನ್ನು ನೀಡಿದರು. ಸಮಾಜದ ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾದರು. ಅವರ ಸ್ಮರಣೆಯಿಂದ ಹೊಸ ಚೈತನ್ಯ ಸಂಚಾರವಾಗುತ್ತದೆ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಚಂದ್ರಶೇಖರ್, ಆಂಜನೇಯ, ಅರುಣ್ ಕುಮಾರ್, ಡಿ.ಆರತಿ, ಸುವರ್ಣ ಲಕ್ಷಿ$್ಮ, ಮಮತಾ ರಾಣಿ, ಜಿ.ವಿ.ಚಂದ್ರಪ್ಪ, ವೆಂಕಟೇಶ ಬಾಬು ವೆಂಕಟರವಣಪ್ಪ ಇದ್ದರು.